ಬೆಂಗಳೂರು: ರಾಜ್ಯದಲ್ಲಿ ಬುಗಿಲೆದ್ದಿರುವ ಹಿಜಾಬ್ ವಿವಾದ ಇನ್ನೂ ಹೆಚ್ಚಾಗುತ್ತಲೇ ಇದೆ. ಇದರ ಮುನ್ನೆಚ್ಚರಿಕಾ ದೃಷ್ಟಿಯಿಂದ ನಿನ್ನೆ ಪ್ರಾರಂಭವಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಮನಗರ ಜಿಲ್ಲಾಡಳಿತ ಮತ್ತೆ ರಜೆ ಘೋಷಣೆ ಮಾಡಿದೆ.
ಹಿಜಾಬ್ ವಿವಾದಕ್ಕೆ ಕೋರ್ಟ್ ಆದೇಶ ಬರುವುದಿನ್ನು ಬಾಕಿ ಇದೆ. ಹೀಗಿರುವಾಗ ಮತ್ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕಾಲೇಜು ಪ್ರಾರಂಭವಾದ ಮೊದಲ ದಿನವೇ ಅಂದರೆ ನಿನ್ನೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಈ ವೇಳೆ ಹಿಜಾಬ್ ತೆಗೆಯುವಂತೆ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿದೆ. ಆದರೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೇ ಹಿಜಾಬ್ ಬೇಕೆಂದು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ವಿದ್ಯಾರ್ಥಿನಿಯರ ಪ್ರತಿಭಟನೆಗೆ ಕೆಲವು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಎಲ್ಲಾ ಘಟನೆಗಳಿಂದ ಕಾಲೇಜಿಗೆ ಜಿಲ್ಲಾಡಳಿತವು ತಾತ್ಕಾಲಿಕ ರಜೆ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಮುಂದಿನ ಆದೇಶದ ವರೆಗೂ ಆನ್ ಲೈನ್ ತರಗತಿಗಳನ್ನು ನಡೆಸುವಂತೆ ತಿಳಿಸಿದ್ದಾರೆ.