Woman : ಪುರುಷ ದುಡಿಯುತ್ತಿದ್ದ, ತಿನ್ನುತ್ತಿದ್ದ, ತಂದು ಹಾಕುತ್ತಿದ್ದ. ಬೀಜಗಳ ಸಂರಕ್ಷಣೆ ಆದದ್ದೆಲ್ಲ ಬೀಜ ಮಾತೆಯರಿಂದ. ಇದು ಬೀಜಕ್ಕಾಗತ್ತೆ, ಬಿತ್ತನೆಗಾಗತ್ತೆ ಎಂದು ಬಿತ್ತೋದು, ಬೆಳೆಯೋದು ಎಲ್ಲವೂ ಈ ಸಮಾಜಕ್ಕೆ ತಾಯಿಯಿಂದ ಬಂದ ಬಳುವಳಿ.’ ಎಂ. ರೇಚಣ್ಣ
ಹಾದಿಯೇ ತೋರಿದ ಹಾದಿ | Haadiye Torida Haadi : ಎಂ. ರೇಚಣ್ಣ (M. Rechanna) ಅಪರೂಪದ ಬಹುಹವ್ಯಾಸಿ ವ್ಯಕ್ತಿ. ಬೀಜ ಸಂರಕ್ಷಣೆ, ಸಾವಯವ ಕೃಷಿ, ಬರವಣಿಗೆ, ಹಳೆಯ ನಾಣ್ಯಗಳು ಮತ್ತು ಕೃಷಿ ಸಲಕರಣೆಗಳ ಸಂಗ್ರಹದಂತಹ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಸಮಾಜದ ಸಂಪನ್ಮೂಲ ವ್ಯಕ್ತಿ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದವರಾದ ಇವರು ರತ್ನಚೂಡಿ, ದೊಡ್ಡ ಭೈರನೆಲ್ಲು, ಕೆಂಪು ರಾಜಭೋಗ, ಗಂಧಸಾಲೆ, ಆನಂದಿ, ಕರಿಯಕ್ಕಶಾಲಿ, ರಾಜಮುಡಿ, ಕಾಗಿಸಾಲೆ, ಬಾಸುಮತಿ, ನಾರಿಕೇಳ, ಸೇಲಂಸಣ್ಣ, ಗಿಣಿಸಾಲ, ಇಂದ್ರಾಣಿ, ಕೆನೆಪುಂಕ, ಷಷ್ಠಿಕಶಾಲಿ, ಬಂಗಾರ ಗೋವಿ, ಕರಿ ಮುಂಡಗ, ಚೌಗುರು ಇತ್ಯಾದಿ ಮುನ್ನೂರು ವಿವಿಧ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದಾರೆ. ತಾವು ಸಂಗ್ರಹಣೆ ಮಾಡಿರುವ ‘ಅಷ್ಟೂ ತಳಿಗಳು ನನ್ನದಲ್ಲ, ಇಡೀ ರೈತ ಸಮುದಾಯದ್ದು’ ಎನ್ನುತ್ತಾರೆ. ಮುಂದಿನದನ್ನು ಅವರ ಮಾತಿನಲ್ಲಿಯೇ ಓದಿಕೊಳ್ಳಿ.
ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)
(ಹಾದಿ 20)
‘ನಮ್ಮ ಹತ್ತಿರ ಇರುವ ದೇಶೀಯ ಬೀಜಗಳನ್ನು ಬೇರೆ ರೈತರಿಗೆ ವಿತರಣೆ ಮಾಡಿ ಅವರಿಂದ ಪುನಾ ಬೇರೆ ಭತ್ತದ ತಳಿ ಭತ್ತಗಳನ್ನು ನಾವು ಪಡೆಯುವುದು. ಹಾಗೆ ಪಡೆದುಕೊಂಡ ಬೀಜಗಳನ್ನು ಸಂಗ್ರಹ ಮಾಡಿ ಸ್ವಲ್ಪ ಸ್ವಲ್ಪ ಜಾಗದಲ್ಲಿ ಅಂದರೆ ಮೂರು ಅಡಿ, ಐದು ಗುಂಟೆ, ಹತ್ತು ಗುಂಟೆ ಅಷ್ಟರಲ್ಲೇ ಬೆಳೆದು 2014ರ ಹೊತ್ತಿಗೆ ಸುಮಾರು 300 ಭತ್ತದ ತಳಿಗಳನ್ನು ಸಂಗ್ರಹ ಮಾಡಿದ್ದೆವು. ಅಕ್ಕಿಗಾಗಿ ಎರಡು ಎಕರೆಯಲ್ಲಿ ಬೆಳೆದರೆ, ಬೀಜ ಸಂಗ್ರಹಣೆಗೆ ಅಂತ 100 ಗ್ರಾಂ, 50ಗ್ರಾಂ, 10ಗ್ರಾಂ ಬೀಜಗಳನ್ನು ಹಾಕುತ್ತಿದ್ದೆವು. ಬಿತ್ತನೆ ಬೀಜಗಳನ್ನು ಗೊನೆ ಸಮೇತವಾಗಿ ಹಾಗೆ ಎತ್ತಿಡುತ್ತೇವೆ. ಹಾಗೆ ಗೊನೆ ಸಮೇತವಾಗಿ ಎತ್ತಿಟ್ಟ ತೆನೆಗಳಿಂದ ಬಾಗಿಲಿಗೆ ಹಾಕುವ ತೋರಣ, ಕುಚ್ಚು, ಹೃದಯದ ಆಕೃತಿಯಲ್ಲಿ ಗೋಡೆಗೆ ಹಾಕುವ ಅಲಂಕಾರಿಕ ವಿನ್ಯಾಸಗಳನ್ನು ಮಾಡುತ್ತೇವೆ. ಮುಂದಿನ ವರ್ಷ ಅದನ್ನು ಬಿತ್ತನೆಗೂ ಬಳಸಬಹುದು.
ಹಾಳೆಗಳಲ್ಲಿ, ಗಾಜಿನ ಬಾಟಲಿಯಲ್ಲಿ, ಗೋಣಿಚೀಲದಲ್ಲಿ ಭತ್ತವನ್ನು ಶೇಖರಣೆ ಮಾಡಿದರೆ ಹುಳು ಬರುವುದಿಲ್ಲ. ಭತ್ತದ ತಳಿಗಳ ಸಂಗ್ರಹಣೆ ಅಷ್ಟೆ ಅಲ್ಲದೆಯೂ ಔಷಧೀಯ ಸಸ್ಯಗಳಾದ ಹೊರಮುನಿ, ಒಳಮುನಿ, ಆಡು ಸೋಗೆ, ಲಕ್ಕಿ ಸೊಪ್ಪು, ಅಮೃತಬಳ್ಳಿ, ಅಪ್ಪೆಮಿಡಿ, ರಾಯಲ್ ಸ್ಪೆಷಲ್, ಕೇಸರ್ ಬಾದಾಮ್, ಮಲ್ಲಿಕಾ, ಇಮಾಮ್ ಪಸಂದ್, ಮಲಗೋಬ, ಬಾಗೇನಪಲ್ಲಿ ಸೇರಿದಂತೆ ಹನ್ನೆರಡು ತಳಿಯ ಮಾವುಗಳನ್ನು ಬೆಳೆಸಿದ್ದೇವೆ. ಕಪ್ಪು ಸೀಬೆ, ಸಪೋಟ, ನೇರಳೆ, ಬಿದಿರು ಇತ್ಯಾದಿಯಾಗಿ ಹಲವು ಪ್ರಭೇದದ ಕಾಡು ಜಾತಿಯ ಸಸ್ಯಗಳನ್ನು ಎರಡು ಎಕರೆ ಭೂಮಿಯಲ್ಲಿ ಬೆಳೆಸಿದ್ದೇವೆ. ಮೈಸೂರು, ದೆಹಲಿ, ಒರಿಸ್ಸಾ, ಬಿಹಾರ್, ಹೈದರಾಬಾದ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಬೀಜಮೇಳದಲ್ಲಿ ನಾನು ನನ್ನ ಇಬ್ಬರು ಮಕ್ಕಳಾದ ಅಭಿಷೇಕ್, ಯೋಗೀಶ್ ಭಾಗವಹಿಸಿದ್ದೇವೆ. ಕೃಷಿ ಪಂಡಿತ, ಕೃಷಿ ರತ್ನ, ಅಂತಾರಾಷ್ಟ್ರೀಯ ಕೃಷಿ ರೈತ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ.’
‘ಬೀಜ ಸಂರಕ್ಷಣೆಗೆ ಮೊದಲು ಭತ್ತವನ್ನು ಯಾವುದೇ ಕಾಯಿಲೆ ಬಂದಿರದ, ತೆನೆ ಚೆನ್ನಾಗಿರುವ, ಹುಲ್ಲು ಚೆನ್ನಾಗಿ ಬೆಳೆದಿರುವುದನ್ನು ಗುರುತಿಸಿ ಅದಕ್ಕೆ ಟ್ಯಾಗ್ ಕಟ್ಟುತ್ತೇವೆ. ತೆನೆ ಸಮೇತ ಅದನ್ನು ಸಂಗ್ರಹಿಸಿ ಅದನ್ನು ಬಿತ್ತನೆ ಬೀಜವಾಗಿ ಸಂಗ್ರಹಣೆ ಮಾಡುತ್ತೇವೆ. ಹೀಗೆ ರಾಗಿ, ತರಕಾರಿ ಬೀಜಗಳು, ಹೂವಿನ ಬೀಜಗಳನ್ನು ಸಂಗ್ರಹಣೆ ಮಾಡುತ್ತೇವೆ. ನಮ್ಮ ಭತ್ತಕ್ಕೆ 5000 ವರ್ಷಗಳ ಇತಿಹಾಸವಿದೆ. ಮೊದಲು ಬೀಜದಿಂದಲೇ ಎಲ್ಲವೂ ಉತ್ಪತ್ತಿಯಾಗಿರುವುದು. ಭಗವಂತ ಎಲ್ಲವನ್ನು ಸೃಷ್ಟಿಮಾಡಿ ಆಮೇಲೆ ನಮ್ಮನ್ನು ಸೃಷ್ಟಿ ಮಾಡಿದ ತಿನ್ನೋದಕ್ಕೆ. ಆಗ ಉಡುಗೆ ಇಲ್ಲ. ಕಾಡಿನಲ್ಲಿ ಅಲೆಮಾರಿಗಳಂತೆ ಬದುಕು ಸಾಗಿಸುತ್ತಿದ್ದರು. ಪುರುಷ ದುಡಿಯುತ್ತಿದ್ದ, ತಿನ್ನುತ್ತಿದ್ದ, ತಂದು ಹಾಕುತ್ತಿದ್ದ. ಬೀಜಗಳ ಸಂರಕ್ಷಣೆ ಆದದ್ದೆಲ್ಲ ಬೀಜ ಮಾತೆಯರಿಂದ. ಇದು ಬೀಜಕ್ಕಾಗತ್ತೆ, ಬಿತ್ತನೆಗೆ ಆಗುತ್ತದೆ ಎಂದು ಬಿತ್ತೋದು, ಬೆಳೆಯೋದು ಮಾಡುವುದು ಎಲ್ಲವೂ ಈ ಸಮಾಜಕ್ಕೆ ತಾಯಿಯಿಂದ ಬಂದ ಬಳುವಳಿ.’