ಸರ್ಕಾರದ ದತ್ತಾಂಶಗಳ ಪ್ರಕಾರ ಒಂದು ಕೆಜಿ ಗೋಧಿ ಹಿಟ್ಟಿನ ದರ 37.95 ರೂ. ತಲುಪಿದೆ. ಕಳೆದ ವರ್ಷ ಇದು 31.41 ರೂ. ಇತ್ತು. ಗೋಧಿ ಮತ್ತು ಗೋಧಿ ಹಿಟ್ಟಿನ ದರ ದಶಕದ ಗರಿಷ್ಠ ಮಟ್ಟ ತಲುಪಿದೆ.

ಗೋಧಿ ದರ (ಸಾಂದರ್ಭಿಕ ಚಿತ್ರ)
ನವದೆಹಲಿ: ದೇಶದಾದ್ಯಂತ ಮಾರುಕಟ್ಟೆಗಳಲ್ಲಿ ಗೋಧಿ ದರ (Wheat Price) ಗಗನಕ್ಕೇರಿದ್ದು, ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ. ಸರ್ಕಾರದ ದತ್ತಾಂಶಗಳ ಪ್ರಕಾರ ಒಂದು ಕೆಜಿ ಗೋಧಿ ಹಿಟ್ಟಿನ (wheat flour) ದರ 37.95 ರೂ. ತಲುಪಿದೆ. ಕಳೆದ ವರ್ಷ ಇದು 31.41 ರೂ. ಇತ್ತು. ಗೋಧಿ ಮತ್ತು ಗೋಧಿ ಹಿಟ್ಟಿನ ದರ ದಶಕದ ಗರಿಷ್ಠ ಮಟ್ಟ ತಲುಪಿದೆ. ದರ ನಿಯಂತ್ರಿಸುವುದಕ್ಕಾಗಿ ಮುಂದಿನ ಎರಡು ತಿಂಗಳುಗಳಲ್ಲಿ 30 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಆಹಾರ ನಿಗಮವು (FCI) 30 ಲಕ್ಷ ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರಿಂದ ಬೆಲೆ ಏರಿಕೆ ಮೇಲೆ ತಕ್ಷಣದ ಪರಿಣಾಮವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಬುಧವಾರ ಅನುಮೋದನೆ ನೀಡಿತ್ತು.
ಈ ಯೋಜನೆಯ ಪ್ರಕಾರ, ಪ್ರತಿ ಹಿಟ್ಟಿನ ಗಿರಣಿಯವರಿಗೆ ಮತ್ತು ದೊಡ್ಡ ಮಟ್ಟದ ಖರೀದಿದಾರರಿಗೆ ಇ-ಹರಾಜಿನ ಮೂಲಕ ಗರಿಷ್ಠ 3,000 ಮೆಟ್ರಿಕ್ ಟನ್ ಗೋಧಿ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ನೇರವಾಗಿ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತದೆ ಎಂದು ಆಹಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿ