ಬೆಂಗಳೂರು: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಕೊಡಲಾಗುವ ಲೈಸೋಮಲ್‌ ಅಂಫೋಟೆರಿಸಿನ್‌- ಬಿ  ((Liposomal Amphotericin -B) ಔಷಧಿಯ 75 ಸಾವಿರ ವಯಲ್ಸ್ ಖರೀದಿಗೆ ಆದೇಶ ನೀಡಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಮುಂಬೈನ ಭಾರತ್ ಸೀರಂ ಕಂಪನಿಗೆ 50 ಸಾವಿರ ವಯಲ್ಸ್ ಹಾಗೂ ಬೆಂಗಳೂರಿನ ಮೈಲಾನ್ ಫಾರ್ಮಾಸ್ಯೂಟಿಕಲ್ ಕಂಪನಿಗೆ 25 ಸಾವಿರ ವಯಲ್ಸ್ ಲೈಸೋಮಲ್ ಅಂಫೋಟೆರಿಸಿನ್‌ಖರೀದಿಗೆ ಆದೇಶ ನೀಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

 

ಈ ಎರಡೂ ಕಂಪನಿಗಳಿಗೆ ಗುರುವಾರವೇ (ಮೇ 27) ರಾಜ್ಯ ಔಷಧಿ ಖರೀದಿ ಪೂರೈಕೆ ನಿಗಮದ ವತಿಯಿಂದ ಖರೀದಿ ಆದೇಶ ನೀಡಲಾಗಿದ್ದು, ಸೀರಂ ಕಂಪನಿ ಏಳು ದಿನದಲ್ಲಿ ಹಾಗೂ ಮೈಲಾನ್ ಕಂಪನಿ ಮೂರು ದಿನದಲ್ಲಿ ಇಷ್ಟೂ ಔಷಧಿಯನ್ನು ಪೂರೈಕೆ ಮಾಡಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಆಮ್ಲಜನಕ ಸಾಂದ್ರಕ ಹಸ್ತಾಂತರ:
ಕೋವಿಡ್ ಸೋಂಕಿತರ ಪಾಲಿಗೆ ಆಪ್ತರಕ್ಷಕನಂತೆ ನೆರವಿಗೆ ಬರುತ್ತಿರುವ ‘ಆಮ್ಲಜನಕ ಸಾಂದ್ರಕ’ಗಳನ್ನು ಒದಗಿಸುವ ಕೆಲಸ ಮುಂದುವರಿದಿದ್ದು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ವಿವಿಧ ವಿಧಾನಸಭೆ ಕ್ಷೇತ್ರಗಳಿಗೆ 30 ಸಾಂದ್ರಕಗಳನ್ನು ಹಸ್ತಾಂತರಿಸಿದರು. ಇದನ್ನೂ ಓದಿ : ನಾನು ಸತ್ರೆ ಸಾಯ್ತೀನಿ ಬಿಡಿ ನಿಮಗೇನು? – ಅಧಿಕಾರಿಗಳ ಮೇಲೆ ಸೋಂಕಿತನ ದರ್ಪ

ಹೊನ್ನಾಳಿ, ರೋಣ ಹಾಗೂ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರಗಳಿಗೆ ತಲಾ 5 ಆಮ್ಲಜನಕ ಸಾಂದ್ರಕಗಳನ್ನು ಡಿಸಿಎಂ ನೀಡಿದರು. ರೋಣ ಶಾಸಕ ಕಳಕಪ್ಪ ಬಂಡಿ ಅವರು ಡಿಸಿಎಂ ಅವರಿಂದ ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿ ತಮ್ಮ ಕ್ಷೇತ್ರಗಳಿಗೆ ರವಾನಿಸಿದರು.

ಹೊನ್ನಾಳಿ ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣಾಕಾಚಾರ್ಯ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಐದು ಸಾಂದ್ರಕಗಳನ್ನು ನೀಡಿದರು. ಬಿಬಿಎಂಪಿ ಮಾಜಿ ಸದಸ್ಯರಾದ ಮುನೇಂದ್ರ ಕುಮಾರ್ ಅವರಿಗೆ ಐದು ಸಾಂದ್ರಕಗಳನ್ನು ಕೊಟ್ಟಿದ್ದು ಅವರು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಳಕೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಸೋಂಕಿತರಿಗೆ ಆಮ್ಲಜನಕ ಸಾಂದ್ರಕಗಳಿಂದ ಹೆಚ್ಚು ಸಹಾಯ ಆಗುತ್ತಿದೆ. ತುರ್ತಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ದು ಸುಲಭವಾಗಿ ಬಳಸಬಹುದಾಗಿದೆ. ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಇವುಗಳನ್ನು ಒದಗಿಸುವ ಕೆಲಸ ಆಗುತ್ತಿದೆ. ರಾಜ್ಯದ ಇತರ ಕಡೆಗೂ ಹೆಚ್ಚಿನ ಅನುಕೂಲ ಆಗಲಿ ಎಂದು ವೈಯಕ್ತಿಕವಾಗಿ ಇವುಗಳನ್ನು ನೀಡುತ್ತಿರುವುದಾಗಿ ಹೇಳಿದರು.

The post 75 ಸಾವಿರ ವಯಲ್ಸ್ ಬ್ಲ್ಯಾಕ್ ಫಂಗಸ್ ಔಷಧಿ ಖರೀದಿಗೆ ಆದೇಶ: ಡಿಸಿಎಂ appeared first on Public TV.

Source: publictv.in

Source link