Cabinet Reshuffle: ಕಮಲ ಕೋಟೆಯಲ್ಲಿ ಬದಲಾವಣೆ ಗಾಳಿ, ಮಾರ್ಚ್ ನಲ್ಲಾಗುತ್ತಾ ಸಂಪುಟ ಸರ್ಜರಿ | Karnataka Cabinet Reshuffle may happen in march


ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ಸೈಲೆಂಟಾಗಿಯೇ ರಾಜಕೀಯ ಗರಿಗೆದರುತ್ತಿದೆ. ಬದಲಾವಣೆಯ ಮುನ್ಸೂಚನೆಯ ಗಾಳಿ ನಿಧಾನವಾಗಿ ಬೀಸಲಾರಂಭಿಸಿದೆ. ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಕೆಲ ಮಹತ್ವದ ಬದಲಾವಣೆ ಸಾಧ್ಯತೆ ದಿನಕಳೆದಂತೆ ದಟ್ಟವಾಗಲಾರಂಭಿಸಿದೆ. ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿಯಾಗೋದು ಬಹುತೇಕ ಫಿಕ್ಸ್ ಆಗಿದೆ. ಮಂತ್ರಿ ಪಟ್ಟಕ್ಕೇರಲು ಈಗಾಗ್ಲೇ ಶಾಸಕರ ಮಧ್ಯೆ ರೇಸ್ ಕೂಡ ಶುರುವಾಗಿದೆ.

ಮಾರ್ಚ್ನಲ್ಲಿ ಮಹಾ ಬದಲಾವಣೆಯಾಗುತ್ತಾ?
ಯೆಸ್..ಮಾರ್ಚ್ ತಿಂಗಳಿನಲ್ಲಿ ರಾಜ್ಯ ಸರ್ಕಾರದಲ್ಲಿ ಭಾರಿ ಬದಲಾವಣೆಯಾಗೋ ಸಾಧ್ಯತೆ ಇದೆ. ಯಾಕಂದ್ರೆ ಬಿಜೆಪಿಯಲ್ಲಿ ತೆರೆಮರೆಯ ಚಟುವಟಿಕೆಗಳು ಜೋರಾಗಿದೆ. ಹಳೇ ಹುಲಿಗಳೆಲ್ಲಾ ಮೀಟಿಂಗ್ ಸೇರ್ತಿದ್ದು ಬೊಮ್ಮಾಯಿ ಸಂಪುಟಕ್ಕೆ ಹೊಸ ರೂಪ ಸಿಗೋ ಸಾಧ್ಯತೆ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ರಾತ್ರಿ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಸಭೆ ಸೇರಿ ಚರ್ಚಿಸಿದ್ದಾರೆ.

ಕೂಡಲೇ ಸಂಪುಟ ಪುನಾರಚನೆಗೆ ಶಾಸಕರ ಆಗ್ರಹ
ಮಾರ್ಚ್ನಲ್ಲಿ ಸಂಪುಟ ಪುನಾರಚನೆಯ ಚರ್ಚೆ ಜೋರಾಗುತ್ತಲೇ ಇತ್ತ ಸಚಿವಾಕಾಂಕ್ಷಿಗಳು ಕೂಡಲೇ ಸಂಪುಟ ಪುನಾರಚನೆ ಮಾಡುವಂತೆ ಆಗ್ರಹಿಸ್ತಿದ್ದಾರೆ. ಅದಕ್ಕೆ ಕಾರಣಗಳೂ ಇದೆ.

ಸಚಿವಾಕಾಂಕ್ಷಿ ಶಾಸಕರು ಸಂಪುಟ ಪುನಾರಚನೆಗೆ ಮಾರ್ಚ್ವರೆಗೆ ಕಾಯೋದು ಬೇಡ ಅಂತಿದ್ದಾರೆ. ಈ ವರ್ಷ ಚುನಾವಣಾ ವರ್ಷವಾಗಿರುವ ಕಾರಣ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನಗಳನ್ನು ಇಟ್ಟುಕೊಂಡು, ಕ್ಷೇತ್ರ ಉಳಿಸಿ ಕೊಳ್ಳುವುದು ಕೂಡಾ ಕಷ್ಟವಾಗಬಹುದು ಅನ್ನೋ ಆತಂಕ ಶಾಸಕರನ್ನು ಕಾಡುತ್ತಿದೆ. ಹೀಗಾಗಿ ಮಾರ್ಚ್ವರೆಗೆ ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಕಾಯದೆ, ತಕ್ಷಣ ಸಂಪುಟ ಪುನಾರಚನೆ ಮಾಡಬೇಕೆಂದು ಶಾಸಕರು ಆಗ್ರಹಿಸ್ತಿದ್ದಾರೆ.

ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ
ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿ ಅಸಮಾಧಾನವಿದೆ. ಕೆಲ ಸಚಿವರಿಂದ ಪಕ್ಷದ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಯಾಗ್ತಿಲ್ಲ. ಕೆಲ ಸಚಿವರು ಶಾಸಕರ ಕೈಗೆ ಕೂಡ ಸಿಗುತ್ತಿಲ್ಲ ಅಂತಾ ಕೆಲ ಹಾಲಿ ಸಚಿವರ ಬಗ್ಗೆ ಶಾಸಕರು ಆರೋಪ ಮಾಡ್ತಿದ್ದಾರೆ. ಇನ್ನು ಕಾಂಗ್ರೆಸ್ ಪಾದಯಾತ್ರೆ ಮೂಲಕ ವೇಗ ಹೆಚ್ಚಿಸಿಕೊಂಡಿದೆ. ಪಕ್ಷದ ಹಾಗೂ ಸರ್ಕಾರದ ವರ್ಚಸ್ಸು ಬದಲಾಯಿಸಲು, ಸಂಪುಟದಲ್ಲಿ ಬದಲಾವಣೆ ಮಾಡಲೇಬೇಕು ಅಂತಾ ಶಾಸಕರು ಪಟ್ಟು ಹಿಡಿದಿದ್ದಾರಂತೆ.

ಹೈಕಮಾಂಡ್ ಭೇಟಿಯಾಗ್ತಾರಾ ಶಾಸಕರು?
ಇನ್ನು ಅಗತ್ಯ ಬಿದ್ರೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಚರ್ಚೆ ನಡೆಸಲು ಕೂಡ ಕೆಲ ಬಿಜೆಪಿ ಶಾಸಕರು ಸಿದ್ಧರಾಗಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ, ಹಾಲಿ ಸಚಿವರ ಕೆಲ ಮೈನಸ್ಗಳನ್ನ ಹೈಕಮಾಂಡ್ ಮುಂದಿಟ್ಟು ಒತ್ತಡ ಹೇರಲು ತಂತ್ರ ಕೂಡ ಹೂಡಿದ್ದಾರಂತೆ. ಈ ಬೆಳವಣಿಗೆಗಳ ಭಾಗವಾಗಿಯೇ ಇಂದು ಕೆಲ ಶಾಸಕರು ಸಿಎಂ ಭೇಟಿ ಮಾಡಿ ಒತ್ತಡ ಹೇರಿದ್ದಾರಂತೆ.

ಇವೆಲ್ಲದ್ರ ಮಧ್ಯೆ ಇಂದು ಇಂಟ್ರೆಸ್ಟಿಂಗ್ ಬೆಳವಣಿಗೆಯೊಂದು ನಡೆದಿದೆ. ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಮತ್ತು ಬಸನಗೌಡ ಯತ್ನಾಳ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಇಬ್ಬರೂ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವೇಗ ತಡೆಯೋ ಬಗ್ಗೆ ಚರ್ಚಿಸಿದ್ದಾರಂತೆ. ಬಳಿಕ ಮಾತನಾಡಿದ ಯತ್ನಾಳ್, ರೇಣುಕಾಚಾರ್ಯ ಸಚಿವರಾಗಬೇಕೆಂಬುದು ನನ್ನ ಅಭಿಪ್ರಾಯ ಅಂದ್ರು. ಇತ್ತ ರೇಣುಕಾಚಾರ್ಯ, ಯತ್ನಾಳ್ ಮಂತ್ರಿಯಾಗಲೆಂದು ಆಶಿಸುತ್ತೇನೆ ಅಂತಾ ಪರಸ್ಪರ ಟವೆಲ್ ಹಾಕ್ಕೊಂಡ್ರು.

ಒಟ್ನಲ್ಲಿ, ಆಡಳಿತ ಪಕ್ಷ ಬಿಜೆಪಿಯಲ್ಲಿ ಬದಲಾವಣೆಯ ಸರ್ಕಸ್ಗೆ ಚಾಲನೆ ಸಿಕ್ಕಿದೆ. ಹಳೇ ಹುಲಿಗಳು ಸೇರಿದಂತೆ ಶಾಸಕರ ಮಧ್ಯೆ ಪೈಪೋಟಿ ಶುರುವಾಗಿದ್ದು, ಮುಂದೆ ಏನೆಲ್ಲಾ ಹೈಡ್ರಾಮಾ, ಲಾಬಿ ರಾಜಕೀಯ ನಡೆಯುತ್ತೋ ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published. Required fields are marked *