ಸರೋದ ಸಾಮ್ರಾಟ್ ಉಸ್ತಾದ ಅಲಿ ಅಕ್ಬರ್ ಖಾನ
Ustad Ali Akbar Khan Birth Centenary : ಚಲನಚಿತ್ರಗಳಿಗೆ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರು ನೀಡಿರುವ ಸಂಗೀತದಲ್ಲಿ ಚೇತನ್ ಆನಂದರ ಆಂಧಿಯಾ ಚಿತ್ರಕ್ಕೆ ನೀಡಿರುವ ಸಂಗೀತ ಅತ್ಯುತ್ತಮವಾದುದು ಎನ್ನುವ ಅಭಿಪ್ರಾಯವಿದೆ. ತಪನ್ ಸಿನ್ಹ ಅವರ ಚಿತ್ರಕ್ಕೆ ನೀಡಿದ ಸಂಗೀತಕ್ಕೆ ಇವರಿಗೆ ವರ್ಷದ ಅತ್ಯುತ್ತಮ ಸಂಗೀತಗಾರ ಪ್ರಶಸ್ತಿಯೂ ಲಭಿಸಿತು. ಠಾಕೂರರ ಸಣ್ಣ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. ಖಾನ್‌ಸಾಹೇಬರ ಸೂಕ್ಷ್ಮತೆ ಬಗ್ಗೆ ತಪನ್ ಸಿನ್ಹಾ ಅವರು ತುಂಬಾ ಭಾವಪರವಶರಾಗಿ ಮಾತನಾಡುತ್ತಾರೆ. ಠಾಕೂರರು ಗೆಳೆಯರು ಎನ್ನುವ ಕಾರಣಕ್ಕೆ ಖಾನ್ ಸಾಹೇಬರ ತಂದೆ ಈ ಸಿನಿಮಾವನ್ನು ನೋಡಿದರಂತೆ. ಅದರ ಸಂಗೀತ ಬಾಬಾರವರಿಗೆ ತುಂಬಾ ಮೆಚ್ಚುಗೆಯಾಗಿ ಯಾರ ಸಂಗೀತ ಅಂತ ವಿಚಾರಿಸಿಕೊಂಡರಂತೆ. ಅಲಿ ಅಕ್ಬರ್ ಖಾನರ ಸಂಗೀತ ಅಂತ ಗೊತ್ತಾದ ತಕ್ಷಣ ಮಗನಿಗೆ ಸಿನಿಮಾಗೆ ಸಂಗೀತ ನೀಡುವುದನ್ನು ಮುಂದುವರಿಸು ಅಂತ ಟೆಲಿಗ್ರಾಂ ಕಳುಹಿಸಿದರಂತೆ. ಆದರೆ ಮಗ ಆ ವೇಳೆಗಾಗಲೇ ಸಿನಿಮಾಕ್ಕೆ ಸಂಗೀತ ನೀಡುವುದನ್ನು ನಿಲ್ಲಿಸಲು ತೀರ್ಮಾನಿಸಿದ್ದರು. ಇನ್ನು ಮುಂದೆ ಸಿನಿಮಗೆ ಸಂಗೀತ ನೀಡುವುದಿಲ್ಲ ಎಂದು ಮರು ಟೆಲಿಗ್ರಾಂ ಕಳುಹಿಸಿದರು.
ಶೈಲಜ ಮತ್ತು ವೇಣುಗೋಪಾಲ್, ಲೇಖಕರು, ಅನುವಾದಕರು, ಮೈಸೂರು
(ಭಾಗ 2)
ಆದರೂ ನಂತರದಲ್ಲಿ ಆಗೀಗ ಸಿನಿಮಾದಲ್ಲಿ ಕೆಲಸಮಾಡಿದ್ದಾರೆ. ಅಮೆರಿಕೆಯಲ್ಲಿ 1993ರಲ್ಲಿ ಬರ್ಟಿ ಲೂಸಿಯವರ ‘ಲಿಟಲ್ ಬುದ್ಧ’ ಸಿನಿಮಾಕ್ಕೆ ಕೂಡ ಸಂಗೀತ ನೀಡಿದರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರೆಡೆಗೆ ತೆಗೆದುಕೊಂಡು ಹೋಗುವುದಕ್ಕೆ ಸಿನೆಮಾ ಒಂದು ಒಳ್ಳೆಯ ಮಾಧ್ಯಮ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಸಿನಿಮಾಕ್ಕೆ ಸಂಗೀತ ನೀಡಲು ಒಪ್ಪಿಕೊಳ್ಳುತ್ತಿದ್ದರು. ರಿಕ್ಷಾವಾಲಾಗಳು, ಟಾಂಗಾವಾಲಾಗಳೂ ಕೂಡ ಈ ಶಾಸ್ತ್ರೀಯ ಸಂಗೀತವನ್ನು ಕೇಳುವಂತಾಗಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು.
ಲಾರ್ಡ್ ಯಹೂದಿ ಮೆನುಹಿನ್‌ರ ಆಹ್ವಾನದ ಮೇರೆಗೆ ಖಾನ್‌ಸಾಹೇಬರು 1955ರಲ್ಲಿ ಅಮೆರಿಕಾಕ್ಕೆ ಪ್ರಯಾಣ ಮಾಡಿದರು. ನ್ಯೂಯಾರ್ಕಿನ ಮಾಡರ್ನ್ ಆರ್ಟ್ಸ್ ಮ್ಯೂಸಿಯಮ್ಮಿನಲ್ಲಿ ಕಾರ್ಯಕ್ರಮ ನೀಡಿದರು. ಇವರ ಹಲವಾರು ಧ್ವನಿಸುರುಳಿಗಳು ಹೊರಬಂದಿವೆ. ಭಾರತೀಯ ಶಾಸ್ತ್ರೀಯ ಸಂಗೀತದ ಮೊಟ್ಟ ಮೊದಲ ಎಲ್‌ಪಿ ರೆಕಾರ್ಡಿಂಗ್ ಖಾನ್ ಸಾಹೇಬರದ್ದೇ. ಭಾರತೀಯ ಶಾಸ್ತ್ರಿಯ ಸಂಗೀತವನ್ನು ಪಾಶ್ಚಾತ್ಯ ಟಿವಿಯಲ್ಲಿ ಮೊತ್ತಮೊದಲು ನೀಡಿದವರೂ ಖಾನ್‌ಸಾಹೇಬರೆ. ಇವೆಲ್ಲವೂ 1960ರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವು ಪಾಶ್ಚಿಮಾತ್ಯ ಪ್ರಪಂಚದಲ್ಲಿ ಜನಪ್ರಿಯವಾಗಲು ಕಾರಣವಾದವು.
ಖಾನ್ ಸಾಹೇಬರು ಕಲ್ಕತ್ತೆಯಲ್ಲಿ 1956ರಲ್ಲಿ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಕ್ ಪ್ರಾರಂಭಿಸಿದರು. ನಂತರ ಪಾಶ್ಚಾತ್ಯ ವಿದ್ಯಾರ್ಥಿಗಳಲ್ಲಿ ಇರುವ ಅಸಾಧಾರಣ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಗಮನಿಸಿ ಅಮೇರಿಕಾದಲ್ಲಿ 1965ರಿಂದ ಪಾಠಮಾಡಲು ಪ್ರಾರಂಭಿಸಿದರು. ಕ್ಯಾಲಿಫೋರ್ನಿಯಾದ ಸ್ಯಾನ್ ರಾಫೆಲ್‌ನಲ್ಲಿ 1967ರಲ್ಲಿ ಅಲಿ ಆಕ್ಬರ್ ಕಾಲೇಜ್ ಆಫ್ ಮ್ಯೂಸಿಕ್ ಪ್ರಾರಂಭಿಸಿದರು. ಅದು ಪ್ರಪಂಚದಲ್ಲೇ ಹಿಂದೂಸ್ತಾನಿ ಸಂಗೀತ ಕಲಿಸುವ ಅತ್ಯುತ್ತಮ ಶಾಲೆಯಾಯಿತು. ಮುಂದೆ ಯಾರಾದರೂ ಹಿಂದೂಸ್ತಾನಿ ಸಂಗೀತ ಕಲಿಯಬೇಕಾದರೆ, ಇಲ್ಲಿಗೇ ಬರಬೇಕಾಗುತ್ತದೆ ಎಂದು ಖಾನ್ ಸಾಹೇಬರು ಹೆಮ್ಮೆಯಿಂದ ಹೇಳಿಕೊಂಡಿದ್ದೂ ಇದೆ. ಮುಂದೆ ಬೇಸಲ್, ಸ್ವಿಟ್ಜರ್‌ಲ್ಯಾಂಡ್ ಮೊದಲಾದ ಕಡೆಗಳಲ್ಲಿ ಅಲ್ಲಿನ ಆಸಕ್ತರಿಗಾಗಿ ಶಾಖೆಗಳನ್ನು ಪ್ರಾರಂಭಿಸಿದರು. ತಂದೆಯವರ ಆದರ್ಶಕ್ಕೆ ಸ್ವಲ್ಪವೂ ಕುಂದಾಗದಂತೆ ಕೊನೆಯವರೆಗೂ ಅವರು ವಿದ್ಯಾದಾನ ಮಾಡುತ್ತಾ ಇದ್ದರು.