Andrew Symmonds: ಐಪಿಎಲ್​ನಲ್ಲಿ ನನಗೆ ಜಾಸ್ತಿ ದುಡ್ಡು ಸಿಕ್ಕಿದಕ್ಕೆ ನಮ್ಮ ಗೆಳೆತನ ಮುರಿದು ಬಿತ್ತು..! | IPL Money As Prime Reason for Fallout With Michael Clarke: Andrew Symmonds


Andrew Symmonds: ಐಪಿಎಲ್​ನಲ್ಲಿ ನನಗೆ ಜಾಸ್ತಿ ದುಡ್ಡು ಸಿಕ್ಕಿದಕ್ಕೆ ನಮ್ಮ ಗೆಳೆತನ ಮುರಿದು ಬಿತ್ತು..!

Andrew Symmonds

ಐಪಿಎಲ್​ ಶ್ರೀಮಂತ ಕ್ರಿಕೆಟ್ ಲೀಗ್ ಎಂಬುದು ಗೊತ್ತಿರುವ ವಿಷಯ. ಇದೇ ಕಾರಣದಿಂದ ಈ ಲೀಗ್​ನಲ್ಲಿ ಭಾಗವಾಗಲು ವಿದೇಶಿ ಆಟಗಾರರು ಕೂಡ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ತಂಡಗಳ ಆಯ್ಕೆ ವೇಳೆ ಅಥವಾ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಅಚ್ಚರಿ ಮೂಡಿಸುತ್ತದೆ. ಏಕೆಂದರೆ ಕೆಲ ಆಟಗಾರರಿಗೆ ಕೋಟಿಗಟ್ಟಲೆ ನೀಡಿದ್ರೆ ಮತ್ತೆ ಕೆಲ ಸ್ಟಾರ್ ಆಟಗಾರರು ಕಡಿಮೆ ಮೊತ್ತಕ್ಕೆ ಬಿಕರಿಯಾಗುತ್ತಾರೆ. ಉದಾಹರಣೆಗೆ ಕಳೆದ ಸೀಸನ್​ನಲ್ಲಿ ಕ್ರಿಸ್ ಮೋರಿಸ್ 16.25 ಕೋಟಿಗೆ ಹರಾಜಾಗಿದ್ದರು. ಮತ್ತೊಂದೆಡೆ ಐಪಿಎಲ್​ನಲ್ಲಿ ಅಬ್ಬರಿಸಿ ಇತಿಹಾಸ ಬರೆದಿದ್ದ ಕ್ರಿಸ್ ಗೇಲ್ 7.5 ಕೋಟಿಗಿಂತ ಅಧಿಕ ಮೊತ್ತ ಪಡೆದಿಲ್ಲ ಎಂದರೆ ನಂಬಲೇಬೇಕು. ಇಂತಹದೊಂದು ಅಸಮಾನತೆ ಆಟಗಾರರ ವೈಮನಸ್ಸಿಗೂ ಕಾರಣವಾಗುತ್ತೆ ಎಂಬುದಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ನೀಡಿದ ಹೇಳಿಕೆಯೇ ಸಾಕ್ಷಿ.

ಆಂಡ್ರ್ಯೂ ಸೈಮಂಡ್ಸ್ ಮತ್ತು ಮೈಕೆಲ್ ಕ್ಲಾರ್ಕ್ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಆದರೆ ಐಪಿಎಲ್‌ನಲ್ಲಿ ಸಿಕ್ಕಿದಮೊತ್ತದಿಂದಾಗಿ ಇಬ್ಬರು ನಡುವೆ ಬಿರುಕು ಉಂಟಾಗಿತ್ತು ಎಂದು ಖುದ್ದು ಸೈಮಂಡ್ಸ್ ಬಹಿರಂಗಪಡಿಸಿದ್ದಾರೆ. ನನಗೆ ಐಪಿಎಲ್​ನಲ್ಲಿ ದೊಡ್ಡ ಮೊತ್ತ ಸಿಕ್ಕಿದ್ದರಿಂದ ಅಂದು ಮೈಕೆಲ್ ಕ್ಲಾರ್ಕ್​ ಅಸೂಯೆಪಟ್ಟರು. ಇದುವೇ ಆ ಬಳಿಕ ನಮ್ಮಿಬ್ಬರ ನಡುವಣ ವೈಮನಸ್ಸಿಗೆ ಕಾರಣವಾಯಿತು ಎಂದು ಮಾಜಿ ಆಸೀಸ್ ಕ್ರಿಕೆಟಿಗ ಹೇಳಿದ್ದಾರೆ.

“ಮೈಕೆಲ್ ಕ್ಲಾರ್ಕ್ ತಂಡಕ್ಕೆ ಬಂದಾಗ ನಾವು ತುಂಬಾ ಆತ್ಮೀಯರಾದೆವು. ನಾನು ಅವರೊಂದಿಗೆ ಸಾಕಷ್ಟು ಬ್ಯಾಟಿಂಗ್ ಮಾಡುತ್ತಿದ್ದೆ ಮತ್ತು ಅವರ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದೆವು. ನಮ್ಮಿಬ್ಬರ ನಡುವೆ ಒಳ್ಳೆ ಬಾಂಧವ್ಯವಿತ್ತು. ಐಪಿಎಲ್ ಶುರುವಾದಾಗ ಕೈತುಂಬಾ ಹಣ ಸಿಕ್ಕಿತು. ಇದುವೇ ಕ್ಲಾರ್ಕ್​ನಲ್ಲಿ ನನ್ನ ಮೇಲೆ ಸ್ವಲ್ಪ ಅಸೂಯೆ ಮೂಡಿಸಿತು. ಹಣ ಒಳ್ಳೆಯದೇ ಆದರೆ ಹಾನಿಯೂ ಉಂಟು ಮಾಡಬಹುದು. ನನ್ನ ಪ್ರಕಾರ , ಹಣದ ಕಾರಣದಿಂದ ನಮ್ಮ ಸಂಬಂಧ ಹಳಸಿತು. ಈಗ ಅವನು ನನ್ನೊಂದಿಗೆ ಸ್ನೇಹಿತರಲ್ಲ ಮತ್ತು ನನಗೆ ಅದರಲ್ಲಿ ಯಾವುದೇ ಬೇಸರ ಕೂಡ ಇಲ್ಲ ಎಂದು ಸೈಮಂಡ್ಸ್ ಹೇಳಿದ್ದಾರೆ.

ಐಪಿಎಲ್ 2008 ರ ಹರಾಜಿನಲ್ಲಿ ಸೈಮಂಡ್ಸ್ ಎರಡನೇ ಅತಿ ಹೆಚ್ಚು ಮಾರಾಟವಾದ ಆಟಗಾರರಾಗಿದ್ದರು. ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಅವರನ್ನು 5 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿತ್ತು. ಆದರೆ ಮೈಕೆಲ್ ಕ್ಲಾರ್ಕ್​ಗೆ ಐಪಿಎಲ್​ನಲ್ಲಿ ಅವಕಾಶ ದೊರೆತಿರಲಿಲ್ಲ. ಅಂದು ಸೈಮಂಡ್ಸ್ ಉತ್ತಮ ಮೊತ್ತ ಪಡೆದಿದ್ದರಿಂದ ಮೈಕೆಲ್ ಕ್ಲಾರ್ಕ್​ ತನ್ನ ಮೇಲೆ ಅಸೂಯೆ ಹೊಂದಿದ್ದ ಎಂದು ಇದೀಗ ಆಂಡ್ರ್ಯೂ ಸೈಮಂಡ್ಸ್ ಬಹಿರಂಗಪಡಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *