ಕೊಲಂಬೋ: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟ ಹೀರೋ ದೀಪಕ್ ಚಹರ್ ಭಾರತದ ಪರ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಭಾರತ ವಿರುದ್ಧ ಶ್ರೀಲಂಕಾ ಗೆದ್ದೆಬಿಟ್ಟಿತು ಎನ್ನುವಷ್ಟರಲ್ಲಿ ಫಲಿತಾಂಶ ತಲೆಕೆಳಗಾಗಿತ್ತು. ವೇಗದ ಬೌಲರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದ ದೀಪಕ್ ಚಹರ್ ಬೌಲಿಂಗ್‍ನಲ್ಲಿ ಕಮಾಲ್ ಮಾಡುವುದರೊಂದಿಗೆ ಬ್ಯಾಟಿಂಗ್‍ನಲ್ಲೂ ತಮ್ಮ ಸಾಹಸ ಮೆರೆದು ಭಾರತಕ್ಕೆ ಗೆಲುವುತಂದುಕೊಟ್ಟಿದ್ದರು. ಈ ಪಂದ್ಯದಲ್ಲಿ ಚಹರ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗಿಳಿದು ಔಟಾಗದೇ 69 ರನ್(82 ಎಸೆತ, 7ಬೌಂಡರಿ, 1 ಸಿಕ್ಸರ್) ಸಿಡಿಸಿದ್ದರು. ಇದು ಭಾರತೀಯ ಆಟಗಾರನೊಬ್ಬ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗಿಳಿದು ಅತೀ ಹೆಚ್ಚು ರನ್ ಸಿಡಿಸಿ ಭಾರತವನ್ನು ಗೆಲ್ಲಿಸಿಕೊಟ್ಟ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರವಾಗಿದೆ. ಈ ಮೂಲಕ ಭಾರತ ತಂಡ ಅಮೋಘ 3 ವಿಕೆಟ್‍ಗಳ ಜಯದೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿದೆ.

ಚಹರ್ ತನ್ನ ಚೊಚ್ಚಲ ಏಕದಿನ ಅರ್ಧಶತಕದೊಂದಿಗೆ 8ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು 2017ರಲ್ಲಿ ಶ್ರೀಲಂಕಾ ವಿರುದ್ಧ 9ನೇ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್ 53 ರನ್ ಸಿಡಿಸಿ ಮಿಂಚಿದ್ದರು.

ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ 84 ಎಸೆತಗಳಲ್ಲಿ 84ರನ್ ಜೊತೆಯಾಟವಾಡಿ ಏಕದಿನ ಕ್ರಿಕೆಟ್‍ನಲ್ಲಿ ಭಾರತ ಪರ ಗರಿಷ್ಠ ರನ್‍ಗಳ ಜೊತೆಯಾಟವಾಡಿದ ಜೋಡಿಗಳ ಪೈಕಿ ಜಂಟಿ 2ನೇ ಸ್ಥಾನ ಹಂಚಿಕೊಂಡಿದೆ. ಈ ಮೊದಲು ಹರ್ಭಜನ್ ಸಿಂಗ್ ಮತ್ತು ಪ್ರವೀಣ್ ಕುಮಾರ್ 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಂಟನೇ ವಿಕೆಟ್‍ಗೆ 84 ರನ್‍ಗಳ ಜೊತೆಯಾಟವಾಡಿತ್ತು. ಎಂಟನೇ ವಿಕೆಟ್‍ಗಳ ಜೊತೆಯಾಟದಲ್ಲಿ ಮೊದಲ ಸ್ಥಾನದಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಮತ್ತು ಭುವನೇಶ್ವರ್ ಕುಮಾರ್ ಇದ್ದು, 2017ರಲ್ಲಿ ಶ್ರೀಲಂಕಾ ವಿರುದ್ಧ 100ರನ್‍ಗಳ ಜೊತೆಯಾಟವಾಡಿ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: 8ನೇ ವಿಕೆಟಿಗೆ 84 ರನ್ ಜೊತೆಯಾಟ – ರೋಚಕ ಜಯ, ಭಾರತಕ್ಕೆ ಸರಣಿ

ಚಹರ್ ಇದಲ್ಲದೆ ಒಂದೇ ಪಂದ್ಯದಲ್ಲಿ 2 ವಿಕೆಟ್ ಮತ್ತು 84ರನ್ ಸಿಡಿಸಿದ ಮೊದಲ ಆಟಗಾರರಾಗಿದ್ದಾರೆ. ಈ ಮೊದಲು 2009ರಲ್ಲಿ ಯುವರಾಜ್ ಸಿಂಗ್ ಶ್ರಿಲಂಕಾ ವಿರುದ್ಧ 2ವಿಕೆಟ್ ಮತ್ತು 73 ರನ್ ಸಿಡಿಸಿದ್ದರು.

The post 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ದಾಖಲೆ ನಿರ್ಮಿಸಿದ ದೀಪಕ್ ಚಹರ್ appeared first on Public TV.

Source: publictv.in

Source link