
Image Credit source: Deccan Herald
Narendra Modi Government Landmark Decisions: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 8 ವರ್ಷಗಳನ್ನು ಪೂರೈಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ 8 ವರ್ಷಗಳಲ್ಲಿ ತೆಗೆದುಕೊಂಡಿರುವ 10 ಮಹತ್ವದ ನಿರ್ಧಾರಗಳು ಇಲ್ಲಿವೆ…
ನವದೆಹಲಿ: ನೀವು ಅವರನ್ನು ಪ್ರೀತಿಸಿ ಅಥವಾ ದ್ವೇಷಿಸಿ. ಆದರೆ, ನೀವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಮಾತು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Modi) ಸರಿಯಾಗಿ ಅನ್ವಯಿಸುತ್ತದೆ. ಪ್ರಧಾನಿ ಮೋದಿಯವರನ್ನು (PM Narendra Modi) ಹೀಗಳೆಯುವವರು, ಟೀಕಿಸುವವರ ಮಧ್ಯೆಯೇ 8 ವರ್ಷಗಳ ಕಾಲ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಿರುವುದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಕೀರ್ತಿ ಮೋದಿಯವರದ್ದು. 2ನೇ ಅವಧಿಗೆ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರು ಇದೀಗ ಪ್ರಧಾನಮಂತ್ರಿಯಾಗಿ 8 ವರ್ಷಗಳನ್ನು (8 Years of Narendra Modi Government) ಪೂರೈಸಿದ್ದಾರೆ. 2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಬಳಿಕ ಭಾರತದ ಪ್ರಧಾನ ಮಂತ್ರಿಯಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ 8 ವರ್ಷಗಳಲ್ಲಿ ತೆಗೆದುಕೊಂಡಿರುವ 10 ಮಹತ್ವದ ನಿರ್ಧಾರಗಳು ಇಲ್ಲಿವೆ…
1. ಸ್ವಚ್ಛ ಭಾರತ ಅಭಿಯಾನ:
ಸ್ವಚ್ಛ ಭಾರತ ಅಭಿಯಾನ (ಸ್ವಚ್ಛ ಭಾರತ ಮಿಷನ್) ಭಾರತ ಸರ್ಕಾರದ ಅತ್ಯಂತ ಮಹತ್ವದ ಸ್ವಚ್ಛತಾ ಅಭಿಯಾನಗಳಲ್ಲಿ ಒಂದಾಗಿದೆ. ಇದು ರಾಷ್ಟ್ರವ್ಯಾಪಿ ಅಭಿಯಾನವಾಗಿದ್ದು, ಬಯಲು ಶೌಚವನ್ನು ತೊಡೆದುಹಾಕಲು ಮತ್ತು ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ಸುಧಾರಿಸಲು 2014ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು. 2014ರ ಅಕ್ಟೋಬರ್ 2ರಂದು ರಾಜ್ಘಾಟ್ನಲ್ಲಿ ಗಾಂಧಿ ಜಯಂತಿಯಂದು ಈ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.
2. ನೋಟು ಅಮಾನ್ಯೀಕರಣ:
ಕೇಂದ್ರ ಸರ್ಕಾರವು 500 ರೂ. ಹಾಗೂ 1,000 ರೂ.ಗಳ ನೋಟುಗಳನ್ನು ಭಾರತದಲ್ಲಿ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷಗಳು ಆಗಿದೆ. 2016ರ ನವೆಂಬರ್ 8ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂ. ಹಾಗೂ 1,000 ರೂ. ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಲಾಗಿದ್ದು, ಬಳಿಕ 500 ರೂ.ಗಳ ಹೊಸ ನೋಟು ಹಾಗೂ 2,000 ರೂ.ಗಳ ಹೊಸ ನೋಟನ್ನು ಚಲಾವಣೆಗೆ ತರಲಾಗಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ದೇಶದಲ್ಲಿ ಭಾರೀ ಸಂಚಲನ ಮೂಡಿತ್ತು.
3. ಬಾಲಾಕೋಟ್ ವೈಮಾನಿಕ ದಾಳಿ:
2019ರ ಫೆಬ್ರವರಿ 26ರ ಮುಂಜಾನೆ ಭಾರತ ಬಾಲಾಕೋಟ್ ವೈಮಾನಿಕ ದಾಳಿಯನ್ನು ನಡೆಸಿತು. ಭಯೋತ್ಪಾದಕರ ತರಬೇತಿ ಶಿಬಿರದ ವಿರುದ್ಧ ಭಾರತವು ವೈಮಾನಿಕ ದಾಳಿಯನ್ನು ನಡೆಸಿತು. ಇದರಿಂದ ಭಾರೀ ಪ್ರಮಾಣದ ಉಗ್ರರು ಸಾವಿಗೀಡಾದರು. ಭಾರತದ ಪಾಲಿಗೆ ಈ ಸರ್ಜಿಕಲ್ ಸ್ಟ್ರೈಕ್ ಮರೆಯಲಾಗದ ಘಟನೆಗಳಲ್ಲೊಂದು.
4. 370 ನೇ ವಿಧಿಯ ರದ್ದು:
2016ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಅದರ ವಿಶೇಷ ಸ್ಥಾನಮಾನ ಮತ್ತು ಅದರ ವಾಸಸ್ಥಳ ನಿಯಮಗಳನ್ನು ವ್ಯಾಖ್ಯಾನಿಸುವ ಆದೇಶವನ್ನು ನೀಡುವ 370 ಮತ್ತು 35(A) ವಿಧಿಗಳನ್ನು ರದ್ದುಗೊಳಿಸಲಾಯಿತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಲಾದ ತಾತ್ಕಾಲಿಕ ವಿಶೇಷ ಸ್ಥಾನಮಾನ ಅಥವಾ ಸ್ವಾಯತ್ತತೆಯನ್ನು ರದ್ದುಗೊಳಿಸಿತು. ಮೋದಿ ಸರ್ಕಾರದ ಅಡಿಯಲ್ಲಿ ಕೇಂದ್ರವು ಸಂವಿಧಾನದ 370 ಮತ್ತು 35A ವಿಧಿಗಳನ್ನು ರದ್ದುಗೊಳಿಸಿದ ಒಂದು ವರ್ಷದ ನಂತರ ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಹೊರಗಿನ ಜನರಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಲು ದಾರಿ ಮಾಡಿಕೊಟ್ಟಿತು.