
ಲೇಖಕ ನಾಗರಾಜ ಕೋರಿ
Story : ‘ಸಹಜವಾಗಿ ಮತ್ತು ಆಕಸ್ಮಿಕವಾಗಿ ನಡೆವ ಘಟನೆಗಳು ಉದ್ದಿಶ್ಯಪೂರ್ವಕ ಪ್ರತಿರೋಧವನ್ನು ಅಣಕಿಸುವಂತೆ ಸಹಜತೆಯಲ್ಲಿ ಮೂಡಿವೆ. ಕತೆಯಂತೂ ‘ಹೌದಲ್ಲ’ ಎನಿಸುತ್ತಿದೆ. ಇಡೀ ಕಥೆಯ ಅಂತಃಪ್ರವಾಹವಾಗಿ ಅಕ್ಕಮಹಾದೇವಿ ಸಾಂಕೇತಿಕ ಧ್ವನಿಯಾಗಿದ್ದಾಳೆ.’
Award : 2022ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿಯು ನಾಗರಾಜ ಕೋರಿ ಅವರ ‘ಕಳವಳದ ದೀಗಿ ಕುಣಿದಿತ್ತವ್ವ’ ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಈ ಪುರಸ್ಕಾರವು ರೂ. 5,000 ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನಾಗರಾಜ, ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ, ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಎಂಬ ಗ್ರಾಮದವರು. ‘ಬುದ್ದಗಿತ್ತಿಯ ನೆನಪು’ ಎಂಬ ಕವನ ಸಂಕಲನ ಮತ್ತು ‘ತನುಬಿಂದಿಗೆ’ ಎಂಬ ಕಥಾ ಸಂಕಲನ ಈಗಾಗಲೇ ಪ್ರಕಟಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ, ಮೋಹನ ಕುರಡಗಿ ಕಾವ್ಯ ಪ್ರಶಸ್ತಿ, ಮುಂಗಾರು ಕಥಾ ಬಹುಮಾನ ಮತ್ತು ಅಕ್ಷರ ಸಂಗಾತ ಕಥಾ ಬಹುಮಾನಗಳು ದೊರೆತಿವೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆಯುತ್ತಿರುವ ಸತತ ಐದನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಸ್ತುತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಜೂನ್ನಲ್ಲಿ ನೆರವೇರಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದೆ.
ತೀರ್ಪುಗಾರರ ಅಭಿಪ್ರಾಯ : ‘ಅರ್ಧ ಕನಸಿನ ಬದುಕು, ಅರೆ ಸತ್ತ ಬದುಕು ತನ್ನನ್ನು ಆವರಿಸಿದ್ದರೂ ಕತೆಯಲ್ಲಿ ಬರುವ ಸನ್ನಿವೇಶಗಳು, ವಿವರಗಳು ಸರಳವೆನಿಸಿದರೂ ಸಮಸ್ಯೆಗಳು ಅಷ್ಟೇ ಸಂಕೀರ್ಣವಾಗಿವೆ. ಪುರುಷಾಧಿತ್ಯದ ತೀವ್ರತೆ. ಎಲ್ಲದಕ್ಕೂ ಏನಿದ್ದರೂ ಸ್ತ್ರೀಯರನ್ನೇ ಸಿಲುಕಿಸಿ ಸಲೀಸಾಗಿ ಪಾರಾಗುವ ಗಂಡಸರು ಸಮಾನವಾಗಿ ಜವಾಬ್ದಾರಿ ನಿಭಾಯಿಸುವಲ್ಲಿಯೂ ಕೇವಲ ಕೇವಲವೇ. ಈ ಎಲ್ಲ ದಟ್ಟೈಸುವಿಕೆಯ ನಡುವೆಯೂ ಕನಸಿದೆ ಬದುಕಿದೆಯೆಂಬುದನ್ನು ಸಂಚಾರಿ ವ್ಯಾಪಾರಿಯ ಮೂಲಕ, ಅವನನ್ನು ಕನಸಿಸುವ ಮುಖಾಂತರ ಕಥೆಯಲ್ಲಿಯ ಪ್ರತಿಮಾ ವಿಧಾನ ಸಶಕ್ತವಾಗಿದೆ.’
‘ಸಹಜವಾಗಿ ಮತ್ತು ಆಕಸ್ಮಿಕವಾಗಿ ನಡೆವ ಘಟನೆಗಳು ಉದ್ದಿಶ್ಯಪೂರ್ವಕ ಪ್ರತಿರೋಧವನ್ನು ಅಣಕಿಸುವಂತೆ ಸಹಜತೆಯಲ್ಲಿ ಮೂಡಿವೆ. ಕತೆಯಂತೂ ‘ಹೌದಲ್ಲ’ ಎನಿಸುತ್ತಿದೆ. ಇಡೀ ಕಥೆಯ ಅಂತಃಪ್ರವಾಹವಾಗಿ ಅಕ್ಕಮಹಾದೇವಿ ಸಾಂಕೇತಿಕ ಧ್ವನಿಯಾಗಿದ್ದಾಳೆ. ಜಾತ್ರೆಯಲ್ಲಿ ಹರಕೆಯ ಕೇಶಮುಂಡನ ಮುಂತಾದಕ್ಕೂ ನಾಯಕಿ ಒಟ್ಟೊಟ್ಟಾಗಿ ಮನಸ್ಸಿಲ್ಲದಿದ್ದರೂ ಒಪ್ಪಬೇಕಾದ ಅನಿವಾರ್ಯತೆ ಕಥೆಯನ್ನು ಸ್ಫೋಟಕದ ತುದಿಗೇರಿಸಿದೆ. ನಮಗೆ ಬಂದ ಮೂರು ಕಥೆಗಳನ್ನು ಓದಿ ಚರ್ಚಿಸಿದಾಗ ಈ ‘ಕವಳದ ದೀಗಿ ಕುಣಿದಿತ್ತವ್ವ’ ಇಂತಹ ಹಲವಾರು ಅಂಶಗಳನ್ನು ಹೊಂದಿರುವ ಕಾರಣದಿಂದ ಡಾ.ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆಗೆ ಅರ್ಹವೆಂದು ಭಾವಿಸಿದ್ದೇವೆ.’
ಎಂ.ಬಿ. ಅಡ್ನೂರ ಮತ್ತು ಡಾ. ಚಿದಾನಂದ ಕಮ್ಮಾರ, ತೀರ್ಪುಗಾರರು