Belagavi News: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, 6 ತಿಂಗಳಲ್ಲಿ 8 ಲಕ್ಷ ಗಳಿಕೆ; ಬಡ ರೈತನ ಮಗಳ ಅಮೋಘ ಸಾಧನೆ | Kannada News | Grow chillies in 30 gunte, earn 8 lakhs in 6 months, A great achievement of a poor farmer’s daughter in belagavi


ಆಕೆ ಗಡಿಜಿಲ್ಲೆಯ ಪುಟ್ಟ ಗ್ರಾಮದವಳು. ಸಿಎ ಆಗಬೇಕೆಂಬ ಕನಸು ಕಂಡಿದ್ದ ಬಡ ರೈತನ ಮಗಳು, ತಂದೆಯ ನಿಧನದಿಂದ ಸಿಎ ವ್ಯಾಸಂಗ ಮೊಟಕುಗೊಳಿಸಿ ಕೃಷಿಯತ್ತ ಮುಖ ಮಾಡಿದ ಯುವತಿ ಇಂದು ಕೃಷಿಯಲ್ಲಿ ಅಮೋಘ ಸಾಧನೆ ಮಾಡಿದ್ದಾಳೆ. ಇಂದು ಈ ಯುವತಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ. ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಎಲ್ಲರೂ ಹುಬ್ಬೇರುವಂತೆ ಸಾಧನೆ ಮಾಡಿದ ಆ ಯುವತಿ ಯಾರು? ಬಡ ರೈತನ ಮಗಳ ಸಾಧನೆಯಾದರೂ ಎಂತಹದ್ದು ಅಂತೀರಾ ಈ ಸ್ಟೋರಿ ನೋಡಿ.

Belagavi News: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, 6 ತಿಂಗಳಲ್ಲಿ 8 ಲಕ್ಷ ಗಳಿಕೆ; ಬಡ ರೈತನ ಮಗಳ ಅಮೋಘ ಸಾಧನೆ

ಬೆಳಗಾವಿಯಲ್ಲಿ ಮೆಣಸಿನಕಾಯಿ ಬೆಳೆದು ಉತ್ತಮ ಆದಾಯ ಗಳಿಸಿದ ಯುವತಿ

ಬೆಳಗಾವಿ: ಹೌದು ಈ ದೃಶ್ಯದಲ್ಲಿ ಕಾಣುತ್ತಿರುವ ಯುವತಿಯ ಹೆಸರು ನಿಕಿತಾ ವೈಜು ಪಾಟೀಲ್ ವಯಸ್ಸು ಜಸ್ಟ್ 26, ಬೆಳಗಾವಿ(Belagavi) ತಾಲೂಕಿನ ಜಾಫರವಾಡಿ ಗ್ರಾಮದ ನಿವಾಸಿ. ನಿಕಿತಾ ತಂದೆ ವೈಜು ಪಾಟೀಲ್ 4 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಮಗಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರಿಸಬೇಕೆಂಬ ಕನಸು ಕಂಡಿದ್ದರು. ಬಿ.ಕಾಂ ಪದವೀಧರೆಯಾಗಿದ್ದ ನಿಕಿತಾ ಪಾಟೀಲ್(Nikita Patil) ಸಿಎ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಕಳೆದ ವರ್ಷ ನಿಕಿತಾಳ ತಂದೆ ವೈಜು ಪಾಟೀಲ್ ನಿಧನ ಹೊಂದುತ್ತಾರೆ. ಇದಾದ ಬಳಿಕ ದಿಕ್ಕೇ ತೋಚದಂತಾದ ಕುಟುಂಬಕ್ಕೆ ಆಸರೆಯಾಗಿದ್ದು ನಿಕಿತಾ ಪಾಟೀಲ್. ನಿಕಿತಾಳ ಚಿಕ್ಕಪ್ಪ ತಾನಾಜಿ ಸಹಾಯದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿ ನಾಲ್ಕು ಎಕರೆ ಜಮೀನಿನ ಪೈಕಿ ಮೂವತ್ತು ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದಾಳೆ. ನವಲ ಭಟಕಾ ಎಂಬ ತಳಿಯ ಮೆಣಸಿನ ಬೀಜವನ್ನು ತಾವೇ ಸ್ವತಃ ಬಿತ್ತಿ ಸಸಿ ಮಾಡಿ 30 ಗುಂಟೆಯಲ್ಲಿ ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಸೇರಿ ಸುಧಾರಿತ ಬೇಸಾಯ ಕ್ರಮ ಅನುಸರಿಸಿ ವ್ಯವಸಾಯ ಮಾಡುತ್ತಾ ಬಂದಿದ್ದು ಕಳೆದ ಆರು ತಿಂಗಳಲ್ಲಿ ಎಂಟು ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ.

ಹೊರ ರಾಜ್ಯಗಳಿಗೆ ರಫ್ತು

ಇನ್ನು ನಿಕಿತಾ ಬೆಳೆಯುತ್ತಿರುವ ಮೆಣಸಿನಕಾಯಿಗೆ ಭಾರಿ ಬೇಡಿಕೆ ಇದೆ. ಮೂರರಿಂದ ಐದು ಇಂಚು ಬೆಳೆಯುವ ಈ ಮೆಣಸಿನಕಾಯಿಯನ್ನು ಮಹಾರಾಷ್ಟ್ರದ ಕೊಲ್ಲಾಪುರ, ಗೋವಾಗೆ ಅತಿ ಹೆಚ್ಚು ಸರಬರಾಜು ಮಾಡಲಾಗುತ್ತೆ. ಪಿಜ್ಜಾ, ಬರ್ಗರ್ ತಯಾರಿಕೆಯಲ್ಲಿ ಈ ಮೆಣಸಿನಕಾಯಿ ಬಳಸುವುದರಿಂದ ಗೋವಾದಲ್ಲಿ ಈ ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆಯಂತೆ. ತಂದೆ ಸಾವಿನಿಂದಾಗಿ ಸಿಎ ವ್ಯಾಸಂಗ ಪೂರ್ಣ ಮಾಡಲು ಆಗಲಿಲ್ಲ. ತಂದೆಯ ಸಾವಿನ ಬಳಿಕ ಕೃಷಿ ಮಾಡಲು ಮನೆಯಲ್ಲಿ ಯಾರೂ ಇರಲಿಲ್ಲ, ಹೀಗಾಗಿ ಕೃಷಿ ಬಗ್ಗೆ ರೀಸರ್ಚ್ ಮಾಡಿ ವೈಜ್ಞಾನಿಕವಾಗಿ ಕೃಷಿ ಮಾಡಲು ಆರಂಭಿಸಿದೆ ಎಂದು ನಿಕಿತಾ ಪಾಟೀಲ್​ ಹೇಳಿದರು.

TV9 Kannada


Leave a Reply

Your email address will not be published. Required fields are marked *