Asia Cup 2022: ಕ್ರಿಕೆಟ್ ಇತಿಹಾಸದ ಕಳಪೆ ದಾಖಲೆ: ಒಂದೇ ಓವರ್​ನಲ್ಲಿ 17 ಎಸೆತ ಎಸೆದ ವೇಗಿ | Asia Cup: Mohammad Sami’s 17 ball over


Asia Cup 2022: ಕಳೆದ ಹದಿನಾಲ್ಕು ಸೀಸನ್​ ಏಷ್ಯಾಕಪ್​ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಹಲವುಗಳಲ್ಲಿ ಕೆಲವು ಭರ್ಜರಿ ದಾಖಲೆಗಳಾದರೆ, ಇನ್ನು ಕೆಲವು ಅತ್ಯಂತ ಕಳಪೆ ದಾಖಲೆಗಳು.

15ನೇ ಸೀಸನ್ ಏಷ್ಯಾಕಪ್​ಗಾಗಿ ದಿನಗಣನೆ ಶುರುವಾಗಿದೆ. ಈಗಾಗಲೇ ಭಾರತ, ಪಾಕಿಸ್ತಾನ್ ಆಟಗಾರರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಅದರಂತೆ ಆಗಸ್ಟ್ 27 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಆಗಸ್ಟ್ 28 ರಂದು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಹಾಗೆಯೇ ಸೆಪ್ಟೆಂಬರ್ 11 ರಂದು ಏಷ್ಯಾಕಪ್​ ಫೈನಲ್ ಪಂದ್ಯ ಜರುಗಲಿದೆ.

ಇನ್ನು ಕಳೆದ ಹದಿನಾಲ್ಕು ಸೀಸನ್​ ಏಷ್ಯಾಕಪ್​ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಹಲವುಗಳಲ್ಲಿ ಕೆಲವು ಭರ್ಜರಿ ದಾಖಲೆಗಳಾದರೆ, ಇನ್ನು ಕೆಲವು ಅತ್ಯಂತ ಕಳಪೆ ದಾಖಲೆಗಳು. ಅಂತಹದೊಂದು ಕಳಪೆ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಸಮಿ ಹೆಸರಿನಲ್ಲಿದೆ.

ಆ ದಾಖಲೆ ಎಂದರೆ ಅತ್ಯಂತ ದೀರ್ಘಾವಧಿಯ ಓವರ್. ಅಂದರೆ ಒಂದೇ ಓವರ್​ನಲ್ಲಿ ಸಮಿ ಬರೋಬ್ಬರಿ 17 ಎಸೆತಗಳನ್ನು ಎಸೆದಿದ್ದರು. 2004 ರಲ್ಲಿ ನಡೆದ ಏಷ್ಯಾಕಪ್​ ಬಾಂಗ್ಲಾದೇಶ್ ವಿರುದ್ದದ ಪಂದ್ಯದಲ್ಲಿ ಈ ಹೀನಾಯ ದಾಖಲೆ ನಿರ್ಮಾಣವಾಗಿತ್ತು. ಬಾಂಗ್ಲಾ ವಿರುದ್ದ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಮಿ​ ಮೊದಲ ಬಾಲ್ ನೋಬಾಲ್ ಎಸೆದಿದ್ದರು. ಆ ಬಳಿಕ ವೈಡ್ ಎಸೆದರು. ಇದಾದ ಬಳಿಕ ಒಂದು ರನ್ ನೀಡಿದರು.

ಆ ಬಳಿಕ ಮತ್ತೆ ನೋ ಬಾಲ್ ಎಸೆದರು. ಇದರ ನಂತರ ಬ್ಯಾಕ್ ಟು ಬ್ಯಾಕ್ 2 ವೈಡ್ ಎಸೆದರು. ಆ ನಂತರ ಒಂದು ಡಾಟ್ ಬಾಲ್ ಮಾಡಿದರು. ಎಲ್ಲರೂ ಸಮಿ ಲಯಕ್ಕೆ ಮರಳಿದರೂ ಅಂದುಕೊಳ್ಳುವಷ್ಟರಲ್ಲಿ ಮತ್ತೆ ನೋ ಬಾಲ್ ಎಸೆದರು. ಇದಾದ ಬಳಿಕ ವೈಡ್ ಬಾಲ್ ಮಾಡಿದರು. ಹೀಗೆ ಅಂದು 7 ವೈಡ್​ಗಳು ಹಾಗೂ ನಾಲ್ಕು ನೋಬಾಲ್​ಗಳನ್ನು ಹೆಚ್ಚುವರಿಯಾಗಿ ನೀಡಿದ ಸಮಿ ಒಟ್ಟು 17 ಎಸೆತಗಳನ್ನು ಎಸೆದರು. ಅಲ್ಲದೆ 22 ರನ್​ ನೀಡುವ ಮೂಲಕ ದುಬಾರಿ ಬೌಲರ್​ ಎನಿಸಿಕೊಂಡರು.

ವಿಶೇಷ ಎಂದರೆ ಇದು ಏಷ್ಯಾಕಪ್​ನಲ್ಲಿ​ ಮಾತ್ರವಲ್ಲದೆ, ಏಕದಿನ ಕ್ರಿಕೆಟ್​ ಇತಿಹಾಸದ ಅತ್ಯಂತ ದೀರ್ಘಾವಧಿಯ ಓವರ್ ಕೂಡ​ ಆಗಿದೆ. ಇದೀಗ 15ನೇ ಸೀಸನ್ ಏಷ್ಯಾಕಪ್ ಬೆನ್ನಲ್ಲೇ 18 ವರ್ಷಗಳ ಹಳೆಯ ಮೊಹಮ್ಮದ್ ಸಮಿ ಅವರ 17 ಎಸೆತಗಳ ಓವರ್​ನ ಕಳಪೆ ದಾಖಲೆ ಮತ್ತೆ ಮುನ್ನೆಲೆಗೆ ಬಂದಿದೆ.

TV9 Kannada


Leave a Reply

Your email address will not be published.