ನವದೆಹಲಿ: ದೇಶದಲ್ಲಿ ದೊಡ್ಡಮಟ್ಟದ ಚರ್ಚೆಗೆ ಗುರಿಯಾಗಿರುವ ಪೆಗಸಸ್ ವಿಷಯದಲ್ಲಿ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ದಿ ವೈರ್​​ ಸಂಸ್ಥೆ ವರದಿ ಮಾಡಿರುವಂತೆ 2019 ರ ಜುಲೈನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ಪೆಗಸಸ್ ಮೂಲಕ ಕಾಣದ ಕೈಗಳು ನಡೆಸಿದ ತಂತ್ರ ಕಾರಣ ಎನ್ನಲಾಗಿದೆ. ಆಗಿನ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿಯವರ ಪರ್ಸನಲ್ ಸೆಕ್ರೆಟರಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಮೊಬೈಲ್​ಗಳನ್ನೂ ಸಹ ಕಾಣದ ಕೈಗಳು ಇಣುಕಿ ನೋಡಿರುವ ಸಾಧ್ಯತೆಗಳಿವೆ ಎಂದು ವೈರ್ ಹೇಳಿದೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಹಣಾಹಣಿ ನಡೆಯುತ್ತಿದ್ದ ಸಮಯದಲ್ಲಿ ಈ ರೀತಿ ಪ್ರಮುಖ ನಾಯಕರ ಮೊಬೈಲ್​ಗಳ ಮೇಲೆ ಕಣ್ಗಾವಲಿಟ್ಟಿರಬಹುದು ಎಂದು ವೈರ್ ಸುದ್ದಿಸಂಸ್ಥೆ ಹೇಳಿದೆ. ಈ ಸಮಯದಲ್ಲಿ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು. ಕಾಕತಾಳೀಯ ಎಂಬಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಬಳಸುತ್ತಿದ್ದ ನಂಬರ್ ಬದಲಿಸಿ ಹೊಸ ನಂಬರ್ ಬಳಸಲು ಪ್ರಾರಂಭಿಸಿದರು ಎನ್ನಲಾಗಿದೆ.

2019 ರ ಮಧ್ಯಂತರದಲ್ಲೇ ಗಣ್ಯ ನಾಯಕರ ಫೋನ್​ ನಂಬರ್​ಗಳು ಟಾರ್ಗೆಟ್

ಡಿಜಿಟಲ್ ಫೊರೆನ್ಸಿಕ್ ಇಲ್ಲದ ಕಾರಣ ಈ ರಾಜ್ಯದ ರಾಜಕೀಯ ನಾಯಕರ ಫೋನ್ ನಂಬರ್​​ಗಳು ಪೆಗಸಸ್ ಕಣ್ಗಾವಲಿಗೆ ಒಳಗಾಗಿದ್ದವಾ ಎಂದು ನಿರ್ಣಾಯಕವಾಗಿ ಹೇಳಲು ಬರುವುದಿಲ್ಲ.. ಹೀಗಿದ್ದರೂ ಈ ಸಮಯದಲ್ಲಿ ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಈ ಸಂಭಾವ್ಯ ಅಭ್ಯರ್ಥಿಗಳು ಕಣ್ಗಾವಲಿಗೆ ಒಳಗಾಗಿರುವ ಸಾಧ್ಯತೆಗಳಿವೆ ಎಂದು ವೈರ್ ಹೇಳಿದೆ. ಈ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ ತಮ್ಮ ಸರ್ಕಾರವನ್ನು ಬೀಳಿಸಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ಸೋರಿಕೆಯಾದ ಡೇಟಾದಲ್ಲಿ ವೈರ್​ಗೆ ಹೆಚ್​.ಡಿ. ಕುಮಾರಸ್ವಾಮಿಯವರ ಪರ್ಸನಲ್ ಸೆಕ್ರೆಟರಿಯಾಗಿದ್ದ ಸತೀಶ್ ಅವರ ಎರಡು ನಂಬರ್​ಗಳನ್ನು 2019 ರ ಮಧ್ಯಂತರದಲ್ಲಿ ಟಾರ್ಗೆಟ್ ಮಾಡಲಾಗಿತ್ತು.. ಈ ಸಮಯದಲ್ಲಿ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಸರ್ಕಾರ ಬಂಡಾಯ ಶಾಸಕರ ಮನವೊಲಿಸುವ ಪ್ರಯತ್ನ ನಡೆಸುತ್ತಿತ್ತು ಎಂದಿದೆ.

ಇತ್ತ ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್​ಗಳನ್ನ ಮಾಡಿ ತನ್ನ ಮೇಲೆ ಗೂಢಚರ್ಯೆ ನಡೆಸಿದ ಬಿಜೆಪಿ ಕೀಳುಮಟ್ಟಕ್ಕೆ ಇಳಿದಿದೆ.. ಇದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ..

ಪೆಗಾಸಿಸ್ ಗೂಢಾಚರ್ಯೆಯಲ್ಲಿ‌ ಕೇಂದ್ರ ಸರ್ಕಾರ ಸಿಲುಕಿಕೊಂಡಿದೆ. ಇದು ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣವಾದರೂ ಇತ್ತೀಚೆಗೆ ಕೇಂದ್ರ ಆದ್ಯತೆ ಮೇಲೆ ಗೂಢಚರ್ಯೆ ನಡೆಸುತ್ತಿರುವುದು ಗುಟ್ಟೇನಲ್ಲ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರ್ಕಾರ ಕೆಡವಿ, ಸರ್ಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದು.

ನನ್ನ ಮೇಲೆ ಗೂಢಚರ್ಯೆ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೊನೆಗೆ ನನ್ನ ಮೇಲೆ ಫೋನ್ ಕದ್ದಾಲಿಕೆ ಆರೋಪ ಮಾಡಿತು. ಸಿಬಿಐ ತನಿಖೆ ನಡೆಸಿತು. ಅದಾಗಲೇ ಅಪಮಾರ್ಗದಲ್ಲಿ ಹೆಜ್ಜೆ ಹಾಕಿದ್ದ ಬಿಜೆಪಿ, ನನ್ನ ಮೇಲಿನ ತನಿಖೆ ಮೂಲಕ ಆತ್ಮವಂಚನೆಯಿಂದ ನಡೆದುಕೊಂಡಿದೆ. ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿದೆ. ಇದು ಅಪಾಯಕಾರಿ.

ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವ ಬಿಜೆಪಿ ಮುಂದೊಂದು ದಿನ ಅಗತ್ಯಬಿದ್ದಾಗ ಜನರ ವೈಯಕ್ತಿಕ ಬದುಕಿನಲ್ಲಿ ಇಣುಕದು ಎಂಬುದಕ್ಕೆ ಖಚಿತತೆ ಇದೆಯೇ? ಅಂತ ದಿನ ದೂರವಿಲ್ಲ. ಬಿಜೆಪಿ ದಮನಕಾರಿ ನಡೆ ಈಗ ಮಾನವ ಹಕ್ಕುಗಳತ್ತ ಕೇಂದ್ರೀಕೃತವಾಗಿದೆ. ಬಿಜೆಪಿಯ ಇಂಥ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು.-ಹೆಚ್​.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ, ಕರ್ನಾಟಕ

ಸಿದ್ದರಾಮಯ್ಯ ಪರ್ಸನಲ್ ಸೆಕ್ರೆಟರಿ ವೆಂಕಟೇಶ್ ನಂಬರ್ ಟಾರ್ಗೆಟ್

ಇನ್ನು ವೈರ್ ಸತೀಶ್ ಅವರನ್ನ ಸಂಪರ್ಕಿಸಿ ವಿಷಯ ತಿಳಿಸಿದಾಗ ಈ ವಿಚಾರವಾಗಿ ಕಮೆಂಟ್ ಮಾಡಲು ಹಿಂದೇಟು ಹಾಕಿದರು. ನಂತರ ಅವರು ಅದೇ ನಂಬರ್​ನ್ನು 2019 ರಲ್ಲಿ ಬಳಸುತ್ತಿದ್ದುದಾಗಿ ದೃಢಪಡಿಸಿದರು ಎಂದು ವೈರ್ ಹೇಳಿಕೊಂಡಿದೆ. ಇದೇ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 27 ವರ್ಷಗಳಿಂದ ಪರ್ಸನಲ್ ಸೆಕ್ರೆಟರಿಯಾಗಿದ್ದ ವೆಂಕಟೇಶ್ ಅವರ ನಂಬರ್ ಸಹ ಆ್ಯಡ್ ಆಗಿದೆ.. ಸಿದ್ದರಾಮಯ್ಯನವರ ಆಪ್ತ ಮೂಲಗಳ ಪ್ರಕಾರ.. ಸಿದ್ದರಾಮಯ್ಯನವರು ಹಲವು ವರ್ಷಗಳ ಕಾಲ ಪರ್ಸನಲ್ ಫೋನ್ ಬಳಸುತ್ತಿರಲಿಲ್ಲ. ಫೋನ್ ಸಂಭಾಷಣೆಗಾಗಿ ಆಪ್ತರ ಸಹಾಯ ಪಡೆಯುತ್ತಿದ್ದರು. ಹೀಗಾಗಿ ಸಿದ್ದರಾಮಯ್ಯ ಆಪ್ತರಾಗಿದ್ದ ವೆಂಕಟೇಶ್ ಅವರ ಫೋನ್ ಸಂಭಾವ್ಯ ಟಾರ್ಗೆಟ್ ಆಗಿತ್ತು ಎಂದು ವೈರ್ ಹೇಳಿದೆ.

ವೈರ್ ಜೊತೆಗೆ ಮಾತನಾಡಿದ ವೆಂಕಟೇಶ್ ಸೋರಿಕೆಯಾದ ದಾಖಲೆಯಲ್ಲಿದ್ದ ನಂಬರ್​ನ್ನು ಬಳಸುತ್ತಿದ್ದಾಗಿ ದೃಢಪಡಿಸಿದ್ದು ಕಣ್ಗಾವಲಿಗೊಳಗಾಗಿರುವ ಸಾಧ್ಯತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಫೋನ್ ಟಾರ್ಗೆಟ್​ಗೆ ಒಳಗಾಗಿತ್ತಾ ಇಲ್ಲವಾ ಗೊತ್ತಿಲ್ಲ.. ನಾನು ಯಾವುದೇ ಅಕ್ರಮಗಳನ್ನು ಮಾಡಿಲ್ಲ. ನೀವು ಹೇಳುತ್ತಿರುವುದು ನಿಜವಾದಲ್ಲಿ ಇದು ತಪ್ಪು.. ಇಂಥ ನಡೆಯನ್ನ ನಾನು ಖಂಡಿಸುತ್ತೇನೆ ಎಂದು ವೆಂಕಟೇಶ್ ಹೇಳಿಕೆ ನೀಡಿರುವುದಾಗಿ ವೈರ್ ಉಲ್ಲೇಖಿಸಿದೆ. ಈ ವೇಳೆ ವೈರ್ ವೆಂಕಟೇಶ್ ಅವರ ಫೋನ್​ನ್ನು ಫಾರೆನ್ಸಿಕ್ ಪರಿಶೀಲನೆಗೆ ಕೇಳಿದಾಗ ನೀಡಲು ನಿರಾಕರಿಸಿದ್ದಾರಂತೆ.

ಹೆಚ್​.ಡಿ. ದೇವೇಗೌಡರ ಭದ್ರತಾ ಸಿಬ್ಬಂದಿಯ ನಂಬರ್ ಕೂಡ ಟಾರ್ಗೆಟ್

ಮತ್ತೊಂದು ಆಘಾತಕಾರಿ ವಿಚಾರ ಪ್ರಸ್ತಾಪಿಸಿರುವ ವೈರ್.. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಭದ್ರತಾ ಸಿಬ್ಬಂದಿ ಮಂಜುನಾಥ್ ಮುದ್ದೇಗೌಡ ಅವರ ಫೋನ್ ನಂಬರ್​ ಸಹ ಲೀಕ್ ಆದ ದಾಖಲೆಯಲ್ಲಿ ಉಲ್ಲೇಖವಾಗಿದೆ ಎಂದಿದೆ. ಈ ವಿಚಾರವಾಗಿ ವೈರ್ ಅವರನ್ನ ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.. ಅವರ ನಂಬರ್ ಸಹ 2019 ರ ಮಧ್ಯಂತರದಲ್ಲೇ ಟಾರ್ಗೆಟ್​ಗೆ ಒಳಗಾಗಿದೆ ಎಂದು ಹೇಳಿದೆ.

ಕಣ್ಗಾವಲಿನ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು.? 

ಇನ್ನು ಜಿ. ಪರಮೇಶ್ವರ್ ಅವರ ಫೋನ್ ಸಹ ಇದೇ ಸಮಯದಲ್ಲಿ ಟಾರ್ಗೆಟ್​ಗೆ ಒಳಗಾಗಿದ್ದು ವೈರ್ ಅವರನ್ನ ಸಂಪರ್ಕಿಸಿದಾಗ 2019 ರಲ್ಲಿ ನಾನು ಆ ನಂಬರ್ ಬಳಸುತ್ತಿದ್ದೆ.. ಕೆಲವು ತಿಂಗಳುಗಳಿಂದ ಅ ನಂಬರ್ ಬಳಕೆಯಲ್ಲಿಲ್ಲ ಎಂದಿದ್ದಾರಂತೆ. ನಿಮ್ಮ ಫೋನ್ ನಂಬರ್ ಯಾಕೆ ಟ್ಯಾಪ್ ಆಗಿರಬಹುದು ಎಂದು ಪ್ರಶ್ನಿಸಿದಾಗ.. ನನಗೆ ಸ್ಪೈವೇರ್ ​ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ.. ನೀವು ಹೇಳಿದಂತೆ ಆಗಿದ್ದರೆ ಯಾಕೆ ಹೀಗಾಗಿದೆ ಎಂದು ನನಗೆ ತಿಳಿದಿಲ್ಲ. ಆ ಸಮಯದಲ್ಲಿ ನಾನು ಯಾವುದೇ ರಾಜಕೀಯ ನಿರ್ವಹಣೆಯನ್ನು ಮಾಡುತ್ತಿರಲಿಲ್ಲ. ಆಗ ನಾನು ಕೆಪಿಸಿಸಿ ಅಧ್ಯಕ್ಷನೂ ಆಗಿರಲಿಲ್ಲ ಎಂದಿದ್ದಾರಂತೆ.

ವಿಶೇಷ ವರದಿ: ರಾಜಶೇಖರ್ ಬಂಡೆ, ಡಿಜಿಟಲ್ ಡೆಸ್ಕ್​​

The post #Breaking ಕೈ-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಲು ಪೆಗಸಸ್ ಕಣ್ಗಾವಲೇ ಕಾರಣ..? appeared first on News First Kannada.

Source: newsfirstlive.com

Source link