8 Years of Modi Government: ಸಾಮಾಜಿಕ ಕ್ರಾಂತಿ ಸೃಷ್ಟಿಸಿರುವ ‘ಮನ್ ಕಿ ಬಾತ್’ ಐಡಿಯಾ ಪ್ರಧಾನಿ ಮೋದಿಯವರಿಗೆ ಹೊಳೆದಿದ್ದು 1998ರಲ್ಲಿ! | 8 Years of Modi Government: PM Modi thought about ‘Mann Ki Baat’ even before he could become CM of Gujarat ARB


2014 ರಿಂದ ಸಾಮಾಜಿಕ ಕ್ರಾಂತಿಗೆ ಕಾರಣವಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಇಂದು ಕೇವಲ ಭಾರತ ಮಾತ್ರವಲ್ಲ ವಿಶ್ವದ ಹಲವಾರು ಭಾಗಗಳಲ್ಲಿ ಜನಪ್ರಿಯವಾಗಿದೆ. ಈ ಕಾರ್ಯಕ್ರಮ ಹಿಂದಿನ ಪ್ರೇರಣೆ ಏನು, ಪ್ರತಿ ತಿಂಗಳು ಎಷ್ಟು ಜನ ಐಡಿಯಾಗಳನ್ನು ಕಳಿಸುತ್ತಾರೆ ಅಂತ ತಿಳಿದುಕೊಳ್ಳುವ ಅವಶ್ಯಕತೆ ಮೋದಿಯವರು ಪ್ರಧಾನಿಯಾಗಿ 8 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿದೆ.

ಮೇ 26 ರಂದು ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು 8 ವರ್ಷಗಳನ್ನು ಪೂರೈಸಲಿದ್ದಾರೆ. ಈ ಅವಧಿಯಲ್ಲಿ ಅವರು ಮತ್ತು ಅವರ ಎರಡು ಸರ್ಕಾರಗಳು ಮಾಡಿದ ಸಾಧನೆಗಳು ಏನು ಅನ್ನೋದೆಲ್ಲ ನಮ್ಮ ಕಣ್ಣುಗಳ ಮುಂದಿದೆ. ಅವುಗಳ ಚರ್ಚೆ ಬೇರೆ ಬೇರೆ ವೇದಿಕೆಗಳಲ್ಲಿ ಆಗುತ್ತಿದೆ. ನಿಮಗೆ ನೆನಪಿರಬಹುದು, 2014ರ ವಿಜಯ ದಶಮಿಯಂದು ಆರಂಭವಾದ ಅವರ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ಇನ್ನೊಂದು ವರ್ಷದ ಆವಧಿಯಲ್ಲಿ 100 ಎಪಿಸೋಡ್ ಗಳನ್ನು ಪೂರೈಸಲಿದೆ. ಚಿಕ್ಕದಾಗಿ ಆರಂಭಗೊಂಡ ಈ ಕಾರ್ಯಕ್ರಮ ಒಂದು ಅಭೂತಪೂರ್ವ ಮತ್ತು ಸಾಮಾಜಿಕ ಕ್ರಾಂತಿ ಸೃಷ್ಟಿಸಿದ ಯಶೋಗಾಥೆಯಾಗಿ ಪರಿವರ್ತನೆಗೊಂಡಿದೆ ಮತ್ತು ಇದರ ಜನಪ್ರಿಯತೆ ಪ್ರತಿ ಎಪಿಸೋಡ್ ನೊಂದಿಗೆ ಹೆಚ್ಚುತ್ತಿದೆ. ರವಿವಾರ ಮೇ 29 ರಂದು ಬಿತ್ತರಗೊಳ್ಳಲಿರುವ ‘ಮನ್ ಕೀ ಬಾತ್’ 89ನೇ ಎಪಿಸೋಡ್ ಆಗಲಿದೆ.

ಪ್ರತಿ ತಿಂಗಳಿನ ಕೊನೆ ರವಿವಾರ ಪ್ರಧಾನಿಗಳ ಕಾರ್ಯಕ್ರಮ ಬಿತ್ತರಗೊಂಡ ಬಳಿಕ ಕನ್ನಡವೂ ಸೇರಿದಂತೆ ರಾಷ್ಟ್ರದ ಹಲವಾರು ಭಾಷೆಗಳಲ್ಲಿ-ಅಸ್ಸಾಮೀಸ್, ಬೆಂಗಾಲಿ, ಗಾರೊ, ಖೇಸಿ, ಕೊಕ್ ಬೊರೊಕ್, ಕೊಂಕಣಿ, ಲೆಪ್ಚಾ, ಮೈಥಿಲಿ, ಮರಾಠಿ, ಮಣಿಪುರಿ, ಮಲೆಯಾಳಂ, ನಾಗಮೀಸ್, ನೇಪಾಳೀ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪ್ರಸಾರವಾಗುತ್ತದೆ.

‘ಮನ್ ಕಿ ಬಾತ್’ ಹೇಗೆ ಶುರುವಾಯಿತು ಅದರ ಹಿಂದಿನ ಪ್ರೇರಣೆ ಏನು ಅಂತ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಮೋದಿ ಅವರು ಪ್ರಧಾನಿ ಅಲ್ಲ, ಗುಜರಾತಿನ ಮುಖ್ಯಮಂತ್ರಿಗಳಾಗುವ ಮೊದಲೇ ರೇಡಿಯೋ ಮೂಲಕ ದೇಶದ ಎಲ್ಲಾ ಮೂಲೆಗಳ ಜನರನ್ನು ತಲುಪಬಹುದೆಂಬ ಮನವರಿಕೆಯಾಗಿತ್ತು. ಅದು 1998 ರ ಸಮಯ ಮತ್ತು ಮೋದಿಯವರು ಬಿಜೆಪಿಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಸಂಘಟನಾ ಕೆಲಸಗಳಲ್ಲಿ ತೊಡಗಿದ್ದರು.

ಅದೊಂದು ದಿನ ಅವರು ರಾಜ್ಯದ ಕುಗ್ರಾಮದಂಥ ಪ್ರದೇಶದಲ್ಲಿ ಕೆಲಸ ಮಾಡುವಾಗ ಟೀ ಕುಡಿಯಲು ಅವರು ಒಂದು ಚಿಕ್ಕ ಧಾಬಾಗೆ ಹೋಗಿ ಚಹಾ ಕೊಡುವಂತೆ ಹೇಳಿದರು. ಖುಷಿಯಿಂದ ಬೀಗುತ್ತಿದ್ದ ಧಾಬಾದ ಮಾಲೀಕ ಮೋದಿಯವರ ಮುಂದೆ ಚಹಾದ ಬದಲು ಲಾಡು ತಂದಿಟ್ಟ. ಮೋದಿಯವರು, ‘ಭಯ್ಯಾ, ನಾನು ಕೇಳಿದ್ದು ಚಾಯ್, ಲಡ್ಡು ಅಲ್ಲ,’ ಎಂದರು. ಅದಕ್ಕೆ ಧಾಬಾದವನು, ‘ಭಯ್ಯಾ, ನೀವದನ್ನು ಅದನ್ನು ತಿನ್ನಲೇಬೇಕು, ಇಂದು ಇಡೀ ದೇಶದಲ್ಲಿ ಸಂತೋಷದ ಅಲೆಯಲ್ಲಿ ತೇಲುತ್ತಿದೆ. ಎಲ್ಲರೂ ಕುಣಿದು ಕುಪ್ಪಳಿಸುತ್ತಿದ್ದಾರೆ, ಬಂದ ಗ್ರಾಹಕರಿಗೆಲ್ಲ ನಾನು ಲಡ್ಡು ಹಂಚುತ್ತಿದ್ದೇನೆ,’ ಎಂದು ಹೇಳಿದ. ‘ಅಂಥದ್ದೇನಾಗಿದೆ,’ ಅಂತ ಮೋದಿಯವರು ಕೇಳಿದಾಗ ಅವನು, ‘ನಿಮಗೆ ಗೊತ್ತಿಲ್ವಾ? ಭಾರತ ಇಂದು ಅಣ್ವಸ್ತ್ರ ಪರೀಕ್ಷೆ ನಡೆಸಿದೆ,’ ಎಂದು ಹೇಳಿದ. ಮೋದಿಯವರು, ‘ನಿಮಗೆ ಹೇಗೆ ಗೊತ್ತಾಯಿತು ಭಯ್ಯಾ?’ ಅಂತ ಕೇಳಿದಾಗ, ಅವನು ರೇಡಿಯೋವನ್ನು ಅವರ ಮುಂದೆ ತಂದಿಟ್ಟ. ಆಗಿನ ಪ್ರಧಾನ ಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರು ಪೋಖ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸುದ್ದಿಯ ಬಾನುಲಿ ಪ್ರಸಾರ ಜಾರಿಯಲ್ಲಿತ್ತು.

Mann Ki Baat, PM Narendra Modi

ಪ್ರಧಾನಿ ನರೇಂದ್ರ ಮೋದಿ

ಅಂಥ ರಿಮೋಟ್ ಜಾಗದಲ್ಲಿದ್ದ ವ್ಯಕ್ತಿಗೆ ದೇಶದಲ್ಲಿ ಏನು ನಡೆಯುತ್ತಿದೆ ಅನ್ನೋದು ರೇಡಿಯೊ ಮೂಲಕ ಗೊತ್ತಾಗಿದೆ. ರೇಡಿಯೊವನ್ನು ದೇಶದಲ್ಲಿ ಯಾವ ಮೂಲೆಯಲ್ಲೂ ಆಲಿಸಬಹುದು, ಇದಕ್ಕಿಂತ ಪವರ್ ಫುಲ್ ಮಾಧ್ಯಮ ಮತ್ತೊಂದಿಲ್ಲ ಅಂತ ಮೋದಿಯವರಿಗೆ ಅವತ್ತು ಮನದಟ್ಟಾಯಿತು.

ಆಗಲೇ ಜನರನ್ನು ತಲುಪಲು ರೇಡಿಯೊವನ್ನು ಬಳಸುವ ನಿರ್ಧಾರ ಅವರಲ್ಲಿ ರೂಪ ತಳೆಯಲಾರಂಭಿಸಿತ್ತು. 2014 ರಲ್ಲಿ ಅವರು ಪ್ರಧಾನ ಮಂತ್ರಿಯಾದಾಗ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಅಸ್ತಿತ್ವಕ್ಕೆ ಬಂತು. ಅಗಲೇ ಹೇಳಿದ ಹಾಗೆ ಮೊದಲ ಎಪಿಸೋಡ್ ಅಕ್ಟೋಬರ್ 3, 2014 ವಿಜಯದಶಮಿ ದಿನದಂದು ಆಯಿತು.

ಒಂದು ಅಂಶವನ್ನು ನಾವಿಲ್ಲಿ ಗಮನಿಸಬೇಕು. ಕಾರ್ಯಕ್ರಮದ ರೂಪುರೇಷೆ ತಯಾರಿಸುವಾಗಲೇ ಅದನ್ನು ಒಂದು ರಾಜಕೀಯೇತರ ಕಾರ್ಯಕ್ರಮವಾಗಿರಿಸಬೇಕು, ಅದರಲ್ಲಿ ತಮ್ಮ ಬಗ್ಗೆಯಾಗಲೀ, ತಮ್ಮ ಸರ್ಕಾರದ ಸಾಧನೆಗಳ ಬಗ್ಗೆಯಾಗಲೀ ಚರ್ಚೆಯಾಗಬಾರದು ಅಂತ ಮೋದಿ ನಿರ್ಧರಿಸಿಬಿಟ್ಟಿದ್ದರು.

‘ಮೋದಿ ಬರುತ್ತಾನೆ ಹೋಗುತ್ತಾನೆ, ಅದರೆ ಈ ದೇಶ ತನ್ನ ಐಕ್ಯತೆಯನ್ನು ಯಾವತ್ತೂ ಬಿಟ್ಟುಕೊಡಬಾರದು, ನಮ್ಮ ಸಂಸ್ಕೃತಿ ಶಾಶ್ವತವಾಗಿರುತ್ತದೆ’ ಎಂದು ಮೋದಿಯವರು ‘ಮನ್ ಕಿ ಬಾತ್’ ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದರು. ಈಗಲೂ ಅದು ರಾಜಕೀಯ ಲೇಪವಿಲ್ಲದ ಕಾರ್ಯಕ್ರಮವಾಗಿ ಮುಂದುವರಿದಿದೆ.

ಆಲ್ ಇಂಡಿಯಾ ರೇಡಿಯೊ, ದೂರದರ್ಶನ, ನರೇಂದ್ರ ಮೋದಿ ಮೊಬೈಲ್ ಌಪ್, ಪ್ರಧಾನ ಮಂತ್ರಿಗಳ ಕಚೇರಿಯ ಯುಟ್ಯೂಬ್ ಚ್ಯಾನೆಲ್ಗಳು, ವಾರ್ತಾ ಮತ್ತು ಪ್ರಚಾರ ಇಲಾಖೆ, allindiaradio.gov.in ಮುಂತಾದ ವೇದಿಕೆಗಳಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮ ಪ್ರಸಾರವಾಗುತ್ತದೆ.

ಅಂದಹಾಗೆ, ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಪ್ರತಿತಿಂಗಳು ಎಷ್ಟು ಐಡಿಯಾಗಳು ಲಭ್ಯವಾಗುತ್ತವೆ ಅಂತ ಗೊತ್ತಾ? ನಮ್ಮಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಅದು ಅರಂಭಗೊಂಡ ಮೊದಲ 15 ಎಪಿಸೋಡ್ ಗಳ ವರೆಗೆ ಪ್ರತಿ ತಿಂಗಳು 61,000 ಐಡಿಯಾಗಳು ಪಿ ಎಮ್ ಒಗೆ ಲಭ್ಯವಾಗುತ್ತಿದ್ದವು ಮತ್ತು 1.43 ಕೇಳುಗರು ಆಡಿಯೋ ಕ್ಲಿಪ್ಪಿಂಗ್ ಗಳನ್ನು ಕಳಿಸುತ್ತಿದ್ದರು. ಈಗ ಅವುಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಹೇಳಲಾಗಿದೆ.

‘ಮನ್ ಕಿ ಬಾತ್’ ಕೇವಲ ಗ್ರಾಮೀಣ ಭಾಗದ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಮೆಟ್ರೋ ನಗರಗಳಲ್ಲೂ ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು ನಗರವಾಸಿಗಳಲ್ಲಿ ಶೇಕಡಾ 67 ರಷ್ಟು ಜನ ಇದು ಫಲಪ್ರದಕಾರಿ ಕಾರ್ಯಕ್ರಮ ಅಂತ ಹೇಳಿದ್ದಾರೆ. ಬಿಹಾರ, ಮಧ್ಯಪ್ರದೇಶ, ಮತ್ತು ಗುಜರಾತನಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದ ಶ್ರೋತೃಗಳ ಸಂಖ್ಯೆ ಅತ್ಯಧಿಕವಾಗಿದೆ. ಆಂಧ್ರಪ್ರದೇಶ ಮತ್ತು ಅರುಣಾಚಲ ಪ್ರದೇಶದಲ್ಲಿ ಕೇಳುಗರ ಸಂಖ್ಯೆ ಕಮ್ಮಿ.

ಎಫ್ ಎಮ್ ಗಳು ಶುರುವಾದ ಮೇಲೆ ರೆಡಿಯೊಗೆ ಮರುಜನ್ಮ ಸಿಕ್ಕಿದ್ದು ನಿಜವಾದರೂ ಅದಕ್ಕೆ ಖದರ್ ಬಂದಿದ್ದು ಮಾತ್ರ ‘ಮನ್ ಕಿ ಬಾತ್’ ಕಾರ್ಯಕ್ರಮ ಅರಂಭವಾದ ಮೇಲೆ. ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಕಾರ್ಯಕ್ರಮ ಬಿತ್ತರಗೊಳ್ಳಲಾರಂಭಕ್ಕೆ ಮೊದಲು ಅಲ್ ಇಂಡಿಯಾ ರೆಡಿಯೊನಲ್ಲಿ ಜಾಹಿರಾತು ದರ ಪ್ರತಿ 10 ಸೆಕೆಂಡುಗಳಿಗೆ ರೂ.500 ರಿಂದ ರೂ.1,500 ಇತ್ತು. ‘ಮನ್ ಕಿ ಬಾತ್’ ಕಾರ್ಯಕ್ರಮದ ಸಮಯದಲ್ಲಿ ಅದೇ 10 ಸೆಕೆಂಡುಗಳ ಜಾಹೀರಾತಿಗೆ ರೂ. 2 ಲಕ್ಷ!

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಅತಿಥಿಗಳನ್ನೂ ಕರೆಸುತ್ತಾರೆ. 2015ರಲ್ಲಿ ಇವರ ಮೊದಲ ಅತಿಥಿ ಆದವರು ಭಾರತಕ್ಕೆ ಭೇಟಿ ನೀಡಿದ್ದ ಆಗಿನ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ. ಆಮೇಲೆ ಸೆಪ್ಟೆಂಬರ್ 2019ರಲ್ಲಿ ಭಾರತದ ಲೆಜೆಂಡರಿ ಗಾಯಕಿ ದಿವಂಗತ ಲತಾ ಮಂಗೇಶ್ಕರ್ ಅವರು ಪ್ರಧಾನಿ ಮೋದಿಯವರ ಅತಿಥಿಯಾಗಿದ್ದರು. ವೈದ್ಯರು, ಲಾಯರ್ ಗಳು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವವರನ್ನು ಪ್ರಧಾನಿಯವರು ಅತಿಥಿಗಳನ್ನಾಗಿ ಅಮಂತ್ರಿಸುತ್ತಾರೆ.

ಆಗಲೇ ಹೇಳಿದ ಹಾಗೆ ‘ಮನ್ ಕಿ ಬಾತ್’ ನಲ್ಲಿ ಮೋದಿಯವರು ಜನರೊಂದಿಗೆ ನೇರ ಸಮಾಲೋಚನೆ ನಡೆಸುತ್ತಾರೆ. ಅವರ ಸ್ವರದಲ್ಲಿನ ಆಪ್ತತೆ, ಪ್ರಾಮಾಣಿಕತೆ ಮನಸ್ಸಿಗೆ ಮುದ ನೀಡುತ್ತದೆ. ಕೇಳುಗರಲ್ಲಿ ತಮ್ಮ ಕುಟುಂಬದ ಸದಸಯರೊಬ್ಬರೊಂದಿಗೆ ಮಾತಾಡುತ್ತಿರುವ ಭಾವನೆ ಮೂಡುತ್ತದೆ.

20 ನಿಮಿಷಗಳ ಕಾರ್ಯಕ್ರಮದಲ್ಲಿ ಪ್ರಧಾನಿಗಳು, ಹತ್ತು ಹಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ರೈತರು, ಕೃಷಿ ವಿಜ್ಞಾನ, ಸಾಧಕರು, ಪರೀಕ್ಷೆಗಳು, ಕೃಷಿಕರ ಪ್ರತಿಭಟನೆ, ಯೋಗ, ತ್ಯಾಜ್ಯ ವಿಂಗಡಣೆ, ವಿಜಯ ದಿವಸ್, ಶಿಕ್ಷಕರ ದಿನಾಚರಣೆ, ಸಾರ್ವತ್ರಿಕ ಚುನಾವಣೆ, ಕುಶಲ ಕರ್ಮಿಗಳು, ಮಳೆ, ಬೇಸಿಗೆ, ಕೋವಿಡ್, ಲಸಿಕೆ, ಅತ್ಮ ನಿರ್ಭರತೆ, ಕ್ರೀಡೆ, ಹಬ್ಬಗಳು, ಭಾರತ ರೂಪಿಸಿದ ಮಹಾನುಭಾವರು-ಹೀಗೆ ಈ ಪಟ್ಟಿಗೆ ಕೊನೆಯಿಲ್ಲ.

ಅಂದಹಾಗೆ ಜನರ ಮೇಲೆ ಅತಿಹೆಚ್ಚು ಪ್ರಭಾವ ಬೀರಿದ ‘ಮನ್ ಕಿ ಬಾತ್’ ಕಾರ್ಯಕ್ರಮಗಳ ಬಗ್ಗೆ ನೋಡುವುದಾದರೆ, ಸೆಲ್ಫೀ ವಿತ್ ಡಾಟರ್ಸ್, ಇನ್ ಕ್ರೆಡಿಬಲ್ ಇಂಡಿಯಾ, ಫಿಟ್ ಇಂಡಿಯಾ, ಸಂದೇಶ ಟು ಸೋಲ್ಜರ್ಸ್, ಖಾದಿ ಪ್ರಮೋಶನ್, ಡ್ರಗ್ ಫ್ರೀ ಇಂಡಿಯಾ ಮತ್ತು ಟೀಮ್ ತಾರಿಣಿ ಮುಂಚೂಣಿಯಲ್ಲಿ ನಿಲ್ಲುತ್ತವೆ. ಹಾಗೆಯೇ ಪ್ರಧಾನಿ ಮೋದಿಯವರು ತಮ್ಮ ಮಾತಿನಲ್ಲಿ ಅತಿಹೆಚ್ಚು ಉಪಯೋಗಿಸುವ ಪದಗಳು ಯಾವವು ಗೊತ್ತಾ? ಭಾರತ ಮತ್ತು ರಾಷ್ಟ್ರೀಯತೆ ಅತಿ ಹೆಚ್ಚು ಬಾರಿ ಉಲ್ಲೇಖಗೊಂಡಿರುವ ಶಬ್ದಗಳಾಗಿವೆ.

ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ಹಲವು ಬಾರಿ ಕನ್ನಡಿಗರನ್ನೂ ಉಲ್ಲೇಖಿಸಿದ್ದಾರೆ. ಶೌಚಾಲಯಕ್ಕಾಗಿ ಉಪವಾಸ ಧರಣಿ ನಡೆಸಿದ ರಾಯಚೂರು ಜಿಲ್ಲೆ ಗಂಗಾವತಿ ತಾಲ್ಲೂಕಿನ ಮಲ್ಲಮ್ಮ ಹೆಸರಿನ ವಿದ್ಯಾರ್ಥಿನಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್, ಶ್ರೀರಂಗಪಟ್ಟಣದ ವೀರಭದ್ರ ದೇವಸ್ಥಾನ ಹಾಗೂ ದಂಪತಿಗಳಾದ ಅನುದೀಪ್ ಹಾಗೂ ಮಿನೀಷಾ ನಡೆಸುತ್ತಿರುವ ಕಾರ್ಯವನ್ನು ಪ್ರಧಾನಿಗಳು ಹೊಗಳಿದ್ದಾರೆ.

‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಐಡಿಯಾಗಳನ್ನು ಕಳಿಸುವ ಇಚ್ಛೆ ನಿಮಗಿದ್ದರೆ MyGov, NaMo ಌಪ್ ಬಳಸಬಹುದು ಇಲ್ಲವೇ 1800-11-7800 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು. ಪ್ಯಾಕ್ಸ್ ಕಳುಹಿಸುವ ಹಾಗಿದ್ದರೆ, +91-11-23019545, 23016857 ನಂಬರ್ ಗಳಿಗೆ ಕಳಿಸಬಹುದು. ನಿಮ್ಮ ಪ್ರಶ್ನೆಗೆ ಫ್ಯಾಕ್ ಇಲ್ಲವೇ ಯಾವುದಾದರೂ ಮಾಧ್ಯಮದ ಮೂಲಕ ಉತ್ತರ ಸಿಗುತ್ತದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *