86ನೇ ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿದೇವಿ ಮೂರ್ತಿ ಹೊತ್ತು ಸಜ್ಜಾದ ಕನ್ನಡ ರಥ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚಾರ – 86th Kannada Sahitya Sammelna: A Kannada chariot carrying the idol of mother Bhuvaneshwaridevi, travels in many districts of the state


ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆಯಲ್ಲಿ ಅಕ್ಷರ ಜಾತ್ರೆ ನಡೆಸೋಕೆ ಮುಹೂರ್ತ ಕೂಡಿ ಬಂದಿದೆ. ಅಕ್ಷರ ಜಾತ್ರೆ ನಡೆಸುವುದಕ್ಕೂ ಮುನ್ನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನ್ನಡ ರಥ ಸಂಚಾರ ಮಾಡಲಿದೆ. ಅದಕ್ಕಾಗಿ ಇನ್ನೇನು ಕೆಲವು ದಿನಗಳಲ್ಲಿ ರಥ ರಾಜ್ಯದ ಹಲವು ಜಿಲ್ಲೆಗಳಿಗೆ ಹೋಗಿ ಸಮ್ಮೇಳನ ನಡೆಯುವ ಸಮಯಕ್ಕೆ ಹಾವೇರಿಗೆ ಬರಲಿದೆ.

86ನೇ ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿದೇವಿ ಮೂರ್ತಿ ಹೊತ್ತು ಸಜ್ಜಾದ ಕನ್ನಡ ರಥ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚಾರ

ತಾಯಿ ಭುವನೇಶ್ವರಿದೇವಿಯನ್ನು ಹೊತ್ತ ಕನ್ನಡ ರಥ

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಹಾವೇರಿಯಲ್ಲಿ ಜನವರಿ 6,7 ಮತ್ತು 8 ರಂದು ಮೂರು ದಿನಗಳ ಕಾಲ ನಡೆಯಲಿದೆ. ಕನ್ನಡ ಸಾಹಿತ್ಯ ಸಮ್ಮೇಳನ (kannada sahitya sammelana)ಕ್ಕೆ ಪೂರ್ವಭಾವಿಯಾಗಿ ಕನ್ನಡ ಜಾಗೃತಿ ಮೂಡಿಸೋಕೆ ಕನ್ನಡ ರಥ ನಿರ್ಮಾಣ ಮಾಡಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಗ್ರಾಮದ ಬಳಿ ಇರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಕನ್ನಡ ರಥವನ್ನು ಸಜ್ಜುಗೊಳಿಸಲಾಗಿದೆ. ಕಲಾವಿದ ಶಹಜಹಾನ್ ಮುದಕವಿ ನೇತೃತ್ವದ ತಂಡದಿಂದ ಕನ್ನಡ ರಥವನ್ನು ನಿರ್ಮಾಣ ಮಾಡಲಾಗಿದೆ. ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ ಕನ್ನಡ ರಥ ನಿರ್ಮಿಸಲಾಗುತ್ತಿದೆ. ರಥದ ಮುಂಭಾಗದಲ್ಲಿ ತಾಯಿ ಭುವನೇಶ್ವರಿದೇವಿ ಹಾಗೂ ರಥದ ಒಳಗಡೆ ಮತ್ತೊಂದು ಭುವನೇಶ್ವರಿದೇವಿಯ ಮೂರ್ತಿ ತಯಾರಿಸಲಾಗಿದೆ.

ಈಗಾಗಲೇ ಮೈಸೂರು ದಸರಾ ಸೇರಿದಂತೆ ಹಲವಾರು ಕಡೆ ಟ್ಯಾಬ್ಲೋಗಳನ್ನು ನಿರ್ಮಾಣ ಮಾಡಿರುವ ಅನುಭವ ಇರುವ ಶಹಜಹಾನ್ ಮುದಕವಿ ನೇತೃತ್ವದಲ್ಲಿ ಕನ್ನಡ ರಥ ನಿರ್ಮಾಣ ಮಾಡಲಾಗಿದ್ದು, ಕನ್ನಡ ರಥದಲ್ಲಿ ಭುವನೇಶ್ವರಿ ದೇವಿಯ ಮೂರ್ತಿ ಕೂರಿಸಿ ಬೃಹತ್ ರಥ ನಿರ್ಮಿಸಲಾಗಿದೆ. ಕನ್ನಡ ರಥ ಇನ್ನೇನು ಹೊರಡಲು ಸಜ್ಜಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಹಾಗೂ ಜಿಲ್ಲಾಧಿಕಾರಿಗಳು ರಥವನ್ನು ನೋಡಿ ಕನ್ನಡ ರಥ ಸಂಚಾರಕ್ಕೆ ಹೊರಡುವ ದಿನಾಂಕ ಅಂತಿಮಗೊಳಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರದಿಂದ ಕನ್ನಡ ರಥಕ್ಕೆ ಚಾಲನೆ ದೊರೆಯಲಿದೆ. ಅಲ್ಲಿಂದ ಭುವನೇಶ್ವರಿದೇವಿ ಮೂರ್ತಿ ಹೊತ್ತ ಕನ್ನಡ ರಥ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡದ ರಥ ಸಂಚರಿಸಿ
ಒಂದು ತಿಂಗಳ ಕಾಲ ಕನ್ನಡದ ರಥ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನ ಜನೇವರಿ 6ರ ವೇಳೆಗೆ ಕನ್ನಡ ರಥ ಯಾಲಕ್ಕಿ ಕಂಪಿನ ನಾಡು ಹಾವೇರಿಗೆ ತಲುಪಲಿದೆ. ಈಗ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚಾರಕ್ಕೆ ಹೊರಡಲು ಸಜ್ಜಾಗಿರುವ ಕನ್ನಡ ರಥಕ್ಕೆ ಕಲಾವಿದರು ಅಂತಿಮ ಟಚ್ ಕೊಡುತ್ತಿದ್ದಾರೆ. ರಥದ ಅಕ್ಕಪಕ್ಕದಲ್ಲಿ ಕರ್ನಾಟಕದ ಭೂಪಟ, ಸಿಎಂ ಮತ್ತು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ಭಾವಚಿತ್ರದ ಬ್ಯಾನರ್ ಹಾಕಿದ ನಂತರ ಕನ್ನಡ ರಥ ರಾಜ್ಯ ಸಂಚಾರ ಹೊರಡಲಿದೆ. ಜಾನಪದ ಕಲೆ, ಸಂಸ್ಕೃತಿ, ಪರಂಪರೆ ಸಾರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆವರಣದಲ್ಲಿ ಕಲಾವಿದ ಶಹಜಹಾನ್ ಮುದಕವಿ ನೇತೃತ್ವದ ತಂಡದಿಂದ ಕನ್ನಡ ರಥ ಸಜ್ಜಾಗಿರುವುದು ಜಾನಪದ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ.

TV9 Kannada


Leave a Reply

Your email address will not be published.