Aamir Khan: ಇಂಡಿಯನ್​ ಆರ್ಮಿಗೆ ಆಮಿರ್ ಖಾನ್​ ಅವಮಾನ? ‘ಲಾಲ್​ ಸಿಂಗ್​ ಚಡ್ಡಾ’ ವಿರುದ್ಧ ದೂರು ದಾಖಲು | Complaint against Aamir Khan starrer Laal Singh Chaddha for allegedly insulting Indian Army and Hindu sentiments


Laal Singh Chaddha Controversy: ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಒಂದು ದೃಶ್ಯದಲ್ಲಿ ಆಮಿರ್ ಖಾನ್​ ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯವೇ ಈಗ ವಿವಾದದ ಕೇಂದ್ರಬಿಂದು ಆಗಿದೆ.

Aamir Khan: ಇಂಡಿಯನ್​ ಆರ್ಮಿಗೆ ಆಮಿರ್ ಖಾನ್​ ಅವಮಾನ? ‘ಲಾಲ್​ ಸಿಂಗ್​ ಚಡ್ಡಾ’ ವಿರುದ್ಧ ದೂರು ದಾಖಲು

ಆಮಿರ್ ಖಾನ್

ನಟ ಆಮಿರ್​ ಖಾನ್​ (Aamir Khan) ಅವರು ಅನೇಕ ರೀತಿಯಿಂದ ಜನರ ವಿರೋಧಕ್ಕೆ ಕಾರಣ ಆಗಿದ್ದಾರೆ. ಅವರು ಇಡುವ ಪ್ರತಿ ಹೆಜ್ಜೆ ಕೂಡ ಟೀಕೆಗೆ ಒಳಗಾಗುತ್ತಿದೆ. ಅವರು ನಟಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾ ಆಗಸ್ಟ್​ 11ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರದಲ್ಲಿನ ಒಂದಷ್ಟು ದೃಶ್ಯಗಳು ಜನರ ಕೆಂಗಣ್ಣಿಗೆ ಗುರಿಯಾಗಿವೆ. ಬಿಡುಗಡೆಗೂ ಮುನ್ನ ಬಹಿಷ್ಕಾರದ ಬಿಸಿ ಅನುಭವಿಸಿದ್ದ ಈ ಚಿತ್ರ ಈಗ ಇನ್ನಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಭಾರತೀಯ ಸೇನೆಗೆ (Indian Army)  ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಅಲ್ಲದೇ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗುತ್ತಿದೆ.

‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಒಂದು ದೃಶ್ಯದಲ್ಲಿ ಆಮಿರ್ ಖಾನ್​ ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನಸಿಕವಾಗಿ ಸಮರ್ಥವಲ್ಲದ ವ್ಯಕ್ತಿಯ ಪಾತ್ರ ಇದಾಗಿದ್ದು, ಅಂಥ ವ್ಯಕ್ತಿಗೆ ಭಾರತೀಯ ಸೇನೆಯಲ್ಲಿ ಕೆಲಸ ಸಿಗುತ್ತದೆಯೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಕಾರ್ಗಿಲ್​ ಯುದ್ಧದಲ್ಲಿ ಈ ರೀತಿಯ ವ್ಯಕ್ತಿ ಹೋರಾಡಿದ್ದ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಗೆ ಅವಮಾನ ಆಗಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿ ಮೂಲದ ವಕೀಲ ವಿನೀತ್​ ಜಿಂದಾಲ್​ ಅವರು ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರತಂಡದ ವಿರುದ್ಧ ದೂರು ನೀಡಿದ್ದಾರೆ. ನಟ ಆಮಿರ್​ ಖಾನ್​, ನಿರ್ದೇಶಕ ಅದ್ವೈತ್​ ಚಂದನ್ ಹಾಗೂ ನಿರ್ಮಾಣ ಸಂಸ್ಥೆಯಾದ ‘ಪ್ಯಾರಮೌಂಟ್​ ಪಿಕ್ಚರ್ಸ್​’ ವಿರುದ್ಧ ದೂರು ನೀಡಲಾಗಿದೆ. ‘ಕಾರ್ಗಿಲ್​ ಯುದ್ಧಕ್ಕಾಗಿ ಅತ್ಯುತ್ತಮ ಮತ್ತು ಸಮರ್ಥ ಸೈನಿಕರನ್ನು ಕಳಿಸಲಾಗಿತ್ತು. ಆದರೆ ಈ ಚಿತ್ರದಲ್ಲಿ ಮಾನಸಿಕ ಸ್ತಿಮಿತ ಇಲ್ಲದ ವ್ಯಕ್ತಿಯನ್ನು ಸೈನಿಕನ ಪಾತ್ರದಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಯನ್ನು ಅವಮಾನಿಸಿದಂತೆ ಆಗಿದೆ’ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ ಜೋಡಿಯಾಗಿ ನಟಿಸಿದ್ದಾರೆ. ನಾಗ ಚೈತನ್ಯ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಮೊದಲ ದಿನ 11.70 ಕೋಟಿ ರೂಪಾಯಿ ಗಳಿಸುವಲ್ಲಿ ಈ ಚಿತ್ರ ಯಶಸ್ವಿ ಆಗಿತ್ತು. ಆದರೆ ಎರಡನೇ ದಿನ ಇದರ ಕಲೆಕ್ಷನ್​ ಗಣನೀಯವಾಗಿ ಕುಸಿದಿದೆ. ಶುಕ್ರವಾರ (ಆಗಸ್ಟ್​ 12) ಕೇವಲ 7.26 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

TV9 Kannada


Leave a Reply

Your email address will not be published. Required fields are marked *