777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ | 777 Charlie Review: Rakshit Shetty starrer 777 Charlie movie takes you to an emotional journey


777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ

ರಕ್ಷಿತ್​ ಶೆಟ್ಟಿ, ಚಾರ್ಲಿ

777 Charlie | Rakshit Shetty: ಹಲವು ವಿವರಗಳನ್ನು ನಿರ್ದೇಶಕ ಕಿರಣ್​ ರಾಜ್​ ಅವರು ತುಂಬ ಶ್ರದ್ಧೆವಹಿಸಿ ಕಟ್ಟಿಕೊಟ್ಟಿದ್ದಾರೆ. ಅದರಿಂದ ನೋಡುಗರನ್ನು ‘777 ಚಾರ್ಲಿ’ ಸೆಳೆದುಕೊಳ್ಳುತ್ತದೆ.

ಸಿನಿಮಾ: 777 ಚಾರ್ಲಿ

ನಿರ್ಮಾಣ: ಪರಂವಾ ಸ್ಟುಡಿಯೋಸ್​

ನಿರ್ದೇಶನ: ಕಿರಣ್​ ರಾಜ್

ಪಾತ್ರವರ್ಗ: ರಕ್ಷಿತ್​ ಶೆಟ್ಟಿ, ಚಾರ್ಲಿ, ರಾಜ್​ ಬಿ. ಶೆಟ್ಟಿ, ಸಂಗೀತಾ ಶೃಂಗೇರಿ, ಬಾಬಿ ಸಿಂಹ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು.

ಸ್ಟಾರ್​: 3.5 / 5

ನಟ ರಕ್ಷಿತ್​ ಶೆಟ್ಟಿ (Rakshit Shetty) ಅವರ ವೃತ್ತಿಜೀವನದಲ್ಲಿ ‘777 ಚಾರ್ಲಿ’ (777 Charlie) ತುಂಬ ಡಿಫರೆಂಟ್​ ಆದಂತಹ ಸಿನಿಮಾ. ಈ ಚಿತ್ರದಲ್ಲಿ ಅವರು ಹೀರೋಯಿನ್​ ಜೊತೆ ಡ್ಯುಯೆಟ್​ ಹಾಡುವುದಿಲ್ಲ. ವಿಲನ್​ಗಳನ್ನು ಮಾಸ್​ ಹೀರೋ ರೀತಿಯಲ್ಲಿ ಸೆದೆಬಡಿಯುವುದಿಲ್ಲ. ಆ ರೀತಿಯ ಸೂತ್ರಗಳನ್ನೆಲ್ಲ ಬದಿಗೊತ್ತಿ ಬೇರೊಂದು ರೀತಿಯ ಸಿನಿಮಾವನ್ನು ನಿರ್ದೇಶಕ ಕಿರಣ್​ ರಾಜ್​ ಕಟ್ಟಿಕೊಟ್ಟಿದ್ದಾರೆ. ಈ ಮೊದಲೇ ಟ್ರೇಲರ್​ನಲ್ಲಿ ಗೊತ್ತಾದಂತೆ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆಯನ್ನು ಈ ಸಿನಿಮಾ ವಿವರಿಸುತ್ತದೆ. ಇಂಥ ಸಿನಿಮಾ ಮಾಡುವುದು ಸುಲಭವಲ್ಲ. ಇತರೆ ಕಲಾವಿದರ ರೀತಿ ಶ್ವಾನ ಕೂಡ ಸಹಕರಿಸಬೇಕು. ಅದರ ಮೂಡ್​ಗೆ ತಕ್ಕಂತೆ ಶೂಟಿಂಗ್​ ಮಾಡಬೇಕು. ಆ ವಿಚಾರದಲ್ಲಿ ಇಡೀ ತಂಡಕ್ಕೆ ತಾಳ್ಮೆ ಇರಬೇಕಾದ್ದು ಅತ್ಯಗತ್ಯ. ಅದನ್ನೆಲ್ಲ ಸಾಧ್ಯವಾಗಿಸಿಕೊಂಡು ‘777 ಚಾರ್ಲಿ’ ತಂಡ ಈ ಕಥೆಯನ್ನು ತೆರೆಗೆ ತಂದಿದೆ. ಹಾಗಾದ್ರೆ ಸಿನಿಮಾ ಹೇಗಿದೆ? ಉತ್ತರ ತಿಳಿಯಲು ಈ ವಿಮರ್ಶೆ (777 Charlie Movie Review) ಓದಿ..

ನಿರ್ದೇಶಕರ ಡ್ರೀಮ್​ ಪ್ರಾಜೆಕ್ಟ್​:

ಪ್ರತಿಯೊಬ್ಬ ನಿರ್ದೇಶಕನಿಗೂ ತನ್ನ ಮೊದಲ ಸಿನಿಮಾ ತುಂಬ ಮುಖ್ಯವಾಗುತ್ತದೆ. ಹಾಗಾಗಿ ಕಥೆಯ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಸುಲಭವಾಗಿ ಒಂದು ಹಿಟ್​ ಪಡೆಯೋಣ ಎಂಬುವವರೇ ಹೆಚ್ಚು. ಆದರೆ ನಿರ್ದೇಶಕ ಕಿರಣ್​ ರಾಜ್​ ಅವರು ಚೊಚ್ಚಲ ಸಿನಿಮಾದಲ್ಲೇ ಹೆಚ್ಚು ರಿಸ್ಕ್​ ತೆಗೆದುಕೊಂಡಿದ್ದಾರೆ. 4-5 ವರ್ಷಗಳ ಕಾಲ ಅವರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಅವರ ಶ್ರಮ ತೆರೆಮೇಲೆ ಕಾಣುತ್ತದೆ. ಚಿಕ್ಕ ಚಿಕ್ಕ ವಿವರಗಳನ್ನೂ ಅವರು ತುಂಬ ಶ್ರದ್ಧೆ ವಹಿಸಿ ಕಟ್ಟಿಕೊಟ್ಟಿದ್ದಾರೆ. ಅದರಿಂದ ನೋಡುಗರನ್ನು ‘777 ಚಾರ್ಲಿ’ ಸೆಳೆದುಕೊಳ್ಳುತ್ತದೆ.

ಧರ್ಮನ ಪಾತ್ರ ಜೀವಿಸಿದ ರಕ್ಷಿತ್​ ಶೆಟ್ಟಿ:

ಮೊದಲೇ ಹೇಳಿದಂತೆ ರಕ್ಷಿತ್​ ಶೆಟ್ಟಿ ಅವರಿಗೆ ಇದು ವಿಶೇಷ ಸಿನಿಮಾ. ಧರ್ಮ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ ಎಂಬುದಕ್ಕಿಂತ ಆ ಪಾತ್ರವನ್ನೇ ಜೀವಿಸಿದ್ದಾರೆ ಎನ್ನಬಹುದು. ಈ ಪಾತ್ರದ ಸ್ವಭಾವವೇ ಭಿನ್ನ. ಧರ್ಮನಿಗೆ ಎರಡು ಶೇಡ್​ ಇದೆ. ಆ ಎರಡೂ ಛಾಯೆಯನ್ನು ನಿಜಕ್ಕೂ ಮೈಗೂಡಿಸಿಕೊಂಡವರಂತೆ ರಕ್ಷಿತ್​ ಶೆಟ್ಟಿ ನಟಿಸಿದ್ದಾರೆ. ಚಾರ್ಲಿ ಶ್ವಾನದ ಜೊತೆಗಿನ ಅವರ ಕಾಂಬಿನೇಷನ್​ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತದೆ.

‘777 ಚಾರ್ಲಿ’ ಕಥೆ ಏನು?

ಒಂಟಿಯಾಗಿ ಬದುಕುವ ಧರ್ಮನಿಗೆ ಮೂಗಿನ ತುದಿಯಲ್ಲೇ ಕೋಪ. ಯಾರ ಜೊತೆ​ಗೂ ಆತ ಮಾತನಾಡುವುದಿಲ್ಲ. ಆದರೆ ಅನಿರೀಕ್ಷಿತವಾಗಿ ಅವನ ಬದುಕಿನಲ್ಲಿ ನಾಯಿಯೊಂದು ಪ್ರವೇಶ ಪಡೆಯುತ್ತದೆ. ಆ ಬಳಿಕ ಧರ್ಮನ ಬದುಕು ಬದಲಾಗುತ್ತದೆ. ಹಾಗಾದ್ರೆ ಆ ಶ್ವಾನ ಮಾಡಿದ ಮ್ಯಾಜಿಕ್​ ಏನು? ಆರಂಭದಲ್ಲಿ ನಾಯಿಯನ್ನು ದ್ವೇಷಿಸುವ ಧರ್ಮ, ನಂತರದಲ್ಲಿ ಅದನ್ನು ಯಾಕೆ ಪ್ರೀತಿಸುತ್ತಾನೆ? ಧರ್ಮ-ಚಾರ್ಲಿ ಬಾಂಧವ್ಯ ಅಂತಿಮವಾಗಿ ಏನಾಗುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಪೂರ್ತಿ ಸಿನಿಮಾ ನೋಡಬೇಕು.

ಬುದ್ಧಿಗಿಂತ ಭಾವನೆಯದ್ದೇ ಮೇಲುಗೈ:

ಕಥಾನಾಯಕ ಧರ್ಮನ ಜೀವನದಲ್ಲಿ ಬದಲಾವಣೆ ಆದ ಬಳಿಕ ಆತ ಬುದ್ಧಿಗಿಂತಲೂ ಹೆಚ್ಚಾಗಿ ಭಾವನೆಗೆ ಬೆಲೆ ಕೊಡಲು ಆರಂಭಿಸುತ್ತಾನೆ. ಅದು ಬರೀ ಕಥೆಗೆ ಮಾತ್ರ ಸೀಮಿತವಾಗಿಲ್ಲ. ನಿರ್ದೇಶಕ ಕಿರಣ್​ ರಾಜ್ ಅವರ ಕೆಲಸದಲ್ಲೂ ಹಾಗೆಯೇ ಆಗಿದೆ. ಈ ಕಥೆಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಬುದ್ಧಿಗಿಂತಲೂ ಹೆಚ್ಚಾಗಿ ಭಾವನೆಗೆ ಬೆಲೆ ನೀಡಿದ್ದಾರೆ ಎಂಬುದು ಸ್ಪಷ್ಟ. ಮೊದಲಾರ್ಧದಲ್ಲಿ ರಸವತ್ತಾದ ನಿರೂಪಣಾ ಶೈಲಿಯನ್ನು ಆಯ್ಕೆ ಮಾಡಿಕೊಂಡಿರುವ ಅವರು ದ್ವಿತೀಯಾರ್ಧದಲ್ಲಿ ಯಾವುದೇ ಚೌಕಟ್ಟನ್ನು ಹಾಕಿಕೊಳ್ಳದೇ ಕಥೆ ಹೇಳಿದ್ದಾರೆ. ಭಾವನೆ ಹೇಗೆ ಹರಿಯುತ್ತದೆಯೋ ಹಾಗೆ ಅದನ್ನು ಮುಕ್ತವಾಗಿ ಹರಿಯಲು ಬಿಟ್ಟಿದ್ದಾರೆ.

ಧರ್ಮ ಮತ್ತು ಚಾರ್ಲಿಯನ್ನು ಅತಿಯಾಗಿ ಹಚ್ಚಿಕೊಂಡ ಪ್ರೇಕ್ಷಕರಿಗೆ ಸಿನಿಮಾದ ಅವಧಿ ಜಾಸ್ತಿ ಆಯ್ತು ಅಂತ ಅನಿಸುವುದಿಲ್ಲ. ಆದರೆ ಅಷ್ಟೇನೂ ಎಮೋಷನಲ್​ ಅಲ್ಲದ ಪ್ರೇಕ್ಷಕರಿಗೆ ದ್ವಿತೀಯಾರ್ಧ ಕೊಂಚ ದೀರ್ಘ ಆಯಿತು ಎನಿಸದೇ ಇರದು. ನೋಡುಗರು ಭಾವತೀವ್ರತೆಯ ಅಲೆಗೆ ಸಿಕ್ಕ ಮೇಲೆ ಲಾಜಿಕಲ್​ ಅಂಶಗಳು ಕೂಡ ಮುಖ್ಯ ಎನಿಸದೇ ಇರಬಹುದು. ಆದರೂ ಕೂಡ ನಿರ್ದೇಶಕರು ಈ ಅಂಶಗಳ ಕಡೆಗೆ ಗಮನ ಹರಿಸಿದ್ದರೆ ‘777 ಚಾರ್ಲಿ’ ಇನ್ನಷ್ಟು ಆಪ್ತವಾಗುತ್ತಿತ್ತು.

ಮನರಂಜನೆ ಜೊತೆ ಮೆಸೇಜ್​:

ಬೀದಿ ನಾಯಿಗಳ ಬಗ್ಗೆ ಜನರಿಗೆ ಹಲವು ಬಗೆಯ ಕಲ್ಪನೆಗಳಿಗೆ. ನಾಯಿಗಳನ್ನು ಕಂಡರೆ ಹೆದರಿಕೊಂಡು ಕಿಲೋಮೀಟರ್​ ದೂರ ಓಡುವವರು ಇದ್ದಾರೆ. ಮನೆ ಬಳಿ ಬಂದರೆ ಓಡಿಸುವವರೂ ಇದ್ದಾರೆ. ಆದರೆ ಅಂಥವರ ಮನಸ್ಸನ್ನು ಬದಲಾಯಿಸುವ ಶಕ್ತಿ ‘777 ಚಾರ್ಲಿ’ ಚಿತ್ರಕ್ಕೆ ಇದೆ. ಶ್ವಾನದ ಕಥೆಯುಳ್ಳ ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಅವುಗಳ ಸಾಲಿನಲ್ಲಿ ಈ ಸಿನಿಮಾ ಕೂಡ ವಿಶೇಷವಾಗಿ ನಿಲ್ಲುತ್ತದೆ.

ಗಮನ ಸೆಳೆಯುವ ಹಿನ್ನೆಲೆ ಸಂಗೀತ:

ಸಂಗೀತ ನಿರ್ದೇಶಕ ನೋಬಿನ್​ ಪೌಲ್​ ಅವರು ಈ ಸಿನಿಮಾಗೆ ಹಿನ್ನೆಲೆ ಸಂಗೀತದ ಮೂಲಕ ಮೆರುಗು ಹೆಚ್ಚಿಸಿದ್ದಾರೆ. ಹಾಡುಗಳಿಗಿಂತಲೂ ಹೆಚ್ಚಾಗಿ ಹಿನ್ನೆಲೆ ಸಂಗೀತ ಹೈಲೈಟ್​ ಆಗಿದೆ. ಆ ಮೂಲಕ ಭಾವನೆಗಳನ್ನು ತೀವ್ರವಾಗಿಸುವಲ್ಲಿ ನೋಬಿನ್​ ಪೌಲ್​ ಅವರ ಕೊಡುಗೆ ಕೂಡ ಗಮನಾರ್ಹವಾಗಿದೆ. ಅರವಿಂದ್​ ಕಶ್ಯಪ್​ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ.

ನಕ್ಕು ನಲಿಸುವ ರಾಜ್​ ಬಿ. ಶೆಟ್ಟಿ:

ಪಶು ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್​ ಬಿ. ಶೆಟ್ಟಿ ಅವರು ಸಖತ್​ ನಗಿಸುತ್ತಾರೆ. ಮಂಗಳೂರು ಶೈಲಿಯ ಕನ್ನಡದಲ್ಲಿ ಮಾತನಾಡುತ್ತ, ತಮ್ಮದೇ ಮ್ಯಾನರಿಸಂ ಮೂಲಕ ಅವರು ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾರೆ. ಅವರ ತೆರೆ ಮೇಲೆ ಕಾಣಿಸಿಕೊಂಡಾಗಲೆಲ್ಲ ನೋಡುಗರ ಮುಖದಲ್ಲಿ ನಗು ಮೂಡುವುದು ಖಚಿತ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ ಅವರು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಕೂಡ ಗಮನ ಸೆಳೆಯುತ್ತಾರೆ. ದಾನಿಶ್​ ಸೇಠ್ ಮತ್ತು ಬಾಬಿ ಸಿಂಹ ಅವರಿಗೆ​ ಹೆಚ್ಚು ಸ್ಕ್ರೀನ್​ ಸ್ಪೇಸ್​ ಇಲ್ಲ. ನಾಯಕಿ ಸಂಗೀತಾ ಶೃಂಗೇರಿ ಅವರು ಸಹಜಾಭಿನಯ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

TV9 Kannada


Leave a Reply

Your email address will not be published.