ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಖಾಸಗಿ ವಿಡಿಯೋ ಸಿ.ಡಿ ಬಹಿರಂಗ ಪ್ರಕರಣ ಸಂಬಂಧ ಯುವತಿಯ ತಂದೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು ಹೈಕೋರ್ಟ್​​ ವಜಾಗೊಳಿಸಿದೆ.

ಸಿಆರ್​ಪಿಸಿ ಸೆಕ್ಷನ್ 164ರಡಿ ಯುವತಿ ಸ್ವಇಚ್ಛಾ  ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನ ರದ್ದು ಮಾಡಬೇಕೆಂದು ಕೋರಿ ಯುವತಿಯ ತಂದೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ನಿಯಮಬಾಹಿರವಾಗಿ 164 ಹೇಳಿಕೆ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಯುವತಿಯ ಪರ ವಕೀಲರಿಂದ ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಯುವತಿ ಈಗಾಗಲೇ  ಹೈಕೋರ್ಟ್​ಗೆ ಹೇಳಿಕೆ ನೀಡಿದ್ದಾಳೆ. ಸಿಆರ್​ಪಿಸಿ ಸೆಕ್ಷನ್ 164 ಅಡಿ ದಾಖಲಾದ ಹೇಳಿಕೆಯನ್ನು ಯುವತಿಯ ತಂದೆ ಪ್ರಶ್ನಿಸುವಂತಿಲ್ಲ ಎಂದು ಎಸ್ಐಟಿ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.

ವಾದ ಪ್ರತಿವಾದ ಹೇಗಿತ್ತು?

ಯುವತಿ ಪೋಷಕರ ಪರ ವಕೀಲರ ವಾದ: ಸಂತ್ರಸ್ತೆ ಸಿಆರ್​ಪಿಸಿ ಸೆಕ್ಷನ್ 164ರಡಿ ಜಡ್ಜ್ ಮುಂದೆ ನೀಡಿದ್ದ ಹೇಳಿಕೆ ಸರಿಯಲ್ಲ. ಯುವತಿಯ ಹೇಳಿಕೆ ಅವಳ ಮನಸ್ಸಿಗೆ ವಿರುದ್ಧವಾಗಿದೆ. ಆಕೆಯಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ಪಡೆಯಲಾಗಿದೆ. ಸಂತ್ರಸ್ತೆಯ ಮನಸ್ಥಿತಿ ಸರಿ ಇರಲಿಲ್ಲ ಹಾಗೂ ಮಾನಸಿಕ ಒತ್ತಡದಲ್ಲಿ ಇದ್ದಳು‌ ಎಂದು ಪೋಷಕರು ಹೇಳಿದ್ದಾರೆ ಅಂತ ವಕೀಲರು ವಾದ ಮಾಡಿದರು.

ಯುವತಿಯ ಪರ ವಾದ: ಸಂತ್ರಸ್ತೆ ಜಡ್ಜ್ ಮುಂದೆ ನೀಡಿರುವ ಹೇಳಿಕೆ ನ್ಯಾಯಬದ್ಧವಾಗಿದೆ. ಸುಪ್ರೀಂಕೋರ್ಟಿನ ನಿರ್ಭಯ ಅತ್ಯಾಚಾರ ಪ್ರಕರಣದ ತೀರ್ಪಿನ ಅನುಸಾರವಾಗಿದೆ. ಹೊಸದಾಗಿ 2013ರಲ್ಲಿ ಕಲಂ 164 Cr.P.C  ತಿದ್ದುಪಡಿಯಾಗಿದೆ. ಅದರಲ್ಲಿ ಹೊಸ ಕಲಂ 164(5) & (5A) Cr.P.C ಸೇರಿಸಲಾಗಿದೆ. ಆ ಸೆಕ್ಷನ್ ಅಡಿಯಲ್ಲಿ ಸಂತ್ರಸ್ತೆ ಜಡ್ಜ್ ಎದುರು ಹೇಳಿಕೆ ಕೊಟ್ಟಿದ್ದಾಳೆ. ಸ್ವ-ಇಚ್ಛೆಯಿಂದ ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ನೀಡಿದ್ದಾಳೆ ಅಂತ ಯುವತಿ ಪರ ವಕೀಲ ಸಂಕೇತ ಏಣಗಿ ವಾದ ಮಂಡಿಸಿದರು.

ಎಸ್ಐಟಿ ಪರ ವಕೀಲರ ವಾದ: SIT ಪರ ನ್ಯಾಯವಾದಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡಿ, ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಯುವತಿ ಹೇಳಿಕೆ ನೀಡಿದ್ದಾಳೆ. ಸಿಆರ್​ಪಿಸಿ 164 ಹೇಳಿಕೆಯನ್ನು ಯುವತಿಯ ತಂದೆ ಪ್ರಶ್ನಿಸುವಂತಿಲ್ಲ ಎಂದು ಹೇಳಿದರು. ವಾದ ಪ್ರತಿವಾದ ಆಲಿಸಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ, ಯುವತಿ ತಂದೆಯ ಅರ್ಜಿಯನ್ನ ವಜಾಗೊಳಿಸಿತು.

 

The post CD ಕೇಸ್​: ಯುವತಿ ಹೇಳಿಕೆ ರದ್ದು ಕೋರಿ ತಂದೆ ಸಲ್ಲಿಸಿದ್ದ ಅರ್ಜಿ ವಜಾ appeared first on News First Kannada.

Source: newsfirstlive.com

Source link