ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ, ವಿಶ್ವದ ನಂಬರ್​​ 1 ಶ್ರೀಮಂತ ಕ್ರಿಕೆಟ್ ಸಂಸ್ಥೆ..! ರಾಷ್ಟ್ರೀಯ ತಂಡದ ಆಟಗಾರರಿಂದ ಹಿಡಿದು ಸ್ಥಳೀಯ ಆಟಗಾರರವರೆಗೂ ಹೆಚ್ಚು ವೇತನ ಪಾವತಿಸುವ ಮಂಡಳಿ ಬಿಸಿಸಿಐ.! ಹಿಂಗಿದ್ದ ಮಂಡಳಿ ಇದೀಗ ದೇಶಿ ಕ್ರಿಕೆಟಿಗರನ್ನು ಮೃತ್ಯುಕೂಪಕ್ಕೆ ತಳ್ಳುವಂತ ಕೆಲಸ ಮಾಡ್ತಿದೆ ಅನ್ನೋ ಆರೋಪಕ್ಕೆ ಗುರಿಯಾಗಿದೆ. ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿರುವ ಐಪಿಎಲ್​​​​ಗೇ BCCI ಹೆಚ್ಚು ಗಮನ ನೀಡ್ತಿರೋ ಬಿಸಿಸಿಐ, ಪ್ರಥಮ ದರ್ಜೆ ಕ್ರಿಕೆಟ್ ಅನ್ನೇ​ ನಂಬಿಕೊಂಡಿರುವ ನೂರಾರು ಕ್ರಿಕೆಟಿಗರಿಗೆ ಮರೆತಿದ್ಯಾ ಅನ್ನೋ ಚರ್ಚೆ ಇದೀಗ ಆರಂಭವಾಗಿದೆ.

ಡೆಡ್ಲಿ ವೈರಸ್​​ನಿಂದ ಶಾರ್ಟ್​​ ಬ್ರೇಕ್​​ ಪಡೆದಿದ್ದ 14ನೇ ಆವೃತ್ತಿಯ IPL ಪುನಾರಂಭಕ್ಕೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಭಾರತದಲ್ಲಿ ಕೊರೊನಾ ತನ್ನ ಜಾಲವನ್ನ ವಿಸ್ತರಿಸಿಕೊಳ್ತಿರುವ ಹಿನ್ನೆಲೆ, ಮೊಟುಕುಗೊಂಡಿದ್ದ ಕಲರ್​ಫುಲ್​​​ ಟೂರ್ನಿಯನ್ನ ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ, ಮತ್ತೆ UAEನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಆದ್ರೆ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕರೆದ ಮಹತ್ವದ ಮೀಟಿಂಗ್​ನಲ್ಲಿ ಶ್ರೀಮಂತ ಲೀಗ್​ ಮೇಲಿನ ವ್ಯಾಮೋಹದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರೋ ದೇಶಿ ಕ್ರಿಕೆಟಿಗರನ್ನೇ ಮರೆತು ಬಿಟ್ಟಿದ್ದಾರೆ..!

700 ರಣಜಿ ಆಟಗಾರರಿಗೆ ನೀಡಿಲ್ಲ ಪರಿಹಾರ ಧನ

ಮಹಾಮಾರಿ ಕೊರೊನಾ ಕಾರಣದಿಂದ 2020ರ ಆವೃತ್ತಿಯ ರಣಜಿ ಟೂರ್ನಿ ಸಂಪೂರ್ಣ ರದ್ದಾಗಿತ್ತು. ಇದೀಗ 2ನೇ ಅಲೆಯಲ್ಲಿ ತನ್ನ ಕಬಂದ ಬಾಹುವನ್ನ ಇನ್ನಷ್ಟು ಚಾಚಿರುವ ಕೊರೊನಾ, ಈ ವರ್ಷ ಕೂಡ ರಣಜಿ ಆಯೋಜನೆಗೆ ಬ್ರೇಕ್​ ಹಾಕಿದೆ. ಹೀಗಾಗಿ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸುಮಾರು 700ಕ್ಕೂ ಅಧಿಕ ದೇಶಿ ಕ್ರಿಕೆಟಿಗರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಳೆದ ವರ್ಷ ರಣಜಿ, ರದ್ದು ಮಾಡಿದ್ದಕ್ಕಾಗಿ ಪರಿಹಾರ ನೀಡುವುದಾಗಿ ಬಿಸಿಸಿಐ ಘೋಷಿಸಿತ್ತು. ಆದರೆ ಒಂದು ವರ್ಷ ಕಳೆದರೂ ಬಿಸಿಸಿಐ ನಯಾಪೈಸೆ ಬಿಡುಗಡೆ ಮಾಡದಿರೋದು ಆಟಗಾರರ ಆತಂಕಕ್ಕೆ ಕಾರಣವಾಗಿದೆ.

ಬಿಸಿಸಿಐನಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ
ಸಾಮಾನ್ಯ ಸಭೆಯಲ್ಲೂ ನಡೆದಿಲ್ಲ ಪರಿಹಾರದ ಬಗ್ಗೆ ಚರ್ಚೆ

ದೇಶಿ ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ ಚಾನ್ಸ್​ ಗಿಟ್ಟಿಸಿಕೊಳ್ಳೊದು ಅಪರೂಪದಲ್ಲಿ ಅಪರೂಪ..! ಒಂದು ಬಾರಿ ಟೀಮ್​ ಇಂಡಿಯಾಗೆ ಜಂಪ್​ ಮಾಡಿದ್ರೆ, ಅವರ ಬದುಕೇ ಬದಲಾಗುತ್ತೆ. ಆದರೆ ಇರುವ ಪೈಪೋಟಿ ಎಲ್ಲರಿಗೂ ಈ ಅವಕಾಶ ಮಾಡಿಕೊಡಲ್ಲ. ಆದರೂ ಕ್ರಿಕೆಟ್ ಅನ್ನೇ ಕನಸಾಗಿಸಿಕೊಂಡು ಬದುಕುತ್ತಿರುವ ನೂರಾರು ಕ್ರಿಕೆಟಿಗರಿಗೆ ದೇಶಿ ಕ್ರಿಕೆಟ್ಟೇ ಜೀವನಕ್ಕೆ ಆಧಾರವಾಗಿದೆ. ಸಧ್ಯ ಕೊರೊನಾ ಈ ಕ್ರಿಕೆಟ್​​ ನಂಬಿ ಬದುಕುತ್ತಿರುವ ಆಟಗಾರರನ್ನ ಸಂಕಷ್ಟಕ್ಕೆ ದೂಡಿದೆ.

ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಅವರೆಲ್ಲರೂ ಶನಿವಾರ ನಡೆದ ಬಿಸಿಸಿಐ ಸಭೆಯಿಂದ ಸಹಜವಾಗೇ ಪರಿಹಾರದ ನಿರೀಕ್ಷೆ ಮಾಡಿದ್ರು. ಆದರೆ ಸಭೆ ಮಾತ್ರ ಐಪಿಎಲ್​​ ಮತ್ತು ಟಿ-20 ವಿಶ್ವಕಪ್​ ಬಗೆಗಿನ ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದು ಶಾಕ್​ ನೀಡಿದೆ. ಇದರ ಬೆನ್ನಲ್ಲೇ ಎಲ್ಲರನ್ನೂ ಸಮಾನಾಗಿ ಕಾಣಬೇಕಾದ ಬಿಸಿಸಿಐ, 2500 ಕೋಟಿ ನಷ್ಟ ತುಂಬಿಸಿಕೊಳ್ಳಲು IPL​ಗೇ ಹೆಚ್ಚು ಒಲವು ನೀಡಿ ದೇಶಿ ಆಟಗಾರರನ್ನು ನಿರ್ಲಕ್ಷಸಿರೋದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಎದ್ದಿದೆ. ಈ ತಾರತಮ್ಯ ಖಂಡಿಸಿದ ಮಾಜಿ ಕ್ರಿಕೆಟಿಗರು, ಹೆಸರಿಗಷ್ಟೇ ಶ್ರೀಮಂತ ಸಂಸ್ಥೆ, ಸಂಕಷ್ಟದಲ್ಲಿ ಕೈ ಹಿಡಿಯಲು ಹಿಂದುಳಿದಿದೆ ಎಂದಿದ್ದಾರೆ.

ಪರಿಹಾರ ಮಾತ್ರವಲ್ಲ, ವೇತನ ಕೂಡ ಪಾವತಿಸಿಲ್ಲ ಶ್ರೀಮಂತ ಸಂಸ್ಥೆ

ಕೊರೊನಾ ತಂದಿಟ್ಟಿರುವ ಬಿಕ್ಕಟ್ಟಿನಲ್ಲಿ ಬಿಸಿಸಿಐ ನಡೆ ನಿಜಕ್ಕೂ ದೇಸಿ ಕ್ರಿಕೆಟ್​ ಅನ್ನು ನಂಬಿದ್ದ ಕ್ರಿಕೆಟಿಗರಿಗೆ ನುಂಗಲಾರದ ತುತ್ತಾಗಿದೆ. ಆಟಗಾರರಿಗೆ ಪರಿಹಾರ ಮಾತ್ರವಲ್ಲ, ಇತ್ತೀಚೆಗೆ ನಡೆದ ಸಯ್ಯದ್​ ಮುಷ್ತಾಕ್​ ಅಲಿ, ವಿಜಯ್​ ಹಜಾರೆ ಮತ್ತು ಅದರ ಹಿಂದಿನ ಟೂರ್ನಿಗಳ ವೇತನ ಕೂಡ ಪಾವತಿ ಮಾಡದಿರೋದು ಕ್ರಿಕೆಟಿಗರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. IPL​​ನಲ್ಲಿ ಆಡ್ತಿರೋರು ಸ್ವಲ್ಪ ಮಟ್ಟಿಗೆ ಬಚಾವ್​ ಆಗಿದ್ರೆ, ಅಲ್ಲೋ ಆಡದವರರ ಉಳಿದವರ ಸ್ಥಿತಿ ಕೋಮಾದಲ್ಲಿದೆ.

ಆಟಗಾರರಿಗೆ ಪ್ರತೀ ಪಂದ್ಯಕ್ಕೂ ಸಿಗುತ್ತೆ 1 ಲಕ್ಷದ 40 ಸಾವಿರ

ಒಬ್ಬ ಆಟಗಾರನಿಗೆ ಒಂದು ರಣಜಿ ಪಂದ್ಯಕ್ಕೆ ಬಿಸಿಸಿಐ 1 ಲಕ್ಷದ 40 ಸಾವಿರ ವೇತನವನ್ನ ಫಿಕ್ಸ್​ ಮಾಡಿದೆ. ಅಂದ್ರೆ, ಒಂದು ಆವೃತ್ತಿಯಲ್ಲಿ ಅಂದಾಜು 12 ರಿಂದ 13 ಲಕ್ಷ ಹಣವನ್ನ ಒಬ್ಬ ಆಟಗಾರ ಗಳಿಸಬಹುದು. ಎಂಟರ ಘಟ್ಟ ಪ್ರವೇಶಿಸಿದರೆ ಇದಕ್ಕಿಂತ ಕೊಂಚ ಅಧಿಕ ವೇತನ ಸಿಗಲಿದೆ. ಇದೇ ಹಣ ದೇಶಿ ಕ್ರಿಕೆಟರ್​​ಗಳ ಪಾಲಿಗೆ ಆತ್ಮ ಸಂಜೀವಿನಿ, ಜೀವನ, ಜಿಮ್​, ತರಬೇತಿ ಈ ಮೂರಕ್ಕೂ ಇದೇ ಆಧಾರ. ಆದ್ರೆ,ಕೊರೊನಾ ಪರಿಹಾರವಿರಲಿ, ಈ ಹಿಂದಿನ ವೇತನ ಬಿಡುಗಡೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗದಿರೋದು ಅಟಗಾರರಿಗೆ ಬೇಸರ ತರಿಸಿದೆ.

ಇನ್ನು ಪರಿಹಾರ ಮತ್ತು ವೇತನ ಬಿಡುಗಡೆಯಾಗೋದ್ರ ಬಗ್ಗೆ ಚರ್ಚೆ ನಡೆಸದ ಬಿಸಿಸಿಐ ಬಿಡುವಿದ್ದಾಗ ಚರ್ಚೆ ಮಾಡೋದಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದೆ. ಈ ಹೇಳಿಕೆ ನಿಜಕ್ಕೂ ಬಿಸಿಸಿಐ ದೇಶೀಯ ಕ್ರಿಕೆಟಿಗರ ದುಃಸ್ಥಿತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂಬುದನ್ನು ತೋರುತ್ತದೆ.

ಸದ್ಯ ನಾವು ಐಪಿಎಲ್​ ಮತ್ತು ವಿಶ್ವಕಪ್​ ಆಯೋಜನೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಸದ್ಯ ದೇಶಿ ಕ್ರಿಕೆಟಿಗರ ಪರಿಹಾರದ ವಿಚಾರ ಚರ್ಚೆ ನಡೆಸಿಲ್ಲ. ಹಾಗಾಗಿ ಪರಿಹಾರ ನೀಡುವ ವಿಷಯವನ್ನು ಬೇರೆ ಸಮಯದಲ್ಲಿ ಚರ್ಚಿಸುತ್ತೇವೆ. ದೇಶೀಯ ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿ ಕುರಿತು ರಾಜ್ಯ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ’.
-ಅರುಣ್​ ಧುಮಲ್​​, ಬಿಸಿಸಿಐ ಖಜಾಂಚಿ

ಇದು ಬಿಸಿಸಿಐ ಖಜಾಂಚಿ ನೀಡಿರೋ ಹಾರಿಕೆಯ ಹೇಳಿಕೆ. ಈ ಮಾತುಗಳಿಗೆ ಇದೀಗ ಪ್ರಬಲ ಪ್ರತಿರೋಧವೂ ವ್ಯಕ್ತವಾಗ್ತಿರೋದು. ಸಾವಿರಾರು ಕೋಟಿ ನಷ್ಟವನ್ನ ತುಂಬಿಸಿಕೊಳ್ಳೋಣ ಅಂತ, ಐಪಿಎಲ್​ ಬಗ್ಗೆ ಚರ್ಚಿಸಿರೋ ಬಿಸಿಸಿಐ ಶೀಘ್ರ ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರೋ ಆಟಗಾರರ ಕೈ ಹಿಡಿಯುತ್ತಾ ಕಾದು ನೋಡಬೇಕಿದೆ.

The post 700 ಮಂದಿ ಕ್ರಿಕೆಟಿಗರನ್ನ ನಿರ್ಲಕ್ಷಿಸಿತಾ ಬಿಸಿಸಿಐ..? ದೇಸಿ ಕ್ರಿಕೆಟಿಗರಿಗೆ ಸಂಭಾವನೆ ಯಾವಾಗ..? appeared first on News First Kannada.

Source: newsfirstlive.com

Source link