ಬಿಪಿನ್ ರಾವತ್
ತಮಿಳುನಾಡಿನ ಕುನೂರ್ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ (Bipin Rawat) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವಿನ ಹೋರಾಟದಲ್ಲಿ ಇದ್ದ ಬಿಪಿನ್ ರಾವತ್ ಮರಣವನ್ನು ಭಾರತೀಯ ವಾಯುಸೇನೆ ದೃಢಪಡಿಸಿದೆ. ಟ್ವೀಟ್ ಮಾಡಿರುವ ಇಂಡಿಯನ್ ಏರ್ಫೋರ್ಸ್, ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್ನಲ್ಲಿದ್ದ ಇತರ 11 ಮಂದಿ ಇಂದಿನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಹೇಳಿದೆ.
With deep regret, it has now been ascertained that Gen Bipin Rawat, Mrs Madhulika Rawat and 11 other persons on board have died in the unfortunate accident.
— Indian Air Force (@IAF_MCC) December 8, 2021
ಸಿಡಿಎಸ್ ಬಿಪಿನ್ ರಾವತ್ ಅವರು ಇಂದು ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ತಮ್ಮ ಪತ್ನಿ, ಇನ್ನಿತರ ಸೇನಾ ಅಧಿಕಾರಿಗಳೊಂದಿಗೆ ತಮಿಳುನಾಡಿನ ವೆಲ್ಲಿಂಗ್ಟನ್ಗೆ ಹೋಗಿದ್ದರು. ಅಂದರೆ ದೆಹಲಿಯಿಂದ ಕೊಯಂಬತ್ತೂರಿನ ಸೂಲೂರ್ಗೆ ಬಂದು, ಅಲ್ಲಿಂದ ಮಧ್ಯಾಹ್ನ 12.20ಕ್ಕೆ ವೆಲ್ಲಿಂಗ್ಟನ್ಗೆ ಸೇನಾ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಈ ಚಾಪರ್ ಕೂನೂರು ಬಳಿ ಪತನವಾಗಿತ್ತು. ಇದರಲ್ಲಿದ್ದ 14 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಬಿಪಿನ್ ರಾವತ್ ಪತ್ನಿ ಮೃತಪಟ್ಟಿದ್ದು ಆಗಲೇ ಅಧಿಕೃತವಾಗಿತ್ತು. ಆದರೆ ಬಿಪಿನ್ ರಾವತ್ ಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿತ್ತು. ಇದೀಗ ವಾಯುಸೇನೆ ಅವರ ಸಾವನ್ನು ದೃಢಪಡಿಸಿದೆ. ಬಿಪಿನ್ ರಾವತ್ ಮೃತದೇಹವನ್ನು ನಾಳೆ ದೆಹಲಿಗೆ ತರಲಾಗುವುದು ಎಂದು ಹೇಳಲಾಗಿದೆ.
ಯಾರು ಈ ಬಿಪಿನ್ ರಾವತ್?
ಬಿಪಿನ್ ರಾವತ್ ಪೂರ್ತಿ ಹೆಸರು ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್. ಇವರಿಗೆ 63 ವರ್ಷ ವಯಸ್ಸಾಗಿತ್ತು. ಮೂಲತಃ ಉತ್ತರಾಖಂಡ್ನವಾರಗಿದ್ದು, 2019ರಲ್ಲಿ ಈ ಸಿಡಿಎಸ್ ಹುದ್ದೆಗೆ ಏರಿದ್ದರು. 2015ರಲ್ಲಿ ನಾಗಾಲ್ಯಾಂಡ್ ಬಳಿ ನಡೆದಿದ್ದ ಹೆಲಿಕಾಪ್ಟರ್ ಪತನ ದುರಂತದಲ್ಲಿ ಬಿಪಿನ್ ರಾವತ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಇಂದು ಬಿಪಿನ್ ರಾವತ್ ಸಾವಿಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.