Bengaluru Rain: ಬೆಂಗಳೂರಿನಲ್ಲಿ ನ. 15ರವರೆಗೂ ಭಾರೀ ಮಳೆ; ಕೊರೆವ ಚಳಿಗೆ ಸಿಲಿಕಾನ್ ಸಿಟಿ ಗಡಗಡ | Bengaluru Rain with Winter till November 15 Karnataka Weather Today Bangalore Climate


Bengaluru Rain: ಬೆಂಗಳೂರಿನಲ್ಲಿ ನ. 15ರವರೆಗೂ ಭಾರೀ ಮಳೆ; ಕೊರೆವ ಚಳಿಗೆ ಸಿಲಿಕಾನ್ ಸಿಟಿ ಗಡಗಡ

ಮಳೆ (ಸಂಗ್ರಹ ಚಿತ್ರ)

ಬೆಂಗಳೂರು: ಚಳಿಗಾಲದಲ್ಲಿ ಶಿಮ್ಲಾ, ಕುಲು ಮನಾಲಿ, ನೈನಿತಾಲ್, ಸಿಕ್ಕಿಂ ಕಡೆ ಹೋಗಿ ಚುಮು ಚುಮು ಚಳಿಯನ್ನು ಅನುಭವಿಸಬೇಕೆಂಬ ಕನಸು ಕಂಡವರಿಗೆ ಅಷ್ಟೆಲ್ಲ ದೂರ ಹೋಗಬೇಕಾದ ಅಗತ್ಯವೇ ಇಲ್ಲ. ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೂಡ ಅದೇ ರೀತಿಯ ಚಳಿ ಶುರುವಾಗಿದೆ. ಬೆಚ್ಚಗೆ ಹೊದ್ದು ಮಲಗಿದರೆ ಯಾಕಾದರೂ ಬೆಳಗಾಯಿತಪ್ಪ ಎಂದು ಶಾಪ ಹಾಕುವಂತಾಗಿದೆ. ಕೈಯಲ್ಲಿ ಬಿಸಿ ಬಿಸಿ ಕಾಫಿ ಹಿಡಿದು ಕಿಟಕಿ ಪಕ್ಕ ಕುಳಿತರೆ ಹೊರಗೆ ಜಿಟಿಪಿಟಿ ಎಂದು ಒಂದೇ ಸಮನೆ ಹನಿಯುವ ಮಳೆ, ಆಗಾಗ ಮುಸುಕುವ ಮಂಜು… ಸದ್ಯಕ್ಕೆ 2-3 ದಿನಗಳಿಂದ ಬೆಂಗಳೂರಿನ ವಾತಾವರಣವಿದು. ಬೆಂಗಳೂರಿನಲ್ಲಿ ಇಂದು 17 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಕೊರೆತ ಚಳಿಗೆ ಇಡೀ ಬೆಂಗಳೂರು ಥಂಡಿ ಹಿಡಿದು ಕುಳಿತಿದೆ.

ಬೆಂಗಳೂರಿಗರಿಗೆ ಒಂದೆಡೆ ಚಳಿಯ ಕಾಟವಾದರೆ ಇನ್ನೊಂದು ಕಡೆ ಮಳೆಯ ಕಾಟ. ಹೊತ್ತಲ್ಲದ ಹೊತ್ತಲ್ಲಿ ಸುರಿಯುತ್ತಲೇ ಇರುವ ತುಂತುರು ಮಳೆ ಬೆಂಗಳೂರಿನ ಜನರಿಗೆ ಮಲೆನಾಡಿನ ನೆನಪು ತರಿಸುತ್ತಿದೆ. ಅಂದಹಾಗೆ, ಬೆಂಗಳೂರಿನಲ್ಲಿ ನವೆಂಬರ್ 15ರವರೆಗೂ ಇದೇ ರೀತಿ ಮಳೆ ಮುಂದುವರೆಯಲಿದೆ. ಮಳೆಯ ಜೊತೆಗೆ ಚಳಿಯೂ ಇರಲಿದ್ದು, ಇದು ಚಳಿಗಾಲವೋ, ಮಳೆಗಾಲವೋ ಎಂಬ ಗೊಂದಲ ಮೂಡಿಸುವಂತಿದೆ.

ಇಂದಿನಿಂದ 5 ದಿನಗಳ ಕಾಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಮಳೆ ಸುರಿಯಲಿದೆ. ಬೆಂಗಳೂರಿನಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಇಂದು ಮಧ್ಯಾಹ್ನ 1.30ರ ಹೊತ್ತಿಗೆ ಬೆಂಗಳೂರಿನಲ್ಲಿ 4.2 ಮಿಮೀ ಮಳೆ ದಾಖಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.8 ಮಿಮೀ ಮಳೆಯಾಗಿದ್ದರೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣದಲ್ಲಿ 3.5 ಮಿಮೀ ಮಳೆ ದಾಖಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದರ ಪರಿಣಾಮವಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ತಮಿಳುನಾಡಿನಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿಗೆ ತಾಗಿಕೊಂಡೇ ಇರುವ ಬೆಂಗಳೂರಿನಲ್ಲೂ ಮಳೆಯ ಪ್ರಭಾವ ಉಂಟಾಗಿದ್ದು, ನಾಳೆಯೂ ಸಿಲಿಕಾನ್ ಸಿಟಿಯಲ್ಲಿ ಮಳೆ ಹಾಗೂ ಮೋಡ ಕವಿದ ವಾತಾವರಣವಿರಲಿದೆ.

ಕರ್ನಾಟಕದ ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳವರೆಗೆ ಹಗುರದಿಂದ ಸಾಧಾರಣ ಮಳೆಯಾಗುತ್ತದೆ. ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ. ಶನಿವಾರದಿಂದ ಸೋಮವಾರದವರೆಗೆ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಕೆಲವೆಡೆ ಮಳೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ನಿರೀಕ್ಷೆಯಿದೆ. ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕೆಲವೆಡೆ ಅತಿ ಹೆಚ್ಚು ಮಳೆಯಾಗಲಿದ್ದು, ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಶುಕ್ರವಾರ ಮತ್ತು ಶನಿವಾರದಂದು ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಸೇರಿದಂತೆ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಿಗೆ ಮತ್ತು ರಾಮನಗರ, ದಾವಣಗೆರೆ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳಿಗೆ ನವೆಂಬರ್ 14 ಮತ್ತು ನವೆಂಬರ್ 15 ರಂದು ಹಳದಿ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನಾಳೆಯಿಂದ ವ್ಯಾಪಕವಾಗಿ ಹಗುರದಿಂದ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ ತಿಂಗಳಿನಲ್ಲಿ ಕರ್ನಾಟಕದಾದ್ಯಂತ ಮಳೆಗೆ 21 ಜನರು ಸಾವನ್ನಪ್ಪಿದ್ದರು. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರಪ್ರದೇಶದ ದಕ್ಷಿಣ ಭಾಗ ಹಾಗೂ ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ತಮಿಳುನಾಡಿನಲ್ಲಿ ಮಳೆಯ ಅಬ್ಬರ ವಿಪರೀತ ಹೆಚ್ಚಾಗಲಿದೆ.

ಇದನ್ನೂ ಓದಿ: Karnataka Weather Today: ಶಿವಮೊಗ್ಗ, ಬೆಂಗಳೂರು, ಕೊಡಗು ಸೇರಿ 9 ಜಿಲ್ಲೆಗಳಲ್ಲಿ ಮಳೆಯಿಂದ ಹಳದಿ ಅಲರ್ಟ್​ ಘೋಷಣೆ

Tamil Nadu Rain: ತಮಿಳುನಾಡಿನಲ್ಲಿ ವಿಪರೀತ ಮಳೆ; ಕಾವೇರಿ ಕಣಿವೆಯ ಡ್ಯಾಂಗಳು ಭರ್ತಿ

TV9 Kannada


Leave a Reply

Your email address will not be published. Required fields are marked *