
ಸಾಂದರ್ಭಿಕ ಚಿತ್ರ
ಬಿಪಿಸಿಎಲ್ ಬಂಡವಾಳ ಹಿಂತೆಗೆತ ನಿರ್ಧಾರವನ್ನು ಸರ್ಕಾರ ರದ್ದು ಮಾಡಿದೆ ಎಂದು ತಿಳಿಸಲಾಗಿದೆ. ಇದರ ಹಿಂದಿನ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.
ಸಾರ್ವಜನಿಕ ವಲಯದ ಉದ್ಯಮ (ಪಿಎಸ್ಯು) ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL)ಗೆ ಎರಡು ಮೂರು ಪಾರ್ಟಿಗಳು ತಮ್ಮ ಬಿಡ್ಗಳನ್ನು ಹಿಂತೆಗೆದುಕೊಂಡ ನಂತರ ಕೇಂದ್ರವು ಖಾಸಗೀಕರಣವನ್ನು ರದ್ದುಗೊಳಿಸಿದೆ. ಆಸಕ್ತಿ ವ್ಯಕ್ತಪಡಿಸುವಿಕೆ (EoI) ಮತ್ತು ಸ್ವೀಕರಿಸಿದ ಬಿಡ್ಗಳನ್ನು ರದ್ದುಗೊಳಿಸಲಾಗುತ್ತದೆ. ಪರಿಶೀಲನೆ ನಂತರ ಖಾಸಗೀಕರಣ ಪ್ರಕ್ರಿಯೆಯನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಬಿಪಿಸಿಎಲ್ನಲ್ಲಿನ ಶೇಕಡಾ 52.98 ಪಾಲನ್ನು ಮಾರಾಟ ಮಾಡಲು ಕೇಂದ್ರವು ಬಿಡ್ಗಳನ್ನು ಆಹ್ವಾನಿಸಿತ್ತು. ಅನಿಲ್ ಅಗರ್ವಾಲ್ರ ವೇದಾಂತವು ತನ್ನ ಲಂಡನ್-ಮೂಲದ ಮೂಲ ವೇದಾಂತ ಸಂಪನ್ಮೂಲಗಳೊಂದಿಗೆ ಎಸ್ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ರಚಿಸಿದೆ ಮತ್ತು ಬಿಪಿಸಿಎಲ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದೆ. ಇನ್ನು ಐ ಸ್ಕ್ವೇರ್ಡ್ ಕ್ಯಾಪಿಟಲ್ನಿಂದ ಪ್ರಮೋಟ್ ಮಾಡಲಾದ ಅಪೊಲೊ ಮ್ಯಾನೇಜ್ಮೆಂಟ್ ಮತ್ತು ಥಿಂಕ್ ಗ್ಯಾಸ್ ಸಹ ಸಲ್ಲಿಸಿವೆ ಎಂದು ವರದಿಯಾಗಿದೆ.
ಖಾಸಗೀಕರಣವನ್ನು ಪುನರಾರಂಭಿಸುವ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಣಕಾಸು ಸಚಿವರು, ಹೆದ್ದಾರಿ ಸಚಿವರು ಮತ್ತು ಆಡಳಿತ ಸಚಿವಾಲಯದ ಸಚಿವರನ್ನು ಒಳಗೊಂಡಿರುವ ಪರ್ಯಾಯ ಕಾರ್ಯವಿಧಾನದ ನಿರ್ಧಾರದ ಆಧಾರದ ಮೇಲೆ ಬಿಪಿಸಿಎಲ್ನ ಕಾರ್ಯತಂತ್ರದ ಹಿಂತೆಗೆದುಕೊಳ್ಳುವಿಕೆ ಮತ್ತು ಬಿಡ್ದಾರರಿಂದ ಪಡೆದ ಆಸಕ್ತಿ ವ್ಯಕ್ತಪಡಿಸುವುದನ್ನು ರದ್ದುಗೊಳಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM ) ಹೇಳಿಕೆಯಲ್ಲಿ ತಿಳಿಸಿದೆ. ಕೊವಿಡ್-19 ಹಲವು ಅಲೆಗಳು ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಅನೇಕ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಿವೆ. ವಿಶೇಷವಾಗಿ ತೈಲ ಮತ್ತು ಅನಿಲ ಉದ್ಯಮದ ಮೇಲೆ ಹೆಚ್ಚು ಪರಿಣಾಮ ಆಗಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಈಗ ಇರುವ ಪರಿಸ್ಥಿತಿಯಿಂದಾಗಿ ಬಿಪಿಸಿಎಲ್ನ ಪ್ರಸ್ತುತ ಬಂಡವಾಳ ಹಿಂತೆಗೆತ ಪ್ರಕ್ರಿಯೆಯಲ್ಲಿ ಮುಂದುವರಿಯಲು ಹೆಚ್ಚಿನ ಬಿಡ್ದಾರರು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಹೂಡಿಕೆದಾರರು ತಮ್ಮ ಬಿಡ್ಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಹೇಗೆ ಮುಂದುವರಿಯಬೇಕೆಂದು ನಿರ್ಧರಿಸಲು ಸರ್ಕಾರವು ಕಾಯಲಿದೆ ಎಂದು ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ‘ಬಿಜಿನೆಸ್ ಸ್ಟ್ಯಾಂಡರ್ಡ್’ಗೆ ತಿಳಿಸಿದ್ದಾರೆ. “ಇದು ಸಮಗ್ರ ಪರಿಶೀಲನೆ ನಂತರ ವಹಿವಾಟಿನ ಪುನರ್ರಚನೆಯನ್ನು ಒಳಗೊಂಡಿರುತ್ತದೆ,” ಎಂದು ಪಾಂಡೆ ಹೇಳಿದ್ದಾರೆ. ಕೊವಿಡ್-19 ಸಾಂಕ್ರಾಮಿಕದ, ಇಂಧನ ಪರಿವರ್ತನೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂಥ ಅನಿಶ್ಚಿತತೆಯಿಂದಾಗಿ ಈ ವಹಿವಾಟಿನ ಮೇಲೆ ಪ್ರಭಾವ ಬೀರಿದೆ ಎಂದು ಪಾಂಡೆ ಹೇಳಿದ್ದಾರೆ. “ಈಗಾಗಲೇ ಇಂಗಾಲ ಪ್ರಮಾಣ ಕಡಿಮೆ ಮಾಡುವ ಗುರಿಗಳನ್ನು ಹೊಂದಲಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ತೈಲ ಸಂಸ್ಕರಣಾ ವ್ಯವಹಾರದಲ್ಲಿ ಹೂಡಿಕೆ ಮಾಡಲು ಕಷ್ಟಕರವಾಗಿದೆ.” ಪಿಎಸ್ಯು ರಿಫೈನರ್ನ ಖಾಸಗೀಕರಣಕ್ಕೆ ಹೊಸ ಪ್ರಸ್ತಾವನೆಯೊಂದಿಗೆ ಬರುವ ಮೊದಲು ಸರ್ಕಾರವು ಸಮಗ್ರ ಅಧ್ಯಯನವನ್ನು ನಡೆಸುತ್ತದೆ. ವ್ಯವಹಾರವನ್ನು ರಚಿಸುವ ಮೊದಲು ಹೂಡಿಕೆದಾರರು ಮತ್ತು ಸಲಹೆಗಾರರಿಂದ ಅಬಿಪ್ರಾಯಗಳನ್ನು ಪಡೆಯಲಾಗುತ್ತದೆ.
ಸರ್ಕಾರವು ನವೆಂಬರ್ 2019ರಲ್ಲಿ ಬಿಪಿಸಿಎಲ್ ಖಾಸಗೀಕರಣವನ್ನು ಅನುಮೋದಿಸಿತು. ಬಿಪಿಸಿಎಲ್ ಮಾರಾಟಕ್ಕೆ ಆಸಕ್ತಿಯನ್ನು ಆಹ್ವಾನಿಸಿದ ನಂತರ, ಸಾಂಕ್ರಾಮಿಕ ರೋಗದಿಂದಾಗಿ ಆ ಗಡುವನ್ನು ಹಲವು ಬಾರಿ ವಿಸ್ತರಿಸಲಾಯಿತು. ಪಿಎಸ್ಯು ಅನ್ನು ಸ್ವಾಧೀನಪಡಿಸಿಕೊಳ್ಳಲು ನವೆಂಬರ್ 2020ರಲ್ಲಿ ಮೂರು ಬಿಡ್ಗಳನ್ನು ಸಲ್ಲಿಸಲಾಗಿದೆ. ಆಸಕ್ತ ಬಿಡ್ದಾರರಿಗೆ ಏಪ್ರಿಲ್ 2021ರಲ್ಲಿ ರಿಫೈನರ್ನ ಹಣಕಾಸು ಡೇಟಾಗೆ ಪ್ರವೇಶ ನೀಡಲಾಯಿತು. ಜುಲೈ 2021ರಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಖಾಸಗೀಕರಣದಲ್ಲಿ ಎಫ್ಡಿಐ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಸಾರ್ವಜನಿಕ ವಲಯದ ರಿಫೈನರಿಗಳಲ್ಲಿ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಕೇಂದ್ರವು ಅವಕಾಶ ನೀಡಿತು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ