Asia Cup 2022: ಏಷ್ಯಾಕಪ್​ ಟೂರ್ನಿಯ ಸ್ವರೂಪವೇನು? | Asia Cup 2022 Format And Groups


Asia Cup 2022 Format: ಈ ಬಾರಿಯ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ್ ಎ ಗ್ರೂಪ್​ನಲ್ಲಿದೆ. ಹೀಗಾಗಿ ಗ್ರೂಪ್ ಹಂತದಲ್ಲಿ ಉಭಯ ತಂಡಗಳು ಮೊದಲ ಪಂದ್ಯವಾಡಲಿದೆ.

Asia Cup 2022: ಏಷ್ಯಾಕಪ್​ಗೆ ವೇದಿಕೆ ಸಿದ್ದವಾಗಿದೆ. ಆಗಸ್ಟ್ 27 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಆಗಸ್ಟ್ 28 ರಂದು ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.  ಇನ್ನು ಈ ಬಾರಿ ಏಷ್ಯಾಕಪ್ ನಡೆಯಲಿರುವುದು ಟಿ20 ಮಾದರಿಯಲ್ಲಿ ಎಂಬುದು ವಿಶೇಷ. ಅಂದರೆ ಕಳೆದ 14 ಸೀಸನ್​ ಏಷ್ಯಾಕಪ್ ಟೂರ್ನಿಯಲ್ಲಿ 2016 ರಲ್ಲಿ ಮಾತ್ರ ಟಿ20 ಮಾದರಿಯಲ್ಲಿ ಆಡಲಾಗಿತ್ತು. ಅದಕ್ಕೂ ಮುನ್ನ ಏಕದಿನ ಮಾದರಿಯಲ್ಲೇ ಟೂರ್ನಿಯನ್ನು ನಡೆಸಲಾಗಿದೆ.

2 ಗ್ರೂಪ್ – 6 ತಂಡಗಳು:

ಈ ಬಾರಿಯ ಏಷ್ಯಾಕಪ್​ನಲ್ಲಿ 6 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ.

ಗ್ರೂಪ್- A

  1. ಭಾರತ
  2. ಪಾಕಿಸ್ತಾನ್,
  3. ಹಾಂಗ್​ ಕಾಂಗ್

ಗ್ರೂಪ್- B

  1. ಶ್ರೀಲಂಕಾ
  2. ಅಫ್ಘಾನಿಸ್ತಾನ್
  3. ಬಾಂಗ್ಲಾದೇಶ

ಹೇಗಿರಲಿದೆ ಗ್ರೂಪ್ ಫಾರ್ಮಾಟ್:

ಇಲ್ಲಿ ಆಯಾ ಗ್ರೂಪ್​ಗಳಲ್ಲಿರುವ ತಂಡಗಳು ಮುಖಾಮುಖಿಯಾಗಲಿದೆ. ಉದಾಹರಣಗೆ ಗ್ರೂಪ್-ಎ ನಲ್ಲಿರುವ ಭಾರತ, ಪಾಕಿಸ್ತಾನ್ ಹಾಗೂ ಹಾಂಗ್ ಕಾಂಗ್​ ತಂಡಗಳು ಪರಸ್ಪರ ಒಂದೊಂದು ಪಂದ್ಯಗಳನ್ನು ಆಡಲಿದೆ. ಈ ಮೂರು ತಂಡಗಳಲ್ಲಿ ಹೆಚ್ಚು ಪಾಯಿಂಟ್ ಅಥವಾ ನೆಟ್​ ರನ್​ರೇಟ್ ಹೊಂದಿರುವ ಅಗ್ರ 2 ತಂಡಗಳು ಮುಂದಿನ ಹಂತಕ್ಕೇರಲಿದೆ.

ಸೂಪರ್-4 ಹಂತ:

ಎ ಮತ್ತು ಬಿ ಗ್ರೂಪ್​ನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ 4 ತಂಡಗಳು ಸೂಪರ್- 4 ಹಂತಕ್ಕೇರಲಿದೆ. ಅಂದರೆ ಗ್ರೂಪ್​ ಸುತ್ತಿನ ಬಳಿಕ ಎರಡು ಗ್ರೂಪ್​ನ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನ ಪಡೆಯುವ ತಂಡಗಳು ಹೊರಬೀಳಲಿದೆ. ಆನಂತರ ನಾಲ್ಕು ತಂಡಗಳ ನಡುವೆ ಸೂಪರ್-4 ಪಂದ್ಯಗಳು ಶುರುವಾಗಲಿದೆ.

ಹೇಗಿರಲಿದೆ ಸೂಪರ್-4 ಫಾರ್ಮಾಟ್:

ಹೆಸರೇ ಸೂಚಿಸುವಂತೆ ಸೂಪರ್-4 ನಲ್ಲಿ ನಾಲ್ಕು ತಂಡಗಳು ಸೆಣಸಲಿದೆ. ಇಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಅಂದರೆ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 3 ತಂಡಗಳ ವಿರುದ್ದ 3 ಪಂದ್ಯಗಳನ್ನು ಆಡಲಿದೆ. ಇಲ್ಲೂ ಕೂಡ ಪಾಯಿಂಟ್ ಟೇಬಲ್​ ಇರಲಿದ್ದು, ಇದರಲ್ಲಿ ಮೊದಲ ಮತ್ತು 2ನೇ ಸ್ಥಾನ ಪಡೆಯುವ ತಂಡಗಳು ಫೈನಲ್​ ಪ್ರವೇಶಿಸಲಿದೆ. ಅಂದರೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಗಳೇ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ.

ಹ್ಯಾಟ್ರಿಕ್ ಮುಖಾಮುಖಿ:

ಈ ಬಾರಿಯ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ್ ಎ ಗ್ರೂಪ್​ನಲ್ಲಿದೆ. ಹೀಗಾಗಿ ಗ್ರೂಪ್ ಹಂತದಲ್ಲಿ ಉಭಯ ತಂಡಗಳು ಮೊದಲ ಪಂದ್ಯವಾಡಲಿದೆ. ಇದಾದ ಬಳಿಕ ಎರಡೂ ತಂಡಗಳು ಸೂಪರ್-4 ಹಂತಕ್ಕೇರಿದರೆ ಅಲ್ಲೂ ಕೂಡ ಒಂದು ಪಂದ್ಯವಾಡಬೇಕಾಗುತ್ತದೆ. ಇನ್ನು ಸೂಪರ್-4  ಪಾಯಿಂಟ್ ಟೇಬಲ್​ನಲ್ಲಿ ಭಾರತ-ಪಾಕ್ ಮೊದಲೆರಡು ಸ್ಥಾನ ಪಡೆದರೆ, ಫೈನಲ್​ನಲ್ಲಿ ಮತ್ತೆ ಮುಖಾಮುಖಿಯಾಗಬಹುದು. ಹೀಗಾಗಿ ಒಂದೇ ಟೂರ್ನಿಯ ಮೂಲಕ ಭಾರತ-ಪಾಕ್ 3 ಪಂದ್ಯವಾಡಲಿದೆಯಾ ಕಾದು ನೋಡಬೇಕಿದೆ.

ಹೀಗೊಂದು ಅಚ್ಚರಿ:

ಏಷ್ಯಾಕಪ್ ಶುರುವಾಗಿ 14 ಸೀಸನ್ ಕಳೆದರೂ ಇದುವರೆಗೆ ಭಾರತ-ಪಾಕಿಸ್ತಾನ್ ಫೈನಲ್​ನಲ್ಲಿ ಮುಖಾಮುಖಿಯಾಗಿಲ್ಲ ಎಂಬುದೇ ಅಚ್ಚರಿ. ಅಂದರೆ ಭಾರತ 11 ಬಾರಿ ಏಷ್ಯಾಕಪ್ ಫೈನಲ್ ಆಡಿದೆ. ಈ ವೇಳೆ ಒಮ್ಮೆಯೂ ಪಾಕಿಸ್ತಾನ್ ಎದುರಾಳಿಯಾಗಿ ಸಿಕ್ಕಿಲ್ಲ. ಹಾಗೆಯೇ ಪಾಕಿಸ್ತಾನ್ 4 ಬಾರಿ ಫೈನಲ್​ಗೆ ಪ್ರವೇಶಿಸಿದ್ದು, ಈ ವೇಳೆ ಟೀಮ್ ಇಂಡಿಯಾ ಅಂತಿಮ ಸುತ್ತಿಗೆ ಎಂಟ್ರಿ ಕೊಟ್ಟಿರಲಿಲ್ಲ. ಹೀಗಾಗಿ ಈ ಬಾರಿಯಾದರೂ ಏಷ್ಯಾಕಪ್​ನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಏಷ್ಯಾಕಪ್​ಗಾಗಿ ಭಾರತ ತಂಡ ಹೀಗಿದೆ:

ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌ (ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌.

ಮೀಸಲು ಆಟಗಾರರು: ಅಕ್ಷರ್‌ ಪಟೇಲ್‌, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹರ್.

TV9 Kannada


Leave a Reply

Your email address will not be published.