ಜಾತ್ರೆ ಅಂದ್ರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ, ಬಣ್ಣ ಬಣ್ಣದ ಕಲರ್ ಪುಲ್ ಲೈಟಿಂಗ್ಸ್ ಜೊತೆಗೆ ಜಾತ್ರೆಯಲ್ಲಿ ಜಾಯಿಂಟ್ ವ್ಹೀಲ್ ಸೇರಿದಂತೆ ತರಹೇವಾರಿ ಮರನರಂಜನಾ ಕ್ರೀಡೆಗಳಲ್ಲಿ ಭಾಗವಹಿಸಬಹುದೆಂದು, ಆ ಬಾಲಕ ಸಹ ತನ್ನ ತಾಯಿಯೊಂದಿಗೆ ಜಾತ್ರೆಗೆ ಹೋಗಿದ್ದ ಖುಷಿ ಖುಷಿಯಾಗಿ ಏರ್ ಬಲೂನ್ನಲ್ಲಿ ಹತ್ತಿ ಇಳಿದು ಕುಣಿದು ಕುಪ್ಪಳಿಸಿದ್ದ. ಆದ್ರೆ, ಆ ಖುಷಿ ಕ್ಷಣ ಮಾತ್ರದಲ್ಲೆ ದೂರವಾಗಿದ್ದು ಬಾಲಕ ದುರಂತ ಅಂತ್ಯ ಕಂಡಿದ್ದಾನೆ.
ಬೆಂಗಳೂರು ಗ್ರಾಮಾಂತರ: ಇಲ್ಲಿ ಈ ರೀತಿ ಸಣ್ಣ ವಯಸ್ಸಿನಲ್ಲೆ ದುರಂತ ಅಂತ್ಯ ಕಂಡಿರುವ ಈ ಬಾಲಕನ ಹೆಸರು ಶ್ರೇಯಸ್. ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ನಗರದ ಶಾಂತಿನಗರ ನಿವಾಸಿಯಾದ ಈ ಬಾಲಕ ನಿನ್ನೆ(ಮೇ.24) ರಾತ್ರಿ ಪೋಷಕರ ಜೊತೆ ನಗರದ ಮುತ್ಯಾಲಮ್ಮ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದ. ಜೊತೆಗೆ ಜಾತ್ರೆಯಲ್ಲಿ ಕಿಕ್ಕಿರಿದು ಸೇರಿದ್ದ ಜನ ಸಾಗರದ ನಡುವೆ ಜಾತ್ರೆಯಲ್ಲಿ ಮಕ್ಕಳಿಗಾಗಿ ಹಾಕಿದ್ದ ವಿವಿಧ ಬಗೆಯ ಕ್ರೀಡೆಗಳಲ್ಲೂ ಸಹ ಆಟವಾಡಿದ್ದ. ನಂತರ ಏರ್ ಬಲೂನ್ನಲ್ಲಿ ಆಟವಾಡಲು ಬಂದಿದ್ದಾನೆ. ಈ ವೇಳೆ ಏರ್ ಬಲೂನ್ನಲ್ಲಿ ಆಟವಾಡ್ತಿದ್ದಂತೆ ಬಾಲಕ ಶ್ರೇಯಸ್ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದ್ದು, ಕೂಡಲೆ ಪೋಷಕರು ಮತ್ತು ಸ್ಥಳೀಯರು ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದ್ರೆ, ಈ ವೇಳೆ ಆಸ್ವತ್ರೆಗೆ ಹೋಗುವಷ್ಟರಲ್ಲೆ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಬಾಲಕ ದುರಂತ ಅಂತ್ಯ ಕಂಡಿದ್ದಾನೆ.
ಇನ್ನು ವರ್ಷಕ್ಕೊಮ್ಮೆ ನಡೆಯುವ ಮುತ್ಯಾಲಮ್ಮ ಜಾತ್ರೆಗೆ ಪ್ರತಿವರ್ಷದಂತೆ ಈ ವರ್ಷವು ಜನ ಸಾಗರವೇ ಹರಿದು ಬಂದಿದ್ದು, ರಸ್ತೆಗಳೆಲ್ಲ ಜನರಿಂದ ತುಂಬಿ ತುಳುಕಿತ್ತು. ಅಲ್ಲದೆ ಜನದಟ್ಟಣೆ ಹೆಚ್ಚಾಗಿದ್ದ ವೇಳೆ ವಿವಿಧ ಕ್ರೀಡೆಗಳನ್ನ ಆಡಿದ ಶ್ರೇಯಸ್ಗೆ ಉಸಿರಾಟದ ಸಮಸ್ಯೆ ಎದುರಾಗಿ ಕುಸಿದು ಬಿದ್ದಿದ್ದ. ಶೀಘ್ರವಾಗಿ ಬಾಲಕನನ್ನ ಆಸ್ವತ್ರಗೆ ಕರೆದೋಗಲು ಸಾಧ್ಯವಾಗಿಲ್ಲ. ಹೀಗಾಗಿ ಆಸ್ವತ್ರೆಗೆ ಹೋಗುವ ಮುನ್ನವೆ ಬಾಲಕ ಸಾವನ್ನಪಿದ್ದು ಮಗನನ್ನ ಕಳೆದುಕೊಂಡು ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು. ದೊಡ್ಡ ದೊಡ್ಡ ಜಾತ್ರೆಗಳನ್ನ ಆಯೋಜನೆ ಮಾಡುವಾಗ ಸಾಕಷ್ಟು ಜನರು ಸೇರುವಾಗ ತುರ್ತು ಚಿಕಿತ್ಸೆಗಾಗಿ ಆ್ಯಂಬುಲೇನ್ಸ್ ಸೇರಿದಂತೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದ ಕಾರಣ ಇಂತಹ ದುರ್ಘಟನೆ ನಡೆದಿದೆ ಎಂದು ಜಾತ್ರೆ ಆಯೋಜನೆ ಬಗ್ಗೆ ಮೃತ ಬಾಲಕನ ಸಂಬಂಧಿಕರು ಅಸಮಧಾನ ಹೊರ ಹಾಕಿದ್ದಾರೆ.