Azadi ka Amrit Mahotsav: ಇದಾದ ಬಳಿಕ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿಲ್ಲ. ಕಳೆದ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕದೊಂದಿಗೆ ಭಾರತೀಯ ಆಟಗಾರರು ಹಿಂತಿರುಗಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗಿವೆ. ಅಂದರೆ ಈ ಬಾರಿ ಭಾರತವು ತನ್ನ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಆಚರಿಸುತ್ತಿದೆ. ಕಳೆದ 75 ವರ್ಷಗಳಲ್ಲಿ ಭಾರತವು ಎಲ್ಲಾ ಕ್ಷೇತ್ರಗಳಂತೆ, ಕ್ರೀಡಾಲೋಕದಲ್ಲೂ ಹಲವು ಸಾಧನೆಗೈದಿದೆ. ಈ ಸಾಧನೆಗಳನ್ನು ಮೆಲುಕು ಹಾಕುವುದಾದರೆ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ಬಳಿಕದ ಸಾಧನೆಗಳಾಗಿ ವಿಂಗಡಿಸಬಹುದು. ಏಕೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ತಂಡವು ಕ್ರಿಕೆಟ್, ಹಾಕಿ, ಕುಸ್ತಿ ಸೇರಿದಂತೆ ಪ್ರಮುಖ ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು. ಅದರಲ್ಲೂ 1928ರ ಒಲಿಂಪಿಕ್ಸ್ನಲ್ಲಿಯೇ ಹಾಕಿ ತಂಡ ಕಣಕ್ಕಿಳಿದಿತ್ತು. ಆಮ್ಸ್ಟರ್ಡ್ಯಾಮ್ನಲ್ಲಿ ನಡೆದ ಆ ಒಲಿಂಪಿಕ್ಸ್ನಲ್ಲಿ ಭಾರತ ತಂಡವು ಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 3-0 ಗೋಲುಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಹಾಕಿ ದಂತಕಥೆ ಧ್ಯಾನ್ ಚಂದ್ ಮೂರು ಬಾರಿ ಗೋಲು ಗಳಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ 1932 ಮತ್ತು 1936 ರಲ್ಲಿ ಭಾರತ ಹಾಕಿ ತಂಡವು ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.
ಆದರೆ ಸ್ವತಂತ್ರ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದ್ದು 1948 ರಲ್ಲಿ. ಅಂದರೆ ಭಾರತವು ತನ್ನ ತ್ರಿವರ್ಣ ಪಾತಾಕೆಯಲ್ಲಿ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲಲು ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಂಡಿದ್ದು ಈಗ ಇತಿಹಾಸ. ಇದೀಗ ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸುತ್ತಿರುವ ವೇಳೆ ಹಾಕಿ ಅಂಗಳದಲ್ಲಿ, ಅದರಲ್ಲೂ ಒಲಿಂಪಿಕ್ಸ್ನಲ್ಲಿ ಭಾರತೀಯ ಹಾಕಿ ತಂಡ ಹೇಗೆ ಪಾರುಪತ್ಯ ಮೆರೆದಿತ್ತು ಎಂಬುದರ ಇಣುಕು ನೋಟ ಇಲ್ಲಿದೆ…
- 1948 ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಿತು. ಫೈನಲ್ನಲ್ಲಿ ಭಾರತವನ್ನು ಆಳಿದ ಗ್ರೇಟ್ ಬ್ರಿಟನ್ ತಂಡದ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿದ್ದು ಐತಿಹಾಸಿಕ ಘಳಿಗೆಯಾಗಿತ್ತು. ಏಕೆಂದರೆ ಇದು ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ಸ್ ಪದಕವಾಗಿತ್ತು.
- 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 6-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿತು.
- 1956 ಮೆಲ್ಬೋರ್ನ್ ಒಲಿಂಪಿಕ್ಸ್ನ ಫೈನಲ್ ಪಂದ್ಯವು ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಏಕೆಂದರೆ ಅದೇ ಮೊದಲ ಬಾರಿ ಭಾರತ-ಪಾಕಿಸ್ತಾನ್ ಫೈನಲ್ನಲ್ಲಿ ಮುಖಾಮುಖಿಯಾಗಿತ್ತು. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಫೈನಲ್ನಲ್ಲಿ ಭಾರತವು 1-0 ಅಂತರದಲ್ಲಿ ಜಯಗಳಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
- 1964ರ ಟೋಕಿಯೊ ಒಲಿಂಪಿಕ್ಸ್ನ ಫೈನಲ್ನಲ್ಲಿ ಏಷ್ಯಾದ ಪ್ರತಿಸ್ಪರ್ಧಿಗಳು ಮತ್ತೊಮ್ಮೆ ಮುಖಾಮುಖಿಯಾದರು. ಆದರೆ ಈ ಬಾರಿ ಕೂಡ ಪಾಕ್ಗೆ ಸೋಲುಣಿಸುವ ಮೂಲಕ ಸ್ವಾತಂತ್ರ ಭಾರತವು ತನ್ನ 4ನೇ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡಿತು
- ಟೋಕಿಯೋ ಒಲಿಂಪಿಕ್ಸ್ ಬಳಿಕ ಸತತ 3 ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ಭಾರತೀಯ ಹಾಕಿ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ ಮೂಲಕ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು. ಫೈನಲ್ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಹಾಕಿಯಲ್ಲಿ 5ನೇ ಚಿನ್ನದ ಪದಕ ಗೆದ್ದರು.
ಇದಾದ ಬಳಿಕ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿಲ್ಲ. ಕಳೆದ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕದೊಂದಿಗೆ ಭಾರತೀಯ ಆಟಗಾರರು ಹಿಂತಿರುಗಿದ್ದರು. ಅಷ್ಟೇ ಅಲ್ಲದೆ ಈ ಬಾರಿ ನಡೆದ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಇದಾಗ್ಯೂ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕಕ್ಕಾಗಿ ಭಾರತ ಕಾಯುವಿಕೆ ಮುಂದುವರೆದಿದೆ. ಅದು ಕೂಡ ಕಳೆದ 42 ವರ್ಷಗಳಿಂದ ಎಂಬುದು ವಿಶೇಷ. 2024 ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡವು ಬಂಗಾರದ ಪದಕಕ್ಕೆ ಮುತ್ತಿಕ್ಕಲಿ ಎಂದು ಆಶಿಸೋಣ.