ಬೆಂಗಳೂರು: ಇಷ್ಟು ದಿನ ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಮಂದಿ ಟೆಕ್ಕಿಗಳಿಗೆ ವಂಚಿಸುತ್ತಿದ್ದರು. ಆದರೆ ಇವತ್ತು ಕೇಸ್ ಉಲ್ಟಾ ಆಗಿದೆ. ಟೆಕ್ಕಿಗಳು ರಿಯಲ್ ಎಸ್ಟೇಟ್ ಮಾಡಿ, ಎನ್ಆರ್ಐ ಟೆಕ್ಕಿಗಳಿಗೆ ಉಂಡೆನಾಮ ಹಾಕಿದ್ದಾರೆ. ಸದ್ಯ ಟೆಕ್ಕಿಗಳ ವಿರುದ್ಧ ಕೇಸ್ ದಾಖಲಾಗಿದ್ದು, ಬಂಧನದ ಭಯದಲ್ಲಿ ಆರೋಪಿ ಟೆಕ್ಕಿಗಳು ಎಸ್ಕೇಪ್ ಆಗಿದ್ದಾರೆ.
ಹೌದು.. ನಗರದಲ್ಲಿ ಟೆಕ್ಕಿಗಳಿಂದ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರಿಗೆ ಕೋಟ್ಯಾಂತರ ರೂಪಾಯಿ ಚೀಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ದೊಮ್ಮಲೂರಿನ ಅಮರಜ್ಯೋತಿ ಲೇಔಟ್ನಲ್ಲಿರುವ ಎಸ್ಇಎಡಿ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿ ಹೆಸರಲ್ಲಿ ದೋಖಾ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸಾಫ್ಟ್ವೇರ್ ಎಂಜಿನಿಯರ್ಸ್ & ಡಾಕ್ಟರ್ಸ್ ಹೌಸಿಂಗ್ ಸೊಸೈಟಿ ಇದಾಗಿದೆ.
8 ಟೆಕ್ಕಿಗಳ ವಿರುದ್ಧ ಎಫ್ಐಆರ್
ಕೆಂಗೇರಿ ಬಳಿ 6 ಸೈಟ್ ಕೊಡ್ತೀವಿ ಎಂದು ಕೋಟಿಗಟ್ಟಲೆ ಹಣ ಪಡೆದ ಟೆಕ್ಕಿಗಳು ದೋಖಾ ಮಾಡಿದ್ದಾರಂತೆ. ಈ ಸಂಬಂಧ ಒಟ್ಟು 8 ಟೆಕ್ಕಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ವಂಚನೆ, ಬೆದರಿಕೆ, ಒಳಸಂಚು ಪ್ರಕರಣಗಳ ಅಡಿಯಲ್ಲಿ ದೂರು ದಾಖಲಾಗಿದೆ. IPC ಸೆಕ್ಷನ್ 506, 34, 504, 120B, 406, 419, 420, 465, 471, 415, 463, 464 ಅಡಿ ದೂರು ದಾಖಲಾಗಿದೆ. ಡೆಲ್, ಡೆಲ್ R&D ಇಂಡಿಯಾ, ಐಐಎಸ್ ಸೇರಿ ವಿವಿಧ ಕಂಪನಿ ಟೆಕ್ಕಿಗಳ ವಿರುದ್ಧ ದೂರು ದಾಖಲಾಗಿದೆ. ಟೆಲ್ ಉದ್ಯೋಗಿ ಕೆ ಹರಿಕೃಷ್ಣ, ನಾಗರಾಜ್ ಜಿ.ಸಿ, ಚಾರುಲತಾ ಜೈನ್, ಐಐಎಸ್ ಕಂಪನಿಯ ರೋಹಿತ್ ರಾಮನಾಥನ್, ಕೆ.ವಿ ಶ್ರೀನಂದ ವರ್ಮಾ, ಹೆಚ್.ಎಸ್ ರಾಮಕೃಷ್ಣ, ಮಹೇಶ್ ಶೇಷಾದ್ರಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯಾರಿಗೆ ದೋಖಾ..?
ಬೆಂಗಳೂರು ಮೂಲದ ಆರ್ ಆರ್ ನಗರದ ಅಜಯ್ ಎಂಬ ವ್ಯಕ್ತಿಗೆ ವಂಚನೆ ಮಾಡಲಾಗಿದೆ. ಇವರು ಅಮೆರಿಕಾದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಟೌನ್ ಶೀಪ್ ನಿವಾಸಿಯಾಗಿರುವ ಅಜಯ್, ವಿದ್ಯಾವಂತ ಟೆಕ್ಕಿಗಳಿಂದ ಮೋಸ ಆಗಲ್ಲ ಅಂತಾ ಸೈಟ್ ಪರ್ಚೇಸ್ ಮಾಡಿದ್ದರು. ಇದೀಗ ಆ ಟೆಕ್ಕಿಗಳ ವಿರುದ್ಧವೇ ದೂರು ದಾಖಲಿಸಿದ್ದಾರೆ.
₹2.64 ಕೋಟಿ ವಂಚನೆ ಆರೋಪ
ಇನ್ನು ಅಜಯ್ ತಮ್ಮ ಕುಟುಂಬ 6 ಮಂದಿ ಸದಸ್ಯರ ಹೆಸರಲ್ಲಿ ಸೈಟ್ ಖರೀದಿ ಮಾಡಿದ್ದರು. ತಾನು ಅಮೆರಿಕಾದಲ್ಲಿ ದುಡಿದ ಕೋಟ್ಯಾಂತರ ರೂಪಾಯಿ ಹಣವನ್ನ ಸೈಟ್ಗಾಗಿ ಹೂಡಿಕೆ ಮಾಡಿದ್ದರು. ಬರೋಬ್ಬರಿ 2 ಕೋಟಿ 64 ಲಕ್ಷ ಹಣವನ್ನ ಅಜಯ್ ನೀಡಿದ್ದರಂತೆ. ಸದ್ಯ ಅಜಯ್ಗೆ ಈಗ ಸೈಟ್ ಇಲ್ಲದೇ ಸ್ಟೇಷನ್ಗೆ ಅಲೆದಾಟ ನಡೆಸುವ ಪರಿಸ್ಥಿತಿ ಬಂದಿದೆ.
ಜಾಮೀನು ಅರ್ಜಿ ವಜಾ
ಎಫ್ಐಆರ್ ದಾಖಲಾಗ್ತಿದ್ದಂತೆ ಟೆಕ್ಕಿಗಳು ಬೆಂಗಳೂರಿಂದ ಎಸ್ಕೇಪ್ ಆಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಬಂಧನದ ಭಯದಲ್ಲಿ ಬೆಂಗಳೂರು ಬಿಟ್ಟು ಟೆಕ್ಕಿಗಳು ಪರಾರಿಯಾಗಿದ್ದಾರೆ. ಕೆ ಹರಿಕೃಷ್ಣ, ನಾಗರಾಜ್ ಜಿ.ಸಿ, ಚಾರುಲತಾ ಜೈನ್, ರೋಹಿತ್ ರಾಮನಾಥನ್, ಕೆ.ವಿ ಶ್ರೀನಂದ ವರ್ಮಾ,ಹೆಚ್.ಎಸ್ ರಾಮಕೃಷ್ಣ, ಮಹೇರ್ಶ ಶೇಷಾದ್ರಿ ಎಸ್ಕೇಪ್ ಆಗಿದ್ದಾರೆ.
ಪೊಲೀಸರ ವಿರುದ್ಧ ನಿರ್ಲಕ್ಷ್ಯ ಆರೋಪ
ಈ 8 ಮಂದಿ ಆರೋಪಿಗಳು ಕಂಪನಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಈ ಪ್ರಕರಣ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿದೆ. ಆರೋಪಿಗಳನ್ನ ಬಂಧಿಸುವಲ್ಲಿ ಹಸಲೂರು ಠಾಣೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಮೊದಲು ದೂರು ದಾಖಲಿಸಲು ನಿರ್ಲಕ್ಷ್ಯ ಮಾಡಿ ಪಿಸಿಆರ್ ಮಾಡಿದ್ದರು. ನಂತರ ಕೋರ್ಟ್ ಆದೇಶದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು ಸದ್ಯ ಈ ಎಲ್ಲಾ ಆರೋಪಿಗಳು ಜಾಮೀನಿಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.