Australian Open 2021: ವೀಸಾ ರದ್ದತಿ ಎತ್ತಿಹಿಡಿದ ಕೋರ್ಟ್​; ಆಸ್ಟ್ರೇಲಿಯನ್ ಓಪನ್‌ನಿಂದ ಜೊಕೊವಿಕ್ ಔಟ್! | Novak Djokovic loses Visa Appeal in Court one day before Australian Open


Australian Open 2021: ವೀಸಾ ರದ್ದತಿ ಎತ್ತಿಹಿಡಿದ ಕೋರ್ಟ್​; ಆಸ್ಟ್ರೇಲಿಯನ್ ಓಪನ್‌ನಿಂದ ಜೊಕೊವಿಕ್ ಔಟ್!

ನೊವಾಕ್ ಜೊಕೊವಿಕ್

ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಕ್ ಈ ವರ್ಷ ಆಸ್ಟ್ರೇಲಿಯನ್ ಓಪನ್ 2022 ರಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ವೀಸಾ ರದ್ದತಿ ವಿರುದ್ಧ ಅವರ ಮನವಿಯನ್ನು ಆಸ್ಟ್ರೇಲಿಯಾ ನ್ಯಾಯಾಲಯ ತಿರಸ್ಕರಿಸಿದ್ದು, ಇದೀಗ ಸರ್ಬಿಯಾ ಆಟಗಾರನನ್ನು ಆಸ್ಟ್ರೇಲಿಯಾದಿಂದ ವಾಪಸ್ ಕಳುಹಿಸಲಾಗುವುದು. ಜನವರಿ 17 ರಂದು ಸೋಮವಾರ ಪ್ರಾರಂಭವಾಗುವ ಆಸ್ಟ್ರೇಲಿಯನ್ ಓಪನ್ 2022 ಕೇವಲ ಒಂದು ದಿನದ ಮೊದಲು, ಮೆಲ್ಬೋರ್ನ್‌ನ ಫೆಡರಲ್ ನ್ಯಾಯಾಲಯವು ಜೊಕೊವಿಕ್‌ನ ವೀಸಾವನ್ನು ಹಿಂತೆಗೆದುಕೊಳ್ಳುವ ಆಸ್ಟ್ರೇಲಿಯಾ ಸರ್ಕಾರದ ಮಂತ್ರಿಯ ನಿರ್ಧಾರವನ್ನು ಎತ್ತಿಹಿಡಿದಿದೆ. ಹೀಗಾಗಿ ಈಗ ಜೊಕೊವಿಕ್ ಶೀಘ್ರದಲ್ಲೇ ಆಸ್ಟ್ರೇಲಿಯಾದಿಂದ ಮರಳಲಿದ್ದಾರೆ.

ಶುಕ್ರವಾರ, 14 ಜನವರಿ, ಆಸ್ಟ್ರೇಲಿಯಾದ ವಲಸೆ (immigration) ಸಚಿವರು ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಲು ನಿರ್ಧರಿಸಿದರು. ಒಂಬತ್ತು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸರ್ಬಿಯನ್ ತಾರೆ ದೇಶದಿಂದ ಹೊರಹಾಕುವ ನಿರ್ಧಾರದ ವಿರುದ್ಧ ಮನವಿ ಮಾಡಿದರು. ಜನವರಿ 16 ಭಾನುವಾರದಂದು, ಮೂವರು ಫೆಡರಲ್ ಕೋರ್ಟ್ ನ್ಯಾಯಾಧೀಶರು ಅನುಭವಿ ಆಟಗಾರನ ವಿರುದ್ಧ ತೀರ್ಪು ನೀಡಿದರು ಮತ್ತು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ವೀಸಾವನ್ನು ರದ್ದುಗೊಳಿಸುವ ವಲಸೆ ಸಚಿವರ ನಿರ್ಧಾರವನ್ನು ಎತ್ತಿಹಿಡಿದರು.

3 ವರ್ಷಗಳ ಕಾಲ ಜೊಕೊವಿಕ್ ಆಸ್ಟ್ರೇಲಿಯಾಕ್ಕೆ ಹೋಗಲು ಸಾಧ್ಯವಿಲ್ಲವೇ?
ಆಸ್ಟ್ರೇಲಿಯಾ ನ್ಯಾಯಾಲಯದ ತೀರ್ಪಿನ ನಂತರ, ಜೊಕೊವಿಕ್ ಮೂರು ವರ್ಷಗಳ ಕಾಲ ಆಸ್ಟ್ರೇಲಿಯಾ ಪ್ರವೇಶಿಸುವುದನ್ನು ನಿಷೇಧಿಸಬಹುದು. ಆಸ್ಟ್ರೇಲಿಯನ್ ಸರ್ಕಾರದ ವಲಸೆ ನಿಯಮಗಳ ಪ್ರಕಾರ, ಗಡಿಪಾರು ಮಾಡಲು ಆದೇಶಿಸಿದರೆ ಸಂಬಂಧಪಟ್ಟ ವ್ಯಕ್ತಿ ಮೂರು ವರ್ಷಗಳವರೆಗೆ ಆಸ್ಟ್ರೇಲಿಯಾಕ್ಕೆ ಮರಳುವಂತಿಲ್ಲ. ಈಗ ಆಸ್ಟ್ರೇಲಿಯಾ ಸರ್ಕಾರವು ಜೊಕೊವಿಕ್‌ಗೆ ಈ ನಿಯಮವನ್ನು ಅನ್ವಯಿಸಬಹುದು ಅಥವಾ ಅವರಿಗೆ ವಿನಾಯಿತಿ ನೀಡಬಹುದು. ಈ ಬಗ್ಗೆ ಪರಿಸ್ಥಿತಿ ಸ್ಪಷ್ಟವಾಗಿಲ್ಲ. ಜೊಕೊವಿಕ್ ಇಲ್ಲಿಯವರೆಗೆ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲ. ಹೀಗಾಗಿ ಜೊಕೊವಿಕ್ ಅವರನ್ನು ಗಡಿಪಾರು ಮಾಡುವವರೆಗೆ ಮೆಲ್ಬೋರ್ನ್‌ನಲ್ಲಿ ಗೃಹಬಂಧನದಲ್ಲಿರಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವ್ಯಾಕ್ಸಿನೇಷನ್ ಕಟ್ಟುನಿಟ್ಟಾದ ನಿಯಮಗಳು
ವಾಸ್ತವವಾಗಿ, ಆಸ್ಟ್ರೇಲಿಯಾದಲ್ಲಿ ಲಾಕ್‌ಡೌನ್‌ನಿಂದ ವ್ಯಾಕ್ಸಿನೇಷನ್‌ವರೆಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ, ಯಾವುದೇ ವ್ಯಕ್ತಿಯು ಆಸ್ಟ್ರೇಲಿಯಾದ ಪ್ರಜೆಯಾಗಿದ್ದರೂ ಸಹ ಲಸಿಕೆ ಹಾಕಿಸಿಕೊಳ್ಳದೆ ಆಸ್ಟ್ರೇಲಿಯಾಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ವಿಶೇಷ ಸಂದರ್ಭಗಳಲ್ಲಿ, ಮಾನ್ಯ ಕಾರಣದೊಂದಿಗೆ ವೈದ್ಯಕೀಯ ವಿನಾಯಿತಿಯಾಗಿ ಲಸಿಕೆ ಇಲ್ಲದೆ ಪ್ರವೇಶವನ್ನು ಅನುಮತಿಸಲಾಗಿದೆ.

ವಿವಾದ ಶುರುವಾಗಿದ್ದು ಹೀಗೆ
ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಜೊಕೊವಿಕ್ ಲಸಿಕೆ ವಿರುದ್ಧ ನಿಲುವು ತಳೆದಿದ್ದರು. ಜೊತೆಗೆ ಅವರು ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿಕೊಂಟಿದ್ದರು. ಇದಕ್ಕಾಗಿ ಅವರು ಅನೇಕ ಬಾರಿ ಟೀಕೆಗಳನ್ನು ಎದುರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಬಗ್ಗೆ ಅನುಮಾನವಿತ್ತು. ಆದಾಗ್ಯೂ, ಅವರು ವೈದ್ಯಕೀಯ ವಿನಾಯಿತಿ ನಿಯಮದಡಿಯಲ್ಲಿ ಆಸ್ಟ್ರೇಲಿಯಾವನ್ನು ಪ್ರವೇಶಿಸಿದ್ದರು. ಆದರೆ ಇಲ್ಲಿಂದಲೇ ಜೊಕೊವಿಕ್ ಅವರಿಗೆ ಗಂಡಾಂತರ ಹೆಗಲೇರಿದ್ದು.

ಆಸ್ಟ್ರೇಲಿಯಾಕ್ಕೆ ಆಗಮಿಸಿದಾಗ, ಅವರ ವೀಸಾವನ್ನು ಮೊದಲು ಜನವರಿ 6 ರಂದು ರದ್ದುಗೊಳಿಸಲಾಯಿತು. ನಂತರ ಅವರು ಸಾಕಷ್ಟು ವೈದ್ಯಕೀಯ ವಿನಾಯಿತಿ ದಾಖಲೆಗಳನ್ನು ಹೊಂದಿಲ್ಲದ ಕಾರಣ ಅವರನ್ನು ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿಯೇ ತಡೆಯಲಾಯಿತು. ಈ ವೇಳೆ ಜೊಕೊವಿಕ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಇದಾದ ಬಳಿಕ ನ್ಯಾಯಾಲಯದ ವಿಚಾರಣೆ ನಡೆದು ಜನವರಿ 10ರಂದು ಆಸ್ಟ್ರೇಲಿಯ ಕೋರ್ಟ್ ವೀಸಾ ರದ್ದು ನಿರ್ಧಾರವನ್ನು ರದ್ದುಪಡಿಸಿ ಜೊಕೊವಿಕ್‌ಗೆ ಆಡಲು ಅವಕಾಶ ನೀಡಿತ್ತು. ಈ ವೇಳೆ ಜೊಕೊವಿಕ್ ಅಂಗಳದಲ್ಲಿ ಅಭ್ಯಾಸವನ್ನೂ ನಡೆಸಿದರು. ನಂತರ ಜನವರಿ 14 ರಂದು, ಆಸ್ಟ್ರೇಲಿಯಾದ ವಲಸೆ ಸಚಿವರು ಮತ್ತೊಮ್ಮೆ ವೀಸಾವನ್ನು ರದ್ದುಗೊಳಿಸಲು ನಿರ್ಧರಿಸಿದರು.

TV9 Kannada


Leave a Reply

Your email address will not be published. Required fields are marked *