Anand Mahindra: ಐರನ್ ಮ್ಯಾನ್ ಸೂಟ್ ತಯಾರಿಸಿದ ಯುವಕನಿಗೆ ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ | Anand Mahindra Kept His Promise helps Manipur Iron Man Suit boy to Continue Education in Mahindra University


Anand Mahindra: ಐರನ್ ಮ್ಯಾನ್ ಸೂಟ್ ತಯಾರಿಸಿದ ಯುವಕನಿಗೆ ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ

ಐರನ್ ಮ್ಯಾನ್ ಸೂಟ್ ಬಾಯ್ ಪ್ರೇಮ್

ಕೆಲವು ತಿಂಗಳ ಹಿಂದೆ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ (Anand Mahindra) ಮಣಿಪುರದ ಹದಿಹರೆಯದವರು ಸ್ಕ್ರ್ಯಾಪ್‌ನಿಂದ ಐರನ್ ಮ್ಯಾನ್ ಸೂಟ್ (Iron Man Suit) ಅನ್ನು ನಿರ್ಮಿಸಿದ್ದನ್ನು ಕಂಡು ಪ್ರಭಾವಗೊಂಡಿದ್ದರು. ಅವರ ಪ್ರತಿಭೆಯನ್ನು ಮೆಚ್ಚಿ ಸರಣಿ ಟ್ವೀಟ್‌ಗಳನ್ನು ಕೂಡ ಮಾಡಿದ್ದರು. ಆನಂದ್ ಮಹೀಂದ್ರಾ ಅವರು ಪ್ರೇಮ್ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದರು. ಹಾಗೇ, ಮಹೀಂದ್ರಾ ಫೌಂಡೇಶನ್ (Mahindra Foundation) ವತಿಯಿಂದಲೇ ಪ್ರೇಮ್ ಮತ್ತು ಅವರ ಒಡಹುಟ್ಟಿದವರ ಮುಂದುವರಿದ ಶಿಕ್ಷಣವನ್ನು ನೋಡಿಕೊಳ್ಳುವುದಾಗಿ ಘೋಷಿಸಿದ್ದರು. ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಆನಂದ್ ಮಹೀಂದ್ರಾ ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದು, ಪ್ರೇಮ್ ಇಂಜಿನಿಯರಿಂಗ್ ಓದಲು ಹೈದರಾಬಾದ್‌ನ ಮಹೀಂದ್ರಾ ವಿಶ್ವವಿದ್ಯಾಲಯಕ್ಕೆ (Mahindra University) ಆಗಮಿಸಿದ್ದಾನೆ ಎಂದು ತಿಳಿಸಿದ್ದಾರೆ.

‘ನಿಮಗೆ ಪ್ರೇಮ್ ಬಗ್ಗೆ ನೆನಪಿದೆಯಾ? ಈತ ಇಂಫಾಲ್‌ನ ನಮ್ಮ ಯುವ ಭಾರತೀಯ ಐರನ್‌ಮ್ಯಾನ್’ ಎಂದು ಆನಂದ್ ಮಹೀಂದ್ರಾ ತಮ್ಮ ಟ್ವೀಟ್​ನಲ್ಲಿ ಕೇಳಿದ್ದಾರೆ. ಆತ ಬಯಸಿದಂತೆ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯಲು ನಾವು ಆತನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದೆವು. ಅದರಂತೆ ಆತ ಹೈದರಾಬಾದ್‌ನ ಮಹೀಂದ್ರಾ ಯುನಿವರ್ಸಿಟಿಗೆ ಆಗಮಿಸಿದ್ದಾರೆ ಎಂದು ಹಂಚಿಕೊಳ್ಳಲು ನನಗೆ ಖುಷಿಯಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಹಕಾರ ನೀಡಿದ, ಆತನ ಪ್ರಯಾಣದ ಸಮಯದಲ್ಲಿ ಉತ್ತಮ ಕಾಳಜಿ ವಹಿಸಿದ ಇಂಡಿಗೋ ಏರ್‌ಲೈನ್ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ಕೂಡ ಅವರು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಸೆಪ್ಟೆಂಬರ್‌ನಲ್ಲಿ ಪ್ರೇಮ್ ಕುರಿತು ಟ್ವೀಟ್​ನಲ್ಲಿ ಮೊದಲು ಮಾಹಿತಿ ಹಂಚಿಕೊಂಡಿದ್ದರು. ಯಾವುದೇ ತರಬೇತಿಯಿಲ್ಲದೆ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ಐರನ್ ಮ್ಯಾನ್ ಸೂಟ್ ಅನ್ನು ನಿರ್ಮಿಸುವಲ್ಲಿ ಪ್ರೇಮ್ ಯಶಸ್ವಿಯಾಗಿದ್ದರು. ಇದು ಆನಂದ್ ಮಹೀಂದ್ರಾ ಸೇರಿದಂತೆ ಅನೇಕರನ್ನು ಪ್ರಭಾವಿಸಿತ್ತು. ಇದೀಗ ಆತನಿಗೆ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಓದಿಸಲು ಆನಂದ್ ಮುಂದಾಗಿದ್ದಾರೆ.

ಆನಂದ್ ಮಹೀಂದ್ರಾ ಈ ರೀತಿ ಸಹಾಯಹಸ್ತ ಚಾಚಿರುವುದು ಇದೇ ಮೊದಲೇನಲ್ಲ. ತಮಿಳುನಾಡಿನಲ್ಲಿ ಇಡ್ಲಿ ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ 80 ವರ್ಷದ ವೃದ್ಧೆ ಕೆ. ಕಮಲಾಥಾಳ್ ಅವರಿಗೆ ಆನಂದ್ ಮಹೀಂದ್ರಾ ಜಮೀನು ಖರೀದಿಸಿ, ಕ್ಯಾಂಟೀನ್ ನಿರ್ಮಿಸಿಕೊಟ್ಟಿದ್ದರು. ಕಮಲಾಥಾಳ್ ಕಳೆದ 30 ವರ್ಷಗಳಿಂದಲೂ ಇಡ್ಲಿ ತಯಾರಿಸಿ, ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿದ್ದರು. ಇವರು ಮೂಲತಃ ವಡಿವೇಲಂಪಲಯಂ ಗ್ರಾಮದವರು. 2019ರವರೆಗೆ ಇವರ ಬಗ್ಗೆ ತುಂಬ ಜನರಿಗೆ ಗೊತ್ತಿರಲಿಲ್ಲ. ಅವರ ಪಾಡಿಗೆ ಅವರು, ಬೆಳಗೆದ್ದು ಇಡ್ಲಿ ತಯಾರಿಸಿ ಬಡ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ 1 ರೂ.ಗೆ ಬಡಿಸುತ್ತಿದ್ದರು. 2019ರಲ್ಲಿ ಈ ವೃದ್ಧೆ 1 ರೂಪಾಯಿಗೆ ಒಂದು ಇಡ್ಲಿ ಮಾರುವ ವಿಷಯ 2019ರ ಸೆಪ್ಟೆಂಬರ್​ನಲ್ಲಿ ದೊಡ್ಡ ಸುದ್ದಿಯೇ ಆಗಿತ್ತು. ಅದನ್ನು ನೋಡಿದ್ದ ಉದ್ಯಮಿ ಆನಂದ್ ಮಹೀಂದ್ರಾ, ಇಡ್ಲಿ ಅಮ್ಮನ ಉದ್ಯಮದಲ್ಲಿ ತಾವು ಹೂಡಿಕೆ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಅದರಂತೆ ಇಡ್ಲಿ ಅಮ್ಮನಿಗಾಗಿ ಹೊಸ ಕ್ಯಾಂಟೀನ್​ ನಿರ್ಮಿಸಿಕೊಟ್ಟಿದ್ದರು. ಅದಕ್ಕಾಗಿ ತಾವೇ ಭೂಮಿಯನ್ನು ಕೂಡ ಖರೀದಿಸಿದ್ದರು.

ಇದನ್ನೂ ಓದಿ: ತಮಿಳುನಾಡಿನ ‘ಇಡ್ಲಿ ಅಮ್ಮ’ನಿಗಾಗಿ ಕೆಲವೇ ತಿಂಗಳಲ್ಲಿ ಹೊಸ ಮನೆ, ಕ್ಯಾಂಟೀನ್​ ನಿರ್ಮಾಣ; ಭೂಮಿ ಖರೀದಿ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

Avani Lekhara: ಚಿನ್ನದ ಹುಡುಗಿ ಅವನಿಗೆ 3 ಕೋಟಿ ಬಹುಮಾನ ಘೋಷಣೆ; ಮಹೀಂದ್ರಾದಿಂದ ವಿಶೇಷ ಉಡುಗೊರೆ

TV9 Kannada


Leave a Reply

Your email address will not be published. Required fields are marked *