ತುಳುನಾಡ ಆರಾಧ್ಯ ಗುಳಿಗ ದೈವಗೆ ಸಚಿವ ಆರಗ ಜ್ಞಾನೇಂದ್ರ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಖಂಡಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

Image Credit source: vijaykarnataka.com
ಮಂಗಳೂರು: ತುಳುನಾಡ ಆರಾಧ್ಯ ಗುಳಿಗ ದೈವಗೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಖಂಡಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಮಂಗಳೂರಿನ ಹೊರವಲಯದ ಪಚ್ಚನಾಡಿಯ ಬಂದಲೆ ಎಂಬಲ್ಲಿರುವ ಶ್ರೀಮಂತ ರಾಜ ಗುಳಿಗ ಕ್ಷೇತ್ರದಲ್ಲಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದಿಂದ ಪ್ರಾರ್ಥನೆ ಸಲ್ಲಿಸಲಾಗಿದೆ. ನಾಟಕ ಪ್ರದರ್ಶನದ ವೇಳೆ ತಪ್ಪಾಗಿದ್ದರೆ ಕ್ಷಮಿಸುವಂತೆ ಮತ್ತು ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸದ್ಬುದ್ಧಿ ನೀಡುವಂತೆ ಪ್ರಾರ್ಥನೆ ಸಲ್ಲಿಕೆ ಮಾಡಲಾಗಿದೆ. ಮುಂದಿನ ವರ್ಷ ಮತ್ತೊಮ್ಮೆ ಶಿವದೂತ ಗುಳಿಗ ನಾಟಕ ಪ್ರದರ್ಶನ ಆಯೋಜಿಸುವುದಾಗಿ ಸಂಕಲ್ಪ ಮಾಡಲಾಗಿದೆ. ಇನ್ನು 30ಕ್ಕೂ ಹೆಚ್ಚು ವಾಹನಗಳಲ್ಲಿ ಕಾಂಗ್ರೆಸ್ ಮುಖಂಡರು ಗುಳಿಗ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ರಂಗಸಿಂಗಾರ ತಂಡದಿಂದ ನಾಟಕ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಣಿಕ ಗುಳಿಗ ದೈವವನ್ನು ಜಾಪಾಳ್ ಮಾತ್ರೆಗೆ ಆರಗ ಜ್ಞಾನೇಂದ್ರ ಹೋಲಿಸಿದ್ದರು ಎನ್ನಲಾಗಿದೆ.
ಆರಗ ಜ್ಞಾನೇಂದ್ರ ವಿರುದ್ಧ ದೈವ ನರ್ತಕರು ಆಕ್ರೋಶ
ಆರಗ ಜ್ಞಾನೇಂದ್ರ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ದೈವ ನರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಕರಾವಳಿಯ ದೈವ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಗೃಹ ಸಚಿವರು ಫ್ಲೆಕ್ಸ್ ನೋಡಿ ಗುಳಿಗೆ-ಗುಳಿಗೆ ಎಂದು ಹೇಳಿದ್ದಾರೆ. ನಮ್ಮ ದೈವವನ್ನು ಒಂದು ಮಾತ್ರೆಗೆ ಹೋಲಿಸಿದ್ದಾರೆ. ನಮ್ಮ ದೈವವೇ ಅವರಿಗೆ ಉತ್ತರ ಕೊಡಬೇಕು. ಎಲ್ಲಾ ಗುಳಿಗ ಶಕ್ತಿಗಳು ಒಟ್ಟು ಸೇರಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು. ದೈವ-ದೇವರ ಸನ್ನಿಧಿಯಲ್ಲಿ ಬಂದು ಗೃಹಸಚಿವರು ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಪ್ರಭಾಕರ ಶಾಂತಿಕೋಡಿ ಒತ್ತಾಯಿಸಿದ್ದಾರೆ.