Dewald Brevis-AB de Villiers
ಕ್ರಿಕೆಟ್ ಅಂಗಳದ 360 ಡಿಗ್ರಿ ಖ್ಯಾತಿ ಎಬಿ ಡಿವಿಲಿಯರ್ಸ್ (AB de Villiers) ತಮ್ಮ ವಿಭಿನ್ನ ಹೊಡೆತಗಳಿಗೆ ಹೆಸರುವಾಸಿ. ಇದೀಗ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಎಬಿಡಿಯನ್ನು ಅನುಕರಿಸುತ್ತಾ ಮತ್ತೋರ್ವ ಆಟಗಾರ ಎಂಟ್ರಿ ಕೊಟ್ಟಿದ್ದಾನೆ. ಅದು ಕೂಡ ದಕ್ಷಿಣ ಆಫ್ರಿಕಾ ತಂಡದ ಜೂನಿಯರ್ ಕ್ರಿಕೆಟಿಗ ಎಂಬುದೇ ವಿಶೇಷ. ಥೇಟ್ ಎಬಿಡಿಯಂತೆ ಬ್ಯಾಟ್ ಬೀಸಿರುವ ಈತ ಇದೀಗ ಬೇಬಿ ಎಬಿ ಎಂದು ವೈರಲ್ ಆಗಿದ್ದಾನೆ. ಪ್ರಸ್ತುತ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನಲ್ಲಿ ಆಡುತ್ತಿರುವ ಡೆವಾಲ್ಡ್ ಬ್ರೆವಿಸ್ (Dewald Brevis) ಹೀಗೆ ಎಬಿಡಿಯಂತೆ ಬ್ಯಾಟ್ ಬೀಸುತ್ತಿರುವ ಯುವ ಆಟಗಾರ.
ಟೀಮ್ ಇಂಡಿಯಾ ಅಂಡರ್ 19 ತಂಡದ ವಿರುದ್ದದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋತಿರಬಹುದು. ಆದರೆ ಡೆವಾಲ್ಡ್ ಬ್ರೆವಿಸ್ ಎಬಿಡಿ ಶೈಲಿಯಲ್ಲಿ ಎಬಿಡಿ ರೀತಿ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆದಿದ್ದಾನೆ. 3ನೇ ಕ್ರಮಾಂಕಕ್ಕೆ ಇಳಿದ ಡೆವಾಲ್ಡ್ ಬ್ರೆವಿಸ್ ಭಾರತದ ವಿರುದ್ಧ 99 ಎಸೆತಗಳಲ್ಲಿ 65 ರನ್ ಗಳಿಸಿದರು. 6 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಅವರ ಸ್ಟೇಟ್ ಡ್ರೈವ್ಗಳು, ರಿವರ್ಸ್ ಸ್ವೀಪ್ಗಳು ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ನಂತೆ ಇರುವುದು ವಿಶೇಷ.
ಅಷ್ಟೇ ಅಲ್ಲ, ಡಿವಿಲಿಯರ್ಸ್ ಅವರ ಜರ್ಸಿ ಸಂಖ್ಯೆ 17 ಅನ್ನೇ ಧರಿಸಿ ಡೆವಾಲ್ಡ್ ಬ್ರೆವಿಸ್ ಕಣಕ್ಕಿಳಿದಿದ್ದಾರೆ. ಇನ್ನು ಟೀಮ್ ಇಂಡಿಯಾ ವಿರುದ್ದ ಅರ್ಧಶತಕ ಪೂರೈಸುವುದರಿಂದ ತಂಡದ ಆಟಗಾರರು ಬೇಬಿ ಎಬಿ ಪೋಸ್ಟರ್ಗಳನ್ನು ತೋರಿಸುತ್ತಿರುವುದು ಕಂಡುಬಂತು. ಇದೀಗ ಬೇಬಿ ಎಬಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಎಬಿ ಡಿವಿಲಿಯರ್ಸ್ ಅವರನ್ನೇ ಮತ್ತೊಮ್ಮೆ ಸೌತ್ ಆಫ್ಇಕಾ ಜೆರ್ಸಿಯಲ್ಲಿ ನೋಡಿದಂತೆ ಭಾಸವಾಗುತ್ತಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
Legacy Continue Of @ABdeVilliers17 #BabyAB pic.twitter.com/ww1netTYrb
— Muawaz Waheed (@Malik_hu_naa) January 16, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 232 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 187 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ರೆವಿಸ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ ದಕ್ಷಿಣ ಆಫ್ರಿಕಾ ಪರ ಉತ್ತಮವಾಗಿ ಆಡಿರಲಿಲ್ಲ. ಪರಿಣಾಮ ಟೀಮ್ ಇಂಡಿಯಾ 45 ರನ್ಗಳಿಂದ ಜಯ ಸಾಧಿಸಿತು.