Big news: ಐಪಿಎಲ್​ನಲ್ಲಿ ಮತ್ತೆ ಕಳ್ಳಾಟ! ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ ಸಿಬಿಐ | IPL 2022 CBI arrests 3 people in alleged match fixing and betting case in t20 league


IPL 2022: ಐಪಿಎಲ್​ನಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಈ ಪ್ರಕರಣದಲ್ಲಿ 3 ಜನರನ್ನು ಬಂಧಿಸಿದೆ.

ಐಪಿಎಲ್​ನಲ್ಲಿ (IPL) ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ (match-fixing and betting) ಪ್ರಕರಣ ಬೆಳಕಿಗೆ ಬಂದಿದ್ದು, ಕೇಂದ್ರ ತನಿಖಾ ಸಂಸ್ಥೆ ಸಿಬಿಐ (CBI) ಈ ಪ್ರಕರಣದಲ್ಲಿ 3 ಆರೋಪಿಗಳನ್ನು ಬಂಧಿಸಿದೆ. ಇಂಡಿಯನ್ ಟಿ20 ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ನಲ್ಲಿ ಮೂವರು ಭಾಗಿಯಾಗಿದ್ದಾರೆ ಎಂದು ಸಿಬಿಐ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಾಹಿತಿಯ ಪ್ರಕಾರ, ಪಾಕಿಸ್ತಾನದಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ಸದ್ಯ ಬಂಧಿತ ಮೂವರು ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಬಂಧಿತ ಆರೋಪಿಗಳು ದೆಹಲಿ, ಜೋಧ್‌ಪುರ, ಜೈಪುರ ಮತ್ತು ಹೈದರಾಬಾದ್‌ ಮೂಲದವರು ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಈ ಆರೋಪ 2019 ರಂದು ಅಂದರೆ 3 ವರ್ಷಗಳ ಹಿಂದೆ ನಡೆದ ಐಪಿಎಲ್​ಗೆ ಸಂಬಂಧಪಟ್ಟಿದೆ. ವರದಿಯ ಪ್ರಕಾರ, ಈ ಪ್ರಕರಣದಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಕುರಿತು ಸಿಬಿಐ ದಾಖಲಿಸಿರುವ ಎಫ್‌ಐಆರ್ 2019 ರ ಆವೃತ್ತಿಗೆ ಸಂಬಂಧಿಸಿದೆ. ಆದರೆ, ಫಿಕ್ಸಿಂಗ್‌ನ ವ್ಯಾಪ್ತಿಯು ಎಷ್ಟು ದೊಡ್ಡದಾಗಿದೆ ಅಥವಾ ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. 2019 ರ ಐಪಿಎಲ್ ಪಂದ್ಯಾವಳಿ ಭಾರತದಲ್ಲಿಯೇ ನಡೆದಿದ್ದು, ಇದರಲ್ಲಿ ಮುಂಬೈ ಇಂಡಿಯನ್ಸ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.

2013ರಲ್ಲಿ ಫಿಕ್ಸಿಂಗ್ ಪ್ರಕರಣ
ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಟಿ20 ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಯಾವಾಗಲೂ ಬುಕ್ಕಿಗಳು ಮತ್ತು ಫಿಕ್ಸರ್‌ಗಳ ಕಣ್ಣಿಗೆ ಬೀಳುತ್ತದೆ. ಕೆಲ ವರ್ಷಗಳ ಹಿಂದೆಯೂ ಬೆಟ್ಟಿಂಗ್, ಫಿಕ್ಸಿಂಗ್ ಪ್ರಕರಣಗಳು ಲೀಗ್ ಹಂತದಲ್ಲಿ ಕೇಳಿ ಬಂದಿದ್ದವು. 2013 ರಲ್ಲಿ, ರಾಜಸ್ಥಾನ್ ರಾಯಲ್ಸ್‌ನ ಭಾರತೀಯ ವೇಗದ ಬೌಲರ್‌ಗಳಾದ ಎಸ್ ಶ್ರೀಶಾಂತ್, ಅಶೋಕ್ ಚಾಂಡಿಲಾ ಮತ್ತು ಅಂಕೀತ್ ಚವಾಣ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ನಂತರ ಈ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಮೂವರಿಗೂ ಬಿಸಿಸಿಐ ಕ್ರಿಕೆಟ್​ನಿಂದ ಜೀವಾವಧಿ ನಿಷೇಧ ಹೇರಿತ್ತು. ಆದರೆ, ಸುದೀರ್ಘ ನ್ಯಾಯಾಲಯದ ವಿಚಾರಣೆಯ ನಂತರ ಮೂವರ ಮೇಲಿನ ಆರೋಪ ಖುಲಾಸೆಯಾಗಿತ್ತು.

TV9 Kannada


Leave a Reply

Your email address will not be published. Required fields are marked *