ಮುಂಬೈ: ರಿಯಲ್ ಹೀರೋ ಸೋನು ಅವರನ್ನು ನೋಡಲು ಅಭಿಮಾನಿಯೊಬ್ಬರು ಬರಿಗಾಲಿನಲ್ಲಿ ಹೈದರಾಬಾದ್‍ನಿಂದ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಡರ್ ಪಾದಯಾತ್ರೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸೋನು ಅವರ ಅಭಿಮಾನಿ ವೆಂಕಟೇಶ್ ಹೈದರಾಬಾದ್ ಮೂಲದವನು. ಈತನಿಗೆ ಸೋನು ಸೂದ್ ಕಂಡರೆ ಅಪಾರ ಗೌರವ. ಹೀಗಾಗಿ ಸೋನು ಅವರನ್ನು ಭೇಟಿ ಮಾಡಲು ಬರಿಗಾಲಿನಲ್ಲಿ ಹೈದರಾಬಾದ್‍ನಿಂದ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾನೆ. ಈತನ ಅಭಿಮಾನ ಕಂಡು ಸೋನು ಸೂದ್ ಖುಷಿ ಆಗಿದ್ದಾರೆ ಎಂಬುದೇನೋ ನಿಜ. ಆದರೆ ಬೇರೆ ಯಾರೂ ಹೀಗೆ ಮಾಡಬೇಡಿ ಎಂದು ತಮ್ಮ ಅಭಿಮಾನಿ ಬಳಗಕ್ಕೆ ಅವರು ಬುದ್ಧಿಮಾತು ಹೇಳಿದ್ದಾರೆ.

 

ನನ್ನನ್ನು ಭೇಟಿಯಾಗಲು ವೆಂಕಟೇಶ್ ಹೈದರಾಬಾದ್‍ನಿಂದ ಮುಂಬೈವರೆಗೆ ಬರಿಗಾಲಿನಲ್ಲಿ ನಡೆದುಕೊಂಡು ಬಂದಿದ್ದಾನೆ. ಅವನಿಗೆ ವಾಹನದ ವ್ಯವಸ್ಥೆ ಮಾಡಿದರೂ ಕೂಡ ಅವನು ಅದನ್ನು ಒಪ್ಪಲಿಲ್ಲ. ಅವನು ನನಗೆ ಸ್ಫೂರ್ತಿದಾಯಕವಾಗಿದ್ದಾನೆ. ಆದರೆ ಬೇರೆ ಯಾರೂ ಕೂಡ ಈ ರೀತಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಕಷ್ಟವನ್ನು ತೆಗೆದುಕೊಳ್ಳಲು ನಾನು ಪ್ರೇರಣೆ ನೀಡುವುದಿಲ್ಲ ಎಂದು ಸೋನು ಸೂದ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ನಟ ಸೋನು ಸೂದ್ ಅವರು ಲಕ್ಷಾಂತರ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಕಳೆದ ವರ್ಷ ಲಾಕ್‍ಡೌನ್ ಆರಂಭ ಆದಾಗಿನಿಂದಲೂ ಅವರು ಹಲವು ಬಗೆಯಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ. ಹೀಗಾಗಿ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ನೂರಾರು ಬಗೆಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವವರಿದ್ದಾರೆ. ಸೂದ್ ಚಾರಿಟಿ ಫೌಂಡೇಶನ್ ಮೂಲಕ ಲಕ್ಷಾಂತರ ಜನರಿಗೆ ಅವರು ನೆರವಾಗಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿಸುವುದು, ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಸುವುದು, ಹಸಿದವರಿಗೆ ಉಚಿತವಾಗಿ ಊಟ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಸೋನು ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ತಕ್ತವಾಗುತ್ತಿದೆ.

The post 700 ಕಿ.ಮೀ ಪಾದಯತ್ರೆ ಮಾಡಿದ ಅಭಿಮಾನಿ – ಮೆಚ್ಚುಗೆ ಜೊತೆಗೆ ಸೋನು ಬುದ್ಧಿವಾದ appeared first on Public TV.

Source: publictv.in

Source link