Beijing Winter Olympics
ಬೀಜಿಂಗ್ 2022 ರ ಚಳಿಗಾಲದ ಒಲಂಪಿಕ್ಸ್ ಅನ್ನು ಅಮೆರಿಕ ಬಹಿಷ್ಕರಿಸಿದೆ. ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದಿಟ್ಟು, ಅಮೆರಿಕವು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಿರುವುದಾಗಿ ತಿಳಿಸಿದೆ. ಇದರ ಬೆನ್ನಲ್ಲೇ ಉಭಯ ದೇಶಗಳ ವಾಕ್ಸಮರ ಮುಂದುವರೆದಿದೆ. ಅಮೆರಿಕ ಚಳಿಗಾಲದ ಒಲಿಂಪಿಕ್ಸ್ಗೆ ಬಹಿಷ್ಕಾರ ಹಾಕುತ್ತಿದ್ದಂತೆ, ಇತ್ತ ಚೀನಾ ಸರ್ಕಾರವು, ಇದಕ್ಕೆ ಯುನೈಟೆಡ್ ಸ್ಟೇಟ್ಸ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಮೂಲಕ ಅಮೆರಿಕಾಗೆ ಚೀನಾ ಬಹಿರಂಗವಾಗಿಯೇ ಎಚ್ಚರಿಕೆ ರವಾನಿಸಿದೆ.
ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾಗಲಿರುವ ಕ್ರೀಡಾಕೂಟದಲ್ಲಿ ಅಮೆರಿಕ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದೆ. ಚೀನಾದಲ್ಲಿನ ಉಯ್ಘರ್ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ “ಜನಾಂಗೀಯ ಹತ್ಯೆ”ಯನ್ನು ಪ್ರಸ್ತಾಪಿಸಿ, ಮಾನವನ ಹಕ್ಕು ಉಲ್ಲಂಘನೆಯಾಗುತ್ತಿರುವ ದೇಶದ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ತಿಳಿಸಿದೆ.
ಸುಳ್ಳು ಮತ್ತು ವದಂತಿಗಳ ಆಧಾರದ ಮೇಲೆ ಸೈದ್ಧಾಂತಿಕ ಪೂರ್ವಾಗ್ರಹದಿಂದ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಹಸ್ತಕ್ಷೇಪ ಮಾಡುವ ಯುಎಸ್ ಪ್ರಯತ್ನವು ಕೆಟ್ಟ ಉದ್ದೇಶಗಳನ್ನು ಮಾತ್ರ ಬಹಿರಂಗಪಡಿಸುತ್ತದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ತಿಳಿಸಿದ್ದಾರೆ.
ವಿಂಟರ್ ಒಲಿಂಪಿಕ್ಸ್ ಎಂಬುದು ರಾಜಕೀಯ ವೇದಿಕೆಯಲ್ಲ. ಅಮೆರಿಕ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಹಸ್ತಕ್ಷೇಪ ಮಾಡುವ ಮತ್ತು ದುರ್ಬಲಗೊಳಿಸಲು ಮುಂದಾಗಿದ್ದಾರೆ ಝಾವೊ ನೇರವಾಗಿ ಆರೋಪಿಸಿದ್ದಾರೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ, ಚೀನಾದ ಶಿನ್ಜಿಯಾಂಗ್ನಲ್ಲಿ ನಡೆಯುತ್ತಿರುವ ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಇತರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಪರಿಗಣಿಸಿ ಆಡಳಿತವು ಯಾವುದೇ ರಾಜತಾಂತ್ರಿಕ ಅಥವಾ ಅಧಿಕೃತ ಪ್ರಾತಿನಿಧ್ಯವನ್ನು ಗೇಮ್ಸ್ಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಅಮೆರಿಕ ಸರ್ಕಾರದ ನಡೆಯನ್ನು ಯುಎಸ್ನಲ್ಲಿ ಮಾನವ ಹಕ್ಕುಗಳ ಸಂಘಟನೆ ಮತ್ತು ರಾಜಕಾರಣಿಗಳು ಸ್ವಾಗತಿಸಿದ್ದಾರೆ.
ಕೊರೋನಾ ವಿಚಾರವಾಗಿ ಈ ಹಿಂದೆ ಚೀನಾ-ಅಮೆರಿಕ ನಡುವೆ ಶೀತಮ ಸಮರ ಏರ್ಪಟ್ಟಿತ್ತು. ಇದೀಗ ವಿಂಟರ್ ಒಲಿಂಪಿಕ್ಸ್ ಸಂಬಂಧ ಉಭಯ ದೇಶಗಳ ರಾಜತಾಂತ್ರಿಕ ಮತ್ತಷ್ಟು ಹದಗೆಡುವ ಸೂಚನೆ ನೀಡುತ್ತಿದೆ.