BCCI ಗೊಂದಲಕ್ಕೆ ದ್ರಾವಿಡ್​ರಿಂದ ಸಿಕ್ತು ಪರಿಹಾರ; ಸೌರವ್ ಗಂಗೂಲಿ ಫುಲ್ ಖುಷ್


ಟೀಮ್​ ಇಂಡಿಯಾ ಹೆಡ್​ಕೋಚ್​ ಆಗಿ ದ್ರಾವಿಡ್​​ ಏನೋ ಆಯ್ಕೆಯಾದ್ರು. ಇದರಿಂದ ಬಿಸಿಸಿಐಗಿರುವ ಭಾರವೂ ಕಡಿಮೆಯಾಯ್ತು. ಆದರೆ ಬಿಸಿಸಿಐಗೆ ಮತ್ತೊಂದು ಸತ್ವಪರೀಕ್ಷೆ ಎದುರಾಗಿದೆ. ಖಾಲಿ ಇರುವ ಎನ್​​ಸಿಎ ಮುಖ್ಯಸ್ಥ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕೆಂಬ ಗೊಂದಲ ಉಂಟಾಗಿದೆ. ಆದರೆ ದ್ರಾವಿಡೇ ಇದಕ್ಕೆ ಪರಿಹಾರ ಸೂಚಿಸಿದ್ದಾರೆ.

ಭವಿಷ್ಯದ ಕ್ರಿಕೆಟಿಗರನ್ನ ಸಿದ್ಧಪಡಿಸುವ ಕೇಂದ್ರ ನ್ಯಾಷನಲ್​​ ಕ್ರಿಕೆಟ್​ ಅಕಾಡೆಮಿ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಯುವ ಕ್ರಿಕೆಟಿಗರು, ಟೀಮ್​ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ. ಅದಕ್ಕೆ NCA ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡೇ ಕಾರಣ. ಯುವಕರ ಪ್ರತಿಭೆ ಗುರುತಿಸಿ, ಪ್ರತಿಭಾನ್ವಿತ ಕ್ರಿಕೆಟಿಗರನ್ನಾಗಿ ರೂಪಿಸುತ್ತಿದ್ದ ದ್ರಾವಿಡ್​, ಇದೀಗ ಟೀಮ್ ಇಂಡಿಯಾದ ಹೆಡ್​ಕೋಚ್​ ಆಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೆ NCA ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಹುಡುಕಾಟ ನಡೆಸಿದೆ. ಆದರೆ ದ್ರಾವಿಡ್​​, ಲಕ್ಷ್ಮಣ್​​ರನ್ನ ನೇಮಿಸುವಂತೆ ಮನವಿ ಮಾಡಿದ್ದಾರೆ.

ಹೌದು.. ದ್ರಾವಿಡ್​​​ ಕೋಚ್​ ಆಗಿ ನೇಮಕವಾಗ್ತಿದ್ದಂತೆ, ಬಿಸಿಸಿಐಗೆ ಇಟ್ಟಿರುವ 2ನೇ ಬೇಡಿಕೆ ಇದು. ಮೊದಲು ವೈಟ್​​ಬಾಲ್ ಕ್ರಿಕೆಟ್​ನ ಕ್ಯಾಪ್ಟನ್​, ಕೋಚಿಂಗ್​​ ಸ್ಟಾಪ್​​ ಯಾರೆಲ್ಲಾ ಬೇಕೆನ್ನೋ ಪಟ್ಟಿಯನ್ನ ಬಿಸಿಸಿಐಗೆ ನೀಡಿದ್ರು​. ಇದೀಗ NCAಗೆ ಮುಖ್ಯಸ್ಥರಾಗಿ ವಿವಿಎಸ್​​ ಲಕ್ಷ್ಮಣ್​ರನ್ನೇ ನೇಮಿಸುವಂತೆ ಸೂಚಿಸಿದ್ದಾರೆ. ಏಕೆಂದರೆ NCA ಪರಂಪರೆ ಉಳಿಸಿ ಬೆಳೆಸೋದು ಇದರ ಹಿಂದಿನ ಉದ್ದೇಶವಾಗಿದೆ. ಹಾಗಾಗಿ ಹಿರಿಯ ಹಾಗೂ ಅನುಭವಿ ಆಟಗಾರ ಲಕ್ಷ್ಮಣ್​​ ತನ್ನ ಉತ್ತರಾಧಿಕಾರಿಯಾಗಲು ಬಯಸಿದ್ದಾರೆ ದ್ರಾವಿಡ್​.

ಇಬ್ಬರದ್ದೂ ಪರಿಪೂರ್ಣ ಸಂಯೋಜನೆ
‘ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ VVS​ ಲಕ್ಷ್ಮಣ್​ರ ನೇಮಿಸುವಂತೆ ದ್ರಾವಿಡ್​ ಸೂಚಿಸಿದ್ದಾರೆ. ಇದು ಗಂಗೂಲಿ, ಜಯ್​​ ಶಾ ಇಬ್ಬರಿಗೂ ಇಷ್ಟವಾಗಿದೆ. ವಿಶೇಷ ಬಾಂಧವ್ಯ ಹೊಂದಿರುವ ದ್ರಾವಿಡ್ ​- ಲಕ್ಷ್ಮಣ್​​ ಒಟ್ಟಾಗಿ ಭಾರತೀಯ ಕ್ರಿಕೆಟ್​​​ಗಾಗಿ ಮತ್ತೊಮ್ಮೆ ಸೇವೆ ಆರಂಭಿಸುವುದು ಅದಕ್ಕಿಂತ ಮಿಗಿಲಾದದ್ದು ಮತ್ತೇನಿದೆ ಹೇಳಿ. ಇಬ್ಬರ ಪರಿಪೂರ್ಣ ಸಂಯೋಜನೆಯಿಂದ ಪ್ರತಿಭಾನ್ವಿತ ಕ್ರಿಕೆಟಿಗರ ದಂಡು ಟೀಮ್​ ಇಂಡಿಯಾದಲ್ಲಿ ತುಂಬಿರುತ್ತೆ ಅನ್ನೋದರಲ್ಲಿ ಅನುಮಾನವೇ ಇಲ್ಲ’
-ಬಿಸಿಸಿಐ ಮೂಲಗಳು

ದ್ರಾವಿಡ್​ ಮತ್ತು ಲಕ್ಷ್ಮಣ್​, ಟೀಮ್​ ಇಂಡಿಯಾಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಆಪತ್ಭಾಂದವರಾಗಿ ತಂಡವನ್ನ ರಕ್ಷಿಸುತ್ತಿದ್ದ ಈ ದಿಗ್ಗಜರು, ಆಪ್ತರು ಕೂಡ ಹೌದು. ಹಾಗೇ ಲಕ್ಷ್ಮಣ್​​​ ಬಗ್ಗೆ ಎಲ್ಲವೂ ಗೊತ್ತಿರುವ ಕಾರಣ, ದ್ರಾವಿಡ್​ ಈ ನಿರ್ಧಾರಕ್ಕೆ ಬಂದಿದ್ದಾರೆ. ಲಕ್ಷ್ಮಣ್​​ ಎಲ್ಲಿಯೂ ಕೋಚ್​ ಆಗದಿದ್ರೂ, ಮುಖ್ಯಸ್ಥರಾಗುವ ಎಲ್ಲಾ ಲಕ್ಷ್ಮಣ ಹೊಂದಿದ್ದಾರೆ ಎಂಬ ವಾದವನ್ನೂ ದ್ರಾವಿಡ್​ ಮಂಡಿಸಿದ್ದಾರೆ. ಆ ಮೂಲಕ ಜೊತೆಯಾಗಿ ಮತ್ತೊಂದು ಇನ್ನಿಂಗ್ಸ್​​​​ ಪುನರಾರಂಭಿಸಲು ಉತ್ಸುಕತೆ ತೋರಿದ್ದು, ಭಾರತೀಯ ಕ್ರಿಕೆಟ್​​ಗೆ ಮತ್ತೊಂದು ಅಮೂಲ್ಯ ಕೊಡುಗೆ ನೀಡಲು ಮುಂದಾಗಿದ್ದಾರೆ.

ದ್ರಾವಿಡ್​​ರ ಈ ನಿರ್ಧಾರ, ಬಿಸಿಸಿಐ ಅಧ್ಯಕ್ಷ ಸೌರವ್​​​​​​ ಗಂಗೂಲಿಗೂ ಇಷ್ಟವಾಗಿದೆ ಎನ್ನಲಾಗ್ತಿದೆ. ದ್ರಾವಿಡ್​​​-ಲಕ್ಷ್ಮಣ್​ ಒಟ್ಟಾಗಿ ಕೆಲಸ ಮಾಡುವುದು ಪರಿಪೂರ್ಣ ಸಂಯೋಜನೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಇದೆ. ಒಟ್ನಲ್ಲಿ ಲಕ್ಷ್ಮಣ್​​ರನ್ನ ನೇಮಿಸಲು ಗಂಗೂಲಿ ಕೂಡ ಉತ್ಸುಕತೆ ತೋರಿದ್ದು, ಆದಷ್ಟು ಬೇಗನೇ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

News First Live Kannada


Leave a Reply

Your email address will not be published. Required fields are marked *