ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ಎರಡು ದಿನದಿಂದ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಪಟಾಕಿ ಸಿಡಿದು ಹಲವರ ಕಣ್ಣಿಗೆ ಗಾಯಗಳಾಗಿವೆ. ಈ ಪೈಕಿ ಮಕ್ಕಳೇ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಒಟ್ಟು 9 ಮಂದಿ ಕಣ್ಣಿಗೆ ಹಾನಿಯಾಗಿದೆ. 9 ಜನರಲ್ಲಿ ಮಕ್ಕಳೆ ಹೆಚ್ಚಾಗಿದ್ದಾರೆ. ಕೆಲ ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ಬೆಲೆ ಏರಿಕೆ:
ಈ ವರ್ಷ ಪಟಾಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಚ್ಚಾ ವಸ್ತು ಪೂರೈಕೆ ಕುಸಿತ ಹಿನ್ನೆಲೆಯಲ್ಲಿ, ಇಂಧನ ಬೆಲೆ ಇಳಿಕೆಯಾಗಿದ್ದರೂ ಅಗತ್ಯ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಪಟಾಕಿ ಬೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.30ರಷ್ಟು ಹೆಚ್ಚಳವಾಗಿದೆ. ವ್ಯಾಪಾರಸ್ಥರು ವ್ಯಾಪಾರವೇ ಇಲ್ಲ ಎಂದು ಹೇಳುತ್ತಿದ್ದಾರೆ. ಪರಿಸರ ಕಾಳಜಿಯಿಂದ ಹಸಿರು ಪಟಾಕಿಗಳ ಖರೀದಿಗೆ ಜನ ಮುಂದಾಗಿದ್ದಾರೆ.
ಈ ವರ್ಷ ಕಡ್ಡಾಯವಾಗಿ ಶೇ.18ರಷ್ಟು ಜಿಎಸ್ ಟಿ ಪಾವತಿಸಲೇಬೇಕು. ಈ ಕಾರಣದಿಂದ ವ್ಯಾಪಾರಸ್ಥರು ಇದರ ಸಂಪೂರ್ಣ ಹೊರೆಯನ್ನ ಗ್ರಾಹಕರ ಮೇಲೆ ಹಾಕಿದ್ದಾರೆ. ಕಳೆದ ವರ್ಷ ಕೊರೊನಾದಿಂದ ಬ್ಯುಸಿನೆಸ್ ಆಗಿರಲಿಲ್ಲ. ಈ ಬಾರಿ ಕೊರೊನಾ ಇಲ್ಲದಿದ್ದರೂ ಬೆಲೆ ಏರಿಕೆ ಆಗಿದೆ. ಈ ಕಾರಣದಿಂದಾಗಿ ಜನ ಪಟಾಕಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಅದಾಗ್ಯೂ ಗ್ರಾಹಕರು ಬ್ರ್ಯಾಂಡ್ ಇರುವ ಪಟಾಕಿಗಳ ಮೇಲೆ ರಿಯಾಯಿತಿಯೇ ಕೊಡುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಅಚ್ಚರಿಯೆಂಬಂತೆ ವ್ಯಾಪಾರಸ್ಥರು ಮಾತಿಗಿಂತ ಭಿನ್ನ ದೃಶ್ಯ ಪಟಾಕಿ ಮುಂಗಟ್ಟುಗಳ ಮುಂದೆ ಕಂಡುಬರುತ್ತಿದೆ. ನಗರದ ಬಿಬಿಎಂಪಿ ಮೈದಾನಗಳಲ್ಲಿ ಪಟಾಕಿ ಖರೀದಿ ಜೋರಾಗಿದ್ದು, ನಗರ ಭಾಗದ 60 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಟ್ಟು 366 ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ನಡೆಯುತ್ತಿದ್ದು, ಜನರು ಖರೀದಿಸುತ್ತಿರುವ ದೃಶ್ಯ ಕಂಡುಬಂದಿದೆ.
ಇದನ್ನೂ ಓದಿ:
ಕೊರೊನಾ ಎರಡನೇ ಅಲೆ ಬಳಿಕ ಆರ್ಥಿಕ ಚೇತರಿಕೆಯತ್ತ ಅವಳಿ ನಗರದ ರಿಯಲ್ ಎಸ್ಟೇಟ್ ಉದ್ಯಮ