BS Yediyurappa: ಹೈಕಮಾಂಡ್ ಗೆ ಏಕೆ ಬಿಎಸ್ ಯಡಿಯೂರಪ್ಪ ಮೇಲೆ ದಿಢೀರ್ ಲವ್? ಅಸಲಿ ಕಹಾನಿಯ ಸುತ್ತ ಒಂದು ರೌಂಡ್! | BJP high command soothes BS Yediyurappa in run up to Karnataka Assembly Elections 2023


BJP High Command: ಅಮಿತ್ ಶಾ ಮೂಲಕ ಕಳೆದ ಬಾರಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಡಿಯೂರಪ್ಪರನ್ನು ಪಕ್ಕಕ್ಕೆ ಕೂರಿಸಿಕೊಂಡು ಪಲ್ಸ್ ಟೆಸ್ಟ್ ಮಾಡಿದ್ದರು. ಆಗ ಯಡಿಯೂರಪ್ಪ ಅವರನ್ನು ನೋಡಿ ಅಮಿತ್ ಶಾ ಕೊಟ್ಟ ರಿಪೋರ್ಟ್ ಮಾಜಿ ಸಿಎಂಗೆ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯ ಸದಸ್ಯತ್ವ ಕೊಡಿಸಿತ್ತು!

BS Yediyurappa: ಹೈಕಮಾಂಡ್ ಗೆ ಏಕೆ ಬಿಎಸ್ ಯಡಿಯೂರಪ್ಪ ಮೇಲೆ ದಿಢೀರ್ ಲವ್? ಅಸಲಿ ಕಹಾನಿಯ ಸುತ್ತ ಒಂದು ರೌಂಡ್!

ಹೈಕಮಾಂಡ್ ಗೆ ಏಕೆ ಬಿಎಸ್ ಯಡಿಯೂರಪ್ಪ ಮೇಲೆ ದಿಢೀರ್ ಲವ್? ಅಸಲಿ ಕಹಾನಿಯ ಸುತ್ತ ಒಂದು ರೌಂಡ್!

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಒಂದು ವರ್ಷದ ಬಳಿಕ ಬಿಜೆಪಿ ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ತೋರುತ್ತಿರುವ ಪ್ರೀತಿ ಸ್ವತಃ ಯಡಿಯೂರಪ್ಪನವರಿಗೇ ಅಚ್ಚರಿ ಮೂಡಿಸಿದೆ. ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿಗೆ ಬಂದಿದ್ದ ವೇಳೆ ಖುದ್ದು ಅಮಿತ್ ಶಾ ಹೋಟೆಲ್ ಗೆ ಕರೆಸಿಕೊಂಡು ಜೊತೆಯಲ್ಲಿ ಬ್ರೇಕ್ ಫಾಸ್ಟ್ ಮಾಡಿದಾಗ ಹೈಕಮಾಂಡ್ (BJP High Command) ಮತ್ತೆ ಮಣೆ ಹಾಕ್ತಿದ್ಯಾ ಎಂಬ ಸಣ್ಣ ಡೌಟ್ ಯಡಿಯೂರಪ್ಪನವರಿಗೇ ಶುರುವಾಗಿತ್ತು (Karnataka Assembly Elections 2023).

ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಸೇರ್ಪಡೆಗೊಳಿಸಿದ ರಾತ್ರಿಯೇ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಸಿಎಂ ಬೊಮ್ಮಾಯಿ‌ ಮತ್ತು ಸಚಿವ ಅಶೋಕ್ ಜೊತೆ ಊಟಕ್ಕೆ ಕುಳಿತಿದ್ದ ಬಿಎಸ್ ವೈ, ಹೇಗೆ ಅವಕಾಶ ಕೊಟ್ಟರೋ ನನಗೇ ಆಶ್ಚರ್ಯ ಆಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿನ ಯಡಿಯೂರಪ್ಪನವರ ಹುರುಪು ನೋಡಿ ಬೂಕನಕೆರೆಯಲ್ಲಿ ದೊಡ್ಡ ಅಭಿನಂದನಾ ಸಮಾವೇಶ ಮಾಡುವ ಬಗ್ಗೆಯೂ ಬೊಮ್ಮಾಯಿ‌ ಮತ್ತು ಅಶೋಕ್ ಚರ್ಚೆಯನ್ನೂ ನಡೆಸಿದ್ದರು. ಆದರೆ ಅದ್ಯಾಕೋ ಅಭಿನಂದನಾ ಸಮಾವೇಶ ಅದು ಚರ್ಚೆಗಷ್ಟೇ ಸೀಮೀತವಾಗಿಯೇ ಉಳಿದು ಹೋಯ್ತು.

ಈ ಮಧ್ಯೆ ಸಿಎಂ ಬಸವರಾಜ ಬೊಮ್ಮಾಯಿ‌ ವೋಟ್ ಪುಲ್ಲರ್ ಆಗುತ್ತಿಲ್ಲ ಎಂಬ ಆಂತರಿಕ ಸತ್ಯ ಬಿಜೆಪಿ ವರಿಷ್ಠರಿಗೂ ಗೊತ್ತಿರುವ ವಿಚಾರವೇ. ನಿನ್ನೆ ಮಂಗಳೂರಿನಲ್ಲಿ ಅದು ಖುದ್ದು ಪ್ರಧಾನಿ ನರೇಂದ್ರ ಮೋದಿಯ ಗಮನಕ್ಕೇ ಬಂದಿದೆ. ಸಮಾವೇಶಕ್ಕೆ ಮೋದಿ ಬರುವ ಮೊದಲೇ ವೇದಿಕೆಗೆ ಬಂದ‌ ಬಸವರಾಜ ಬೊಮ್ಮಾಯಿ ಜನರತ್ತ ಕೈ ಬೀಸಿದರೂ ಒಬ್ಬನೇ ಒಬ್ಬ ತಿರುಗಿ ಪ್ರತಿಕ್ರಿಯಿಸಲಿಲ್ಲ.

ಹಾಗಾಗಿ ಕೈಬೀಸಿದ‌ ಬೊಮ್ಮಾಯಿ ಹೋಗಿ ಸುಮ್ಮನೆ ಕುಳಿತುಕೊಂಡರು. ಯಾವಾಗ ಯಡಿಯೂರಪ್ಪ ವೇದಿಕೆಗೆ ಬಂದರೋ ಆಗ ಮೋದಿಗೆ ಬಿದ್ದಷ್ಟೇ ಕೂಗು ಸಿಳ್ಳೆಗಳು ಮೊಳಗಿತು. ಸ್ವಾಗತ ಕೋರುವಾಗಲೂ ಬೊಮ್ಮಾಯಿ‌ ಹೆಸರೇಳುವಾಗ ಮೌನವಾಗಿದ್ದ ಜನ, ಯಡಿಯೂರಪ್ಪ ಹೆಸರು ಹೇಳುವಾಗ ಕಿವಿಗಡಚಿಕ್ಕುವಂತೆ ಕೂಗಿದ್ದರು. ಸ್ವತಃ ಕ್ಷೇತ್ರದ ಸಂಸದರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೂ ಬೀಳದ ಚಪ್ಪಾಳೆ ಯಡಿಯೂರಪ್ಪ ಅವರಿಗೆ ಬಿದ್ದಿತ್ತು. ಇದು ಯಡಿಯೂರಪ್ಪ ಜನಪ್ರಿಯತೆ ಎಷ್ಟು ಎಂಬುದನ್ನು ಮಂಗಳೂರಿನಲ್ಲಿ ಖುದ್ದು ಮೋದಿ ನೋಡಿಕೊಂಡು ಹೋಗಿದ್ದಾರೆ.

ಇನ್ನು ನಿನ್ನೆ ಮಂಗಳೂರಿನಲ್ಲಿ ಯಡಿಯೂರಪ್ಪ ವೇದಿಕೆಯಲ್ಲಿ ಸ್ಥಾನ ಪಡೆದಿದ್ದು ಹೇಗೆ ಅಂತಾ ಬಿಜೆಪಿಯವರೇ ತಲೆ ಕೆಡಿಸಿಕೊಂಡಿದ್ದರು. ಏರ್ ಪೋರ್ಟ್ ನಲ್ಲಿ ಮೋದಿಗೆ ಸ್ವಾಗತ ಕೋರಿದ್ದ ಯಡಿಯೂರಪ್ಪ ಜೊತೆಯಲ್ಲೇ ಹೆಲಿಕಾಫ್ಟರ್ ನಲ್ಲೂ ಹೋಗಿ ಕಾರ್ಯಕ್ರಮಕ್ಕೂ ಬಂದಿದ್ದರು. ಮೋದಿ ಬರುವ ಮೊದಲೇ ವೇದಿಕೆಗೆ ಬಂದಿದ್ದ ಯಡಿಯೂರಪ್ಪನವರನ್ನು ಅನಿವಾರ್ಯವಾಗಿ ವೇದಿಕೆಯಲ್ಲಿ ಕೂರಿಸಬೇಕಾದ ಕಷ್ಟ ಸಂಘಟಕರಿಗೆ ಬಂದಿತ್ತು.‌ ವೇದಿಕೆಗೆ ಬಂದಿದ್ದ ಯಡಿಯೂರಪ್ಪನವರನ್ನು ವಾಪಸ್ ಕಳುಹಿಸಲಾಗದೇ ಮೋದಿ ಆಸನದ ಬಲಭಾಗದ ಎರಡನೇ ಚೇರ್ ನಲ್ಲಿ ಕೂರಿಸಬೇಕಾಯ್ತು. ವೇದಿಕೆಯಲ್ಲಿ ಇನ್ನೊಬ್ಬ ಕೇಂದ್ರ ಸಚಿವರು ಇರುತ್ತಿದ್ದರೂ ಸ್ಥಳೀಯ ಸಂಸದರೂ ಆಗಿರುವ ನಳೀನ್ ಕುಮಾರ್ ಕಟೀಲ್ ಎರಡನೇ ಸಾಲಿಗೆ ಹೋಗಬೇಕಾಗುತ್ತಿತ್ತೇನೋ.

ಹೀಗೆ ಯಡಿಯೂರಪ್ಪ ಅವರನ್ನು ಯಾಕೆ ಎಲಿವೇಟ್ ಮಾಡಬೇಕು ಎಂಬುದು ಸಣ್ಣ ಸಣ್ಣ ಘಟನೆಗಳ ಮೂಲಕವೇ ವರಿಷ್ಠರಿಗೆ ಒಂದು ವರ್ಷದಲ್ಲಿ ದೊಡ್ಡದಾಗಿ ಅರ್ಥವಾಗಿತ್ತು. ಇದಕ್ಕಾಗಿಯೇ ಇನ್ನೇನು ನೇಪಥ್ಯಕ್ಕೆ ಸರಿಸಲ್ಪಟ್ಟಿದ್ದವರನ್ನು ಮತ್ತೆ ಹೆಕ್ಕಿ ತಂದು ಟಾಪ್ ಫೈವ್ ನಲ್ಲಿ ನಿಲ್ಲಿಸಿದ್ದು ಯಡಿಯೂರಪ್ಪ ಇನ್ನೂ ಸ್ಟ್ರಾಂಗ್ ಹಾರ್ಸ್ ಎಂಬ ಸತ್ಯ ಅರ್ಥವಾಗಿದ್ದರಿಂದಲೇ, ರಾಜೀನಾಮೆ ಕೊಡಿಸಿ ಮನೆಗೆ ಕಳುಹಿಸಿದ್ದವರನ್ನು ಮತ್ತೆ ಒಲಿಸಿಕೊಳ್ಳುವ ಕೆಲಸ ನಡೆದಿದೆ. ಮೋದಿ,‌ ಅಮಿತ್ ಶಾ ಮೂಲಕ ಕಳೆದ ಬಾರಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಡಿಯೂರಪ್ಪರನ್ನು ಪಕ್ಕಕ್ಕೆ ಕೂರಿಸಿಕೊಂಡು ಪಲ್ಸ್ ಟೆಸ್ಟ್ ಮಾಡಿದ್ದರು. ಆಗ ಯಡಿಯೂರಪ್ಪ ಅವರನ್ನು ನೋಡಿ ಅಮಿತ್ ಶಾ ಕೊಟ್ಟ ರಿಪೋರ್ಟ್ ಮಾಜಿ ಸಿಎಂಗೆ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯ ಸದಸ್ಯತ್ವ ಕೊಡಿಸಿತ್ತು! – ಕಿರಣ್ ಹನಿಯಡ್ಕ

ತಾಜಾ ಸುದ್ದಿ

TV9 Kannada


Leave a Reply

Your email address will not be published.