Asia Cup 2022: ಏಷ್ಯಾಕಪ್​ಗೆ ಕ್ವಾಲಿಫೈ ಆದ ಹಾಂಗ್​ ಕಾಂಗ್ ತಂಡ: ಭಾರತ-ಪಾಕ್ ವಿರುದ್ಧ ಸೆಣೆಸಾಟಕ್ಕೆ ಸಜ್ಜು | Hong Kong qualified for the Asia Cup 2022 and will take on India and Pakistan in Group A


Hong Kong vs United Arab Emirates: ಏಷ್ಯಾಕಪ್​ಗೆ ಕ್ವಾಲಿಫೈ ಆಗಲು ನಡೆದ ಏಷ್ಯಾಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಹಾಂಕ್ ಗಾಂಗ್ ತಂಡ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ ಜೊತೆ ಸ್ಥಾನ ಪಡೆದುಕೊಂಡಿದೆ.

ಬಹುನಿರೀಕ್ಷಿತ ಏಷ್ಯಾಕಪ್ 2022 (Asia Cup 2022) ಟೂರ್ನಿಗೆ ಆಗಸ್ಟ್ 27ಕ್ಕೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ಏಷ್ಯಾಕಪ್​ಗೆ ಕ್ವಾಲಿಫೈ ಆಗಲು ನಡೆದ ಏಷ್ಯಾಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಹಾಂಕ್ ಗಾಂಗ್ (Hong Kong) ತಂಡ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ (India vs Pakistan) ಜೊತೆ ಸ್ಥಾನ ಪಡೆದುಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಹಾಂಕ್ ಗಾಂಗ್ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಏಷ್ಯಾಕಪ್​ಗೆ ಲಗ್ಗೆಯಿಟ್ಟಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ 19.3 ಓವರ್​ಗಳಲ್ಲಿ 147 ರನ್​ಗೆ ಆಲೌಟ್ ಆಯಿತು. ತಂಡದ ಪರ ನಾಯಕ ಸಿ. ರಿಜ್ವಾನ್ 44 ಎಸೆತಗಳಲ್ಲಿ 49 ರನ್ ಗಳಿಸಿದರೆ, ಜವಾರ್ ಫಾರಿದ್ 27 ಎಸೆತಗಳಲ್ಲಿ 41 ರನ್ ಸಿಡಿಸಿದರು. ಉಳಿದ ಬ್ಯಾಟರ್​ಗಳೆಲ್ಲ ಸಂಪೂರ್ಣ ವೈಫಲ್ಯ ಅನುಭವಿಸಿದರು. ಹಾಂಕ್ ಕಾಂಗ್ ಪರ ಎಸ್ ಖಾನ್ 4 ವಿಕೆಟ್ ಕಿತ್ತರೆ, ಆಯುಶ್ ಶುಕ್ಲಾ 3 ವಿಕೆಟ್ ಪಡೆದರು.

148 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಹಾಂಕ್ ಕಾಂಗ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ನಿಜಕತ್ ಖಾನ್ ಹಾಗೂ ಯಾಸಿಮ್ ಮುರ್ತಾಜ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 10.5 ಓವರ್​ನಲ್ಲಿ 85 ರನ್​ಗಳ ಕಾಣಿಕೆ ನೀಡಿದರು. ನಿಜಕತ್ 39 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರೆ, ಮುರ್ತಾಜ 43 ಎಸೆತಗಳಲ್ಲಿ 58 ರನ್ ಸಿಡಿಸಿದರು. ನಂತರ ಬಂದ ಬಾಬರ್ ಹಯಾತ್ 26 ಎಸೆತಗಳಲ್ಲಿ ಅಜೇಯ 38 ರನ್ ಹಾಗೂ ಕಿಂಚಿತ್ ಶಾ ಅಜೇಯ 6 ರನ್ ಗಳಿಸಿ ತಂಡಕ್ಕೆ 19 ಓವರ್​ನಲ್ಲೇ ಗೆಲುವು ತಂದಿಟ್ಟರು.

ಇದೀಗ ಏಷ್ಯಾಕಪ್ 2022 ರ ಗ್ರೂಪ್ ಎ ನಲ್ಲಿ ಸ್ಥಾನ ಪಡೆದುಕೊಂಡಿರುವ ಹಾಂಕ್ ಕಾಂಗ್ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಸೆಣೆಸಾಟ ನಡೆಸಲಿದೆ. ಆಗಸ್ಟ್ 31 ರಂದು ಭಾರತ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಸೆಪ್ಟೆಂಬರ್ 2 ರಂದು ಪಾಕ್ ವಿರುದ್ಧ ಕಣಕ್ಕಿಳಿಯಲಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಗ್ರೂಪ್ ಬಿಯಲ್ಲಿ ಸ್ಥಾನ ಪಡೆದುಕೊಂಡಿದೆ.

TV9 Kannada


Leave a Reply

Your email address will not be published.