ಬಿಜೆಪಿಗೆ ಕೈಕೊಟ್ಟು ನಿತೀಶ್ ಕುಮಾರ್ ಸರ್ಕಾರ ಉರುಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು.

Image Credit source: India Today
ಪಾಟ್ನಾ: ಬಿಹಾರದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ಇದೀಗ ರಾಜಭವನದ (Raj Bhavan) ಹೊಸ್ತಿಲಿಗೆ ಹೋಗಿ ನಿಂತಿದೆ. ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳಲು ನಿರ್ಧರಿಸಿರುವ ಜೆಡಿಯು ಅಧ್ಯಕ್ಷ ಹಾಗೂ ಸಿಎಂ ನಿತೀಶ್ ಕುಮಾರ್ (Nitish Kumar) ತೇಜಸ್ವಿ ಯಾದವ್ ಅವರೊಂದಿಗೆ ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಇಂದು ನಿತೀಶ್ ಕುಮಾರ್ ತಮ್ಮ ಪಕ್ಷದ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿದ್ದಾರೆ. ಇಂದು ಸಂಜೆ ರಾಜ್ಯಪಾಲರ ಭೇಟಿಯ ಬಳಿಕ ಅವರು ಬಿಜೆಪಿ ಸಚಿವರ ಹೆಸರುಗಳನ್ನು ಕೈಬಿಡುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ, ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ಪತನವಾಗಲಿದೆ. ಬಳಿಕ ವಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಜೆಡಿಯು ಸರ್ಕಾರ ರಚಿಸಲು ನಿರ್ಧರಿಸಿದೆ.
ಬಿಜೆಪಿಗೆ ಕೈಕೊಟ್ಟು ನಿತೀಶ್ ಕುಮಾರ್ ಸರ್ಕಾರ ಉರುಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು. ಬಳಿಕ ಆರ್ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈ ಜೋಡಿಸಿತ್ತು. ಜೆಡಿ(ಯು)-ಆರ್ಜೆಡಿ-ಕಾಂಗ್ರೆಸ್ ‘ಮಹಾಘಟಬಂಧನ್’ 2015ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿತ್ತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್ಜೆಡಿಯ ತೇಜಸ್ವಿ ಯಾದವ್ ಅವರ ಉಪಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.