ವ್ಯಕ್ತಿಯೊಬ್ಬ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಫ್ಲೈ ಓವರ್ ಮೇಲೆ ಬಂದು ಹಣ ಎಸೆದ ಘಟನೆಯೊಂದು ನಡೆದಿದೆ. ಆ ವ್ಯಕ್ತಿ ಯಾಕೆ ಹಣ ಎಸೆದಿದ್ದು? ಹಣ ಎಸೆದ ವ್ಯಕ್ತಿ ಹೇಳುವುದೇನು? ಇಲ್ಲಿದೆ ನೋಡಿ.

ಹಣ ಎಸೆದ ಅರುಣ್ (ಎಡ ಚಿತ್ರ) ಮತ್ತು ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲಿಂದ ಹಣ ಎಸೆಯುತ್ತಿರುವ ಅರುಣ್ (ಬಲ ಚಿತ್ರ)
ಬೆಂಗಳೂರು: ನೋಟು ಅಮಾನ್ಯೀಕರಣಗೊಂಡ ಸಮಯದಲ್ಲಿ ಹಣ ಕೂಡಿಟ್ಟಿದ್ದ ಕೆಲವು ವ್ಯಕ್ತಿಗಳು ಇನ್ನು ಈ ನೋಟುಗಳು ಪ್ರಯೋಜನವಿಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಎಸೆದಿದ್ದರು. ಇದರ ಹೊರತಾಗಿ ಪಬ್ಗಳಲ್ಲಿ ಪಬ್ ಡಾನ್ಸರ್ಗಳ ಮೇಲೆ ಹಣ ಎಸೆಯುವುದನ್ನು ನೋಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್ (K.R. Market Flyover) ಮೇಲೆ ಬಂದು ಹಣ ಎಸೆದು ಸ್ಥಳದಿಂದ ತೆರಳಿದ್ದಾನೆ. ಈ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು, ನಾಗಬಾವಿಯ ಯೂಟ್ಯೂಬ್ ಚಾನಲ್ ಕಚೇರಿಯಲ್ಲಿ ಹಣ ಎಸೆದ ವ್ಯಕ್ತಿ ಇರುವುದನ್ನು ಖಚಿತಪಡಿಸಿ ಕಚೇರಿಗೆ ಎಂಟ್ರಿ ಕೊಟ್ಟು ವಶಕ್ಕೆ ಪಡೆದಿದ್ದಾರೆ. ಸದ್ಯ ಹಣ ಎಸೆದ ವ್ಯಕ್ತಿ ಅರುಣ್ ಎಂದು ತಿಳಿದುಬಂದಿದ್ದು, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಫ್ಲೈಓವರ್ನಿಂದ ಹಣ ಎಸೆದ ಘಟನೆ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ 92ಡಿ, ಐಪಿಸಿ 283ರ ಅಡಿ ಎನ್ಸಿಆರ್ ಪ್ರಕರಣ ದಾಖಲಿಸಿದ ಕೆ.ಆರ್.ಮಾರ್ಕೆಟ್ ಠಾಣಾ ಪೊಲೀಸರು, ಕಾರಣ ನೀಡುವಂತೆ ನಾಗರಭಾವಿಯಲ್ಲಿರುವ ಹಣ ಎಸೆದ ಅರುಣ್ ನಿವಾಸಕ್ಕೆ ನೋಟಿಸ್ ಜಾರಿ ಕಳುಹಿಸಿದ್ದರು. ಅದಾಗ್ಯೂ ಉತ್ತರಿಸದಿದ್ದಾಗ ಅರುಣ್ ನಾಗರಭಾವಿಯಲ್ಲಿರುವ ಯೂಟ್ಯೂಬ್ ಕಚೇರಿಯಲ್ಲಿ ಇರುವುದು ಪೊಲೀಸರಿಗೆ ಖಚಿತವಾಗಿದೆ. ಅದರಂತೆ ಕಚೇರಿಗೆ ತೆರಳಿದ ಪೊಲೀಸರು ಅರುಣ್ ಜೊತೆ ಮಾತುಕತೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ.
ತಾಜಾ ಸುದ್ದಿ