BPCL Divestment: ಸರ್ಕಾರದಿಂದ ಬಿಪಿಸಿಎಲ್ ಹೂಡಿಕೆ ಹಿಂತೆಗೆತ ವಾಪಸ್ ಎಂದ ಅನಿಲ್ ಅಗರ್​ವಾಲ್ | Government Has Withdrawn BPCL Divestment Plan According To Anil Agarwal


BPCL Divestment: ಸರ್ಕಾರದಿಂದ ಬಿಪಿಸಿಎಲ್ ಹೂಡಿಕೆ ಹಿಂತೆಗೆತ ವಾಪಸ್ ಎಂದ ಅನಿಲ್ ಅಗರ್​ವಾಲ್

ಸಾಂದರ್ಭಿಕ ಚಿತ್ರ

ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಖಾಸಗೀಕರಣದ ಯೋಜನೆ ಮುಂದುವರಿಸದಿರಲು ಸರ್ಕಾರ ನಿರ್ಧರಿಸಿದೆ. ಇನ್ನು ಈ ಯೋಜನೆಯನ್ನು ಪರಿಷ್ಕರಿಸಿ ಮಾರುಕಟ್ಟೆಗೆ ಬರುವುದಾಗಿ ತಿಳಿಸಿದೆ ಎಂದು ವೇದಾಂತ ರಿಸೋರ್ಸಸ್ ಅಧ್ಯಕ್ಷ ಅನಿಲ್ ಅಗರ್​ವಾಲ್ ಹೇಳಿದ್ದಾರೆ. ಭಾರತ ಸರ್ಕಾರವು 2021-22ರಲ್ಲಿ ಬಿಪಿಸಿಎಲ್​ನಲ್ಲಿ ತನ್ನ ಸಂಪೂರ್ಣ ಶೇ 53ರಷ್ಟು ಪಾಲನ್ನು ಖಾಸಗಿಯವರಿಗೆ ಮಾರಾಟ ಮಾಡಲು ಯೋಜನೆ ಹೊಂದಿತ್ತು. ಆದರೆ ವಿಳಂಬದ ನಂತರ ಈ ಗುರಿಯನ್ನು 2022-23ಕ್ಕೆ ವರ್ಗಾಯಿಸಲಾಯಿತು. ವೇದಾಂತ ಗ್ರೂಪ್, ಅಪೋಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್, ಖಾಸಗಿ ಈಕ್ವಿಟಿ ಪ್ರಮುಖವಾದ ಐ ಸ್ಕ್ವೇರ್ಡ್ ಕ್ಯಾಪಿಟಲ್-ಬೆಂಬಲಿತ ಥಿಂಕ್ ಗ್ಯಾಸ್ ಆಸಕ್ತಿ ತೋರಿದ ಸಂಭಾವ್ಯ ಖರೀದಿದಾರರು.

ಮನಿಕಂಟ್ರೋಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಿಪಿಸಿಎಲ್ ಹೂಡಿಕೆ ಹಿಂತೆಗೆತ ಸ್ಥಿತಿ ಬಗ್ಗೆ ಕೇಳಿದಾಗ ಉತ್ತರಿಸಿರುವ ಅಗರ್​ವಾಲ್, “ಇದು ಸಂಭವಿಸುವುದಿಲ್ಲ. ಅವರು ಪ್ರಸ್ತಾವವನ್ನು ಹಿಂಪಡೆದಿದ್ದಾರೆ. ಅವರು ಹೊಸ ಕಾರ್ಯತಂತ್ರದೊಂದಿಗೆ ಹಿಂತಿರುಗುತ್ತಾರೆ,” ಎಂದು ಅವರು ಹೇಳಿದ್ದಾರೆ. “ಸಾಮಾನ್ಯವಾಗಿ, ಬಿಪಿಸಿಎಲ್ ಹೂಡಿಕೆ ಹಿಂತೆಗೆತ ಮುಂದೆ ಹೋಗುತ್ತಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ, ಜತೆಗೆ ಈ ಸ್ವರೂಪದಲ್ಲಿ ಅಲ್ಲ,” ಎಂಬುದಾಗಿ ಅಗರ್​ವಾಲ್ ಹೇಳಿದ್ದಾರೆ. ಬಿಪಿಸಿಎಲ್ ಹೂಡಿಕೆ ಹಿಂತೆಗೆತ ಮೇಲಿನ ಮಿಶ್ರ ಸೂಚನೆಗಳು ಹೂಡಿಕೆದಾರರು ಮತ್ತು ಉದ್ಯಮವು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಗೊಂದಲಕ್ಕೆ ಒಳಗಾಗುವಂತೆ ಮಾಡಿದವು. ಮಾರ್ಚ್ ಅಂತ್ಯದ ವೇಳೆಗೆ, ಹಣಕಾಸು ಖಾತೆಯ ರಾಜ್ಯ ಸಚಿವ ಭಾಗವತ್ ಕರದ್ ರಾಜ್ಯಸಭೆಗೆ ಹೇಳಿಕೆ ನೀಡಿದ್ದು, ಹಿಂತೆಗೆತ ಪ್ರಕ್ರಿಯೆಯು ಎರಡನೇ ಹಂತದಲ್ಲಿದೆ ಮತ್ತು “ಹಲವು” ಆಸಕ್ತಿಯನ್ನು ಸ್ವೀಕರಿಸಿದೆ. ಆದರೆ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದಂತೆ, ಹೂಡಿಕೆದಾರರು ಹಸಿರು ಯೋಜನೆಗಳತ್ತ ಉತ್ಸುಕರಾಗಿದ್ದರಿಂದ ಹೂಡಿಕೆ ಹಿಂತೆಗೆತ ನಿಧಾನವಾಗಿದೆ.

ಯೋಜನೆಯನ್ನು ಈಗಿನ ರೂಪದಲ್ಲಿ ಸ್ಥಗಿತಗೊಳಿಸಲಾಗಿದೆಯೇ ಎಂಬ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಬೇಕಿದೆ. ಸರ್ಕಾರವು ಪರಿಷ್ಕೃತ ಆಫರ್​ ಹಿಂತಿರುಗಿದರೆ ವೇದಾಂತವು ಬಿಪಿಸಿಎಲ್​ಗಾಗಿ ಬಿಡ್ ಮಾಡಲು ಆಸಕ್ತಿ ವಹಿಸುತ್ತದೆಯೇ ಎಂಬವ ಪ್ರಶ್ನೆಗೆ ಅಗರ್​ವಾಲ್, “ಈಗ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಅವರು ಮಾರುಕಟ್ಟೆಗೆ ಬಂದಾಗ, ನಾವು ನೋಡುತ್ತೇವೆ” ಎಂದಿದ್ದಾರೆ. ಬಿಪಿಸಿಎಲ್ ಹೂಡಿಕೆ ಹಿಂತೆಗೆತ ಯೋಜನೆಯು ಸರ್ಕಾರವು ಬಯಸಿದ ಆಸಕ್ತಿಯನ್ನು ಹುಟ್ಟುಹಾಕಲಿಲ್ಲ. ಫೆಬ್ರವರಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು “ಬಿಪಿಸಿಎಲ್ ಹೂಡಿಕೆ ಹಿಂತೆಗೆತದಲ್ಲಿ ಏರ್ ಇಂಡಿಯಾದ ಯಶಸ್ಸನ್ನು ಪುನರಾವರ್ತಿಸಲು ಸರ್ಕಾರ ಆಶಿಸುತ್ತಿದೆ,” ಎಂದು ಹೇಳಿದ್ದರು.

ಏರ್ ಇಂಡಿಯಾದ ಹಿಂತೆಗೆತ ವಿಳಂಬದಿಂದ ಹಾಳಾಗಿದೆ. ಜನವರಿ 27ರಂದು ಟಾಟಾ ಸಮೂಹವು ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಿತು, ಜೊತೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು AI-SATSನಲ್ಲಿ ಪಾಲನ್ನು ಪಡೆದುಕೊಂಡಿತು. ಮಾರ್ಚ್ 2020ರಲ್ಲಿ ಏರ್​ ಇಂಡಿಯಾದ ಶೇ 100ರಷ್ಟು ಪಾಲನ್ನು ಪಡೆಯಲು ಸರ್ಕಾರವು ಬಿಡ್‌ಗಳನ್ನು ಆಹ್ವಾನಿಸಿತ್ತು ಮತ್ತು ಟಾಟಾ ಸಮೂಹವು ಅಕ್ಟೋಬರ್ 2021ರಲ್ಲಿ ಬಿಡ್‌ಗಳಲ್ಲಿ ವಿಜೇತವಾಯಿತು. “ಖಾಸಗೀಕರಣ ಪ್ರಕ್ರಿಯೆಯು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಕಾರ್ಪೊರೇಟೈಸೇಷನ್ ವೇಗವಾಗಿ ಕೆಲಸ ಮಾಡುತ್ತದೆ. ಸರ್ಕಾರವು ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಮಾರಾಟ ಮಾಡಬೇಕು ಮತ್ತು ಅವುಗಳ ಹೋಲ್ಡಿಂಗ್ ಶೂನ್ಯಕ್ಕೆ ಇಳಿಸಬೇಕು,” ಎಂದು ವೇದಾಂತ ರಿಸೋರ್ಸಸ್ ಅಧ್ಯಕ್ಷ ಹೇಳಿದ್ದಾರೆ.

ಭಾರತವು ತನ್ನ ಇಂಧನ ಭದ್ರತೆಗೆ ಆದ್ಯತೆ ನೀಡಬೇಕು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಅಗರ್​ವಾಲ್ ಎಚ್ಚರಿಸಿದ್ದಾರೆ. ಸಾರ್ವಜನಿಕ ವಲಯದ ಕಂಪೆನಿಗಳ ಕಾರ್ಪೊರೇಟೈಸೇಷನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. “ಸರ್ಕಾರಿ ಕಂಪೆನಿಗಳು ಒಟ್ಟಾಗಿ 200 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಏಕೆ ಅವರು ಕಾರ್ಪೊರೇಟ್ ಮಾಡಲು ಸಾಧ್ಯವಿಲ್ಲ? ಸರ್ಕಾರವು ಭಾರತೀಯ ಮ್ಯೂಚುವಲ್ ಫಂಡ್‌ಗಳು, ಖಾಸಗಿ ಈಕ್ವಿಟಿ ಹಾಗೂ ಎಚ್​ಎನ್​ಐಗಳಿಗೆ (ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳಿಗೆ) ಪಾಲನ್ನು ಏಕೆ ಮಾರಾಟ ಮಾಡಬಾರದು? ಅವು ಬಹಳ ಬಲವಾದ ಮತ್ತು ಬೋರ್ಡ್ ಚಾಲಿತ ಕಂಪೆನಿಗಳಾಗಿವೆ. ಸರ್ಕಾರ ಈ ವ್ಯವಹಾರದಿಂದ ಸಂಪೂರ್ಣವಾಗಿ ಹೊರಗುಳಿಯಬೇಕು. ನಾವು ಉದ್ಯೋಗಿಗಳಿಗೆ ಈಕ್ವಿಟಿ ನೀಡಬಹುದು ಮತ್ತು ಯಾರನ್ನೂ ತೆಗೆಯಲಾಗುವುದಿಲ್ಲ. ನಾವು ಇದನ್ನು ಮಾಡಿದರೆ ಯುಎಸ್​ಡಿ 200 ಶತಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯವು ಯುಎಸ್​ಡಿ 600 ಶತಕೋಟಿಗೆ ಏರಬಹುದು,” ಎಂದು ಅಗರ್​ವಾಲ್ ಸೇರಿಸಿದ್ದಾರೆ.

TV9 Kannada


Leave a Reply

Your email address will not be published.