ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನರೇಶ್ ಗೌಡ ಹಾಗೂ ಶ್ರವಣ್​ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ. 91ನೇ ಸಿಸಿಹೆಚ್ ಕೋರ್ಟ್​ನ ನ್ಯಾಯಾಧೀಶ ಲಕ್ಷ್ಮಿನಾರಾಯಣ್‌ ಭಟ್‌ ನೇತೃತ್ವದ ಪೀಠ, ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು ಬಿಟ್ಟು ಹೋಗುವಂತಿಲ್ಲ
ಜೂನ್ 2 ರಂದು ಎರಡು ಕಡೆಯ ವಾದ-ಪ್ರತಿವಾದವನ್ನ ದಾಖಲಿಸಿಕೊಂಡಿದ್ದ ನ್ಯಾಯಾಧೀಶ ಲಕ್ಷ್ಮಿನಾರಾಯಣ್‌ ಭಟ್‌ ನೇತೃತ್ವದ ಪೀಠ ಇಂದು ತೀರ್ಪು ನೀಡಿದೆ. ಆರೋಪಿಗಳಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿರುವ ಕೋರ್ಟ್.. ಬೆಂಗಳೂರು ಬಿಟ್ಟು ಹೋಗುವಂತಿಲ್ಲ, ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದೆ. ಅಲ್ಲದೇ ಇಬ್ಬರಿಗೂ ಶ್ಯೂರಿಟಿ ನೀಡಲು ಸೂಚನೆ ನೀಡಿದೆ.

ಮೊನ್ನೆ ನಡೆದಿದ್ದ ವಾದ
ನರೇಶ್ ಗೌಡ & ಶ್ರವಣ್ ಪರ ವಕೀಲ ಪೊನ್ನಣ್ಣ ವಾದ: ನಮ್ಮ ಕಕ್ಷಿದಾರರ ವಿರುದ್ಧದ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ರೇಪ್ ಆರೋಪಿ ರಮೇಶ್‌ ಜಾರಕಿಹೊಳಿಯನ್ನ ರಕ್ಷಿಸಲು ಕಕ್ಷಿದಾರರನ್ನು ಗುರಿಯಾಗಿಸಿದ್ದಾರೆ. ವಿನಾಕಾರಣ ಎಸ್ಐಟಿ ಕಿರುಕುಳ ನೀಡುತ್ತಿದೆ. ಎಸ್‌ಐಟಿ ತನಿಖೆ ಮಾಡ್ತಿರುವ ರೇಪ್ ಕೇಸ್ ಆರೋಪಿ ಇಲ್ಲಿ ಪಿರ್ಯಾದಿಯಾಗಿದ್ದಾರೆ. ಅವರ ಹೇಳಿಕೆಯನ್ನ ಪ್ರಾಸಿಕ್ಯೂಷನ್‌ ಸಾಕ್ಷಿ ಎನ್ನುತ್ತಿದೆ. ರಮೇಶ್ ಜಾರಕಿಹೊಳಿ ರೇಪ್ ಕೇಸ್ ಸಂತ್ರಸ್ತೆ ಬಗ್ಗೆ ಹೇಳಿದ್ದಾರೆ. ಆದರೆ ಆಕೆ ನೀಡಿರುವ ಹೇಳಿಕೆಯನ್ನು ಇಲ್ಲಿ ನೀಡುತ್ತಿಲ್ಲ. ರಮೇಶ್‌ ಸಮ್ಮತಿಯಿಂದ ಸೆಕ್ಸ್ ಅಂತಾ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. ಆದ್ದರಿಂದ ರಮೇಶ್ ಆರೋಪದಂತೆ ಸಿಡಿ ಸೃಷ್ಟಿ ವಾದ ಸುಳ್ಳಾಗುತ್ತದೆ.

ಇದನ್ನ ಎಸ್ಐಟಿ ಕೋರ್ಟ್ ಮುಂದೆ ಹೇಳುತ್ತಿಲ್ಲ. ಇದರಿಂದ ಎಸ್ಐಟಿ ತಂಡ ರಮೇಶ್ ಜಾರಕಿಹೊಳಿಯನ್ನ ರಕ್ಷಿಸಲು ತಮ್ಮ ಕಕ್ಷಿದಾರರು & ಯುವತಿಯನ್ನ ಸಿಕ್ಕಿಸುವ ಪ್ರಯತ್ನ ಮಾಡ್ತಿರೋದು ಸ್ಪಷ್ಟವಾಗಿದೆ. ನರೇಶ್ ಗೌಡ & ಶ್ರವಣ್ ವಿರುದ್ಧ ದಾಖಲಿಸಿರುವ ದೂರಲ್ಲಿ ಯಾವುದೇ ಹುರುಳಿಲ್ಲ. ದಿನೇಶ್ ಕಲ್ಲಹಳ್ಳಿ ದೂರಿನ ತನಿಖೆಯಿಂದ ನರೇಶ್‌ ಮನೆಯನ್ನ ಸರ್ಚ್ ಮಾಡಲಾಗಿದೆ. ಅದನ್ನ ಮಾಡಿದ ಮೇಲೆ ಅವನ ಮನೆ ವಿಳಾಸ ಪಾತ್ರದ ಬಗ್ಗೆ ಪತ್ತೆಯಾಗಿದೆ. ಆದರೆ ದೂರಿನಲ್ಲಿ ಉದ್ದೇಶಪೂರ್ವಕವಾಗಿ ತೋರಿಸಿಲ್ಲ. ಜಾರಕಿಹೊಳಿಯಿಂದ ಹಣ ವಸೂಲಿ ಪ್ರಯತ್ನ ಎನ್ನಲಾಗಿದೆ.

ಆರೋಪಿಗಳು ಜಾಮೀನಿಗೆ ಅರ್ಹ
ಈಗ ಪೊಲೀಸರು ಹಣ ವಸೂಲಿ ಮಾಡ್ತಿರುವ ಆರೋಪ ಇದೆ. ಈ ಮೂಲಕ ಪ್ರಕರಣದಲ್ಲಿ ಸ್ಥಿತ್ಯಂತರ ಮಾಡಲಾಗುತ್ತಿದೆ. ಒಂದೊಮ್ಮೆ ರಮೇಶ್ ಜಾರಕಿಹೊಳಿ ಹಣ ನೀಡಿದ್ದರೆ ಎಷ್ಟು ಕೊಟ್ಟಿದ್ದಾರೆ? ಯಾರಿಗೆ ಕೊಟ್ಟಿದ್ದರು ಅಂತಾ ಅವರಿಗೆ ಗೊತ್ತಿರಬೇಕು. ಆದರೆ ಅದನ್ನ ದೂರಿನಲ್ಲಿ‌ ಹೇಳಿಲ್ಲ. ಯಾವ ಮೋಡ್ ಮೂಲಕ ನೀಡಿದ್ರು ಅಂತಾ ಹೇಳಬೇಕಿತ್ತು. ಐಟಿ ಆಕ್ಟ್ 67ಎ ಅಡಿ ಕೇಸ್ ಹಾಕೋಕೆ ಆ ದೃಶ್ಯಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಅಪ್‌ಲೋಡ್‌ ಮಾಡಬೇಕು. ಆದರೆ ಯಾರು ಅಪ್ಲೋಡ್ ಮಾಡಿದ್ರು ಅಂತಾ ಹೇಳ್ತಿಲ್ಲ. ಹೀಗಾಗಿ ಸೆ. 67ಎ ಅಡಿ ಹೇಗೆ ಪ್ರಕರಣ ದಾಖಲಿಸಲಾಗಿದೆ? ಸೆಕ್ಷನ್‌ 67-ಎ ಇಲ್ಲವಾದರೆ ಉಳಿದೆಲ್ಲಾ ಆರೋಪಿಗಳು ಜಾಮೀನಿಗೆ ಅರ್ಹವಾಗಿವೆ.

ನ್ಯಾಯಾಧೀಶರು: ನಿಮ್ಮ (ರಮೇಶ್ ಜಾರಕಿಹೊಳಿ) ಪ್ರಕಾರ ನೀವು ಹಣ ಪಾವತಿಸಿದ್ದೀರಿ? ಯಾರಿಗೆ, ಯಾವಾಗ, ಎಷ್ಟು ಹಣ ಪಾವತಿಸಿದ್ದೀರಿ? ಇದನ್ನು ದೂರು ದಾಖಲಿಸುವಾಗ ಏಕೆ ಉಲ್ಲೇಖಿಸಿಲ್ಲ? ಜೊತೆಗೆ ರೇಪ್ ಕೇಸ್ ಹೇಳಿಕೆಯನ್ನು ನೀಡುತ್ತಿದ್ದೀರಿ. ಆದರೆ, ಎಸ್‌ಐಟಿ ಮುಂದೆ ನೀಡಿರುವ ಸ್ವಯಂಪ್ರೇರಿತ ಹೇಳಿಕೆಯನ್ನು ಏಕೆ ಲಗತ್ತಿಸಿಲ್ಲ? ಸಂತ್ರಸ್ತೆ 164 ಅಡಿ ದಾಖಲಿಸಿರುವ ಹೇಳಿಕೆಯನ್ನು ಏಕೆ ಸಲ್ಲಿಸಿಲ್ಲ?

ಸರ್ಕಾರದ ಎಸ್​​ಪಿಪಿ: ನಮ್ಮ ಬಳಿ ಸೂಕ್ತ ಸಾಕ್ಷ್ಯಾಧಾರ ಇದೆ ಅಂತಾ ಎಸ್​ಪಿಪಿ ಕಿರಣ್‌ ಜವಳಿ ನ್ಯಾಯಾಧೀಶರಿಗೆ ಉತ್ತರ ನೀಡಿದರು. ಎಲ್ಲವನ್ನೂ 10 ಪುಟಗಳ ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ ಅಂತಾ ಕೋರ್ಟ್​ಗೆ ತಿಳಿಸಿದರು.

ಎಸ್ಐಟಿ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಹೇಳಿದೆ ಎನ್ನಲಾದ ಅಂಶಗಳು

ನರೇಶ್ ಗೌಡ ಹಾಗೂ ಶ್ರವಣ್ ಇಡೀ ಪ್ರಕರಣದಲ್ಲಿ ಕಿಂಕ್​​ಪಿನ್​ಗಳಾಗಿದ್ದಾರೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಪ್ರಕರಣದಲ್ಲಿ ಆರೋಪಿಗಳು ಮಹತ್ವದ ಪಾತ್ರ ವಹಿಸಿದ್ದಾರೆ. ಎಸ್ಐಟಿ ಕೈಗೆ ಸಿಗದಂತೆ ನಾಲ್ಕೈದು ತಿಂಗಳಿಂದ ತಲೆಮರೆಸಿಕೊಂಡಿದ್ದಾರೆ. ನ್ಯಾಯ ಸಮ್ಮತ ತನಿಖೆಗೆ ಸಹಕಾರವನ್ನು ನೀಡಿಲ್ಲ.

ಹೆಸರನ್ನು ಹೇಳುವ ಮೊದಲೇ ಇವರು ಎಸ್ಕೇಪ್ ಆಗಿದ್ದಾರೆ. ಸಿಡಿ ರಿಲೀಸ್ ದಿನ ಆರೋಪಿಗಳ ಟೀಂ ಸಭೆ ನಡೆಸಿದೆ. ಸಂತ್ರಸ್ತೆ ಜೊತೆ ಆರೋಪಿಗಳ ಹೆಚ್ಚು ಬಾರಿ ಕರೆ ಮಾಡಿದ್ದಾರೆ. ಆಕೆ ಫೋನ್ ಸ್ವಿಚ್ ಆಫ್ ಆದ ಬಳಿಕ ಗೆಳೆಯನ ಲಿಂಕ್ ಸಿಕ್ಕಿದೆ. ಸಿಡಿ ರಿಲೀಸ್ ಆದ ಮಾರನೇ ದಿನ ಆರೋಪಿಗಳು ಸಭೆ ಮಾಡಿದ್ದಾರೆ. ಯುವತಿ ಹಾಗೂ ನಾಲ್ವರು ಯುವಕರು ಸೇರಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ಎಂಪೈರ್ ಹೋಟೆಲ್​​ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಡಿಯೋ ಸಿಡಿ ಬಹಿರಂಗದ ಬಗ್ಗೆ ಮಾತುಕತೆಯನ್ನ ಆರೋಪಿಗಳು ನಡೆಸಿದ್ದಾರೆ. ಆರೋಪಿಗಳು ಎಂಪೈರ್ ಹೋಟೆಲ್​​ನಲ್ಲಿ ಸಭೆ ನಡೆಸಿರುವ ದೃಶ್ಯಾವಳಿಗಳೇ ಸಾಕ್ಷಿ ಸಿಕ್ಕಿದೆ. ಅದಾದ ನಂತರ ಆಕೆಯನ್ನು ಸ್ನೇಹಿತನ ಜೊತೆ ಗೋವಾಗೆ ಕಳುಹಿಸಿದ್ದಾರೆ. ಆಕೆಯ ಸ್ನೇಹಿತನ ಜೊತೆ ಹಣಕೊಟ್ಟು ಕಳುಹಿಸಿರುವ ದೃಶ್ಯ ಸಿಕ್ಕಿದೆ. ಗೋವಾದಲ್ಲಿ ಸಹಾಯ ಮಾಡಲು ಸ್ನೇಹಿತ ಶಿವಕುಮಾರನ ಗೆಳತಿಯ ಬಳಕೆ ಮಾಡಲಾಗಿದೆ.

6 ತಿಂಗಳಿಗೆ ಹೋಟೆಲ್​ ಬುಕ್
ಕನಕಪುರ ಮೂಲದ ಗ್ರಾನೈಟ್ ಉದ್ಯಮಿ ಶಿವಕುಮಾರನ ಸ್ನೇಹಿತೆಯನ್ನ ಬಳಕೆ ಮಾಡಲಾಗಿದೆ. ಯುವತಿ ಹಾಗೂ ಆತನ ಬಾಯ್ ಫ್ರೆಂಡ್​ಗೆ ಅಲ್ಲಿ ಸಂಪೂರ್ಣ ವ್ಯವಸ್ಥೆ ಮಾಡಲಾಯಿತು. ಬರೋಬ್ಬರಿ ಆರು ತಿಂಗಳಿಗೆ ಹೋಟೆಲ್ ಬುಕ್ ಮಾಡಲಾಗಿತ್ತು. ಶಿವಕುಮಾರನ ಗೆಳತಿಯಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಆರೋಪಿಗಳಿಗೂ ಸಂತ್ರಸ್ತೆಗೂ ಅನೇಕ ತಿಂಗಳುಗಳ ಪರಿಚಯ
ಮಧ್ಯ ಕರ್ನಾಟಕದ ಖಾಸಗಿ‌ ಕಾರ್ಯಕ್ರಮದಲ್ಲಿ ಸಂತ್ರಸ್ತೆ ಇವರಿಗೆ ಪರಿಚಯ ಆಗಿದ್ದಾಳೆ. ನರೇಶ್ ಗೌಡ ಮಾಜಿ ಸ್ನೇಹಿತೆಯ ಮೂಲಕ ಪರಿಚಯವಾಗಿತ್ತು. ಆರೋಪಿಗಳು & ಸಂತ್ರಸ್ತೆ ಕಾಲ್ ಡಿಟೇಲ್ಸ್​​ನಲ್ಲಿ ಈ ಬಗ್ಗೆ ಪತ್ತೆಯಾಗಿದೆ.

ಅಲ್ಲದೇ ಆರೋಪಿಗಳಿಂದ ಯುವತಿಗೆ ಅನೇಕ ಬಾರಿ ಕರೆ ಮಾಡಲಾಗಿದೆ. ಅಲ್ಲದೇ ಆಕೆಯ ಅಕೌಂಟ್​ಗೆ ಲಕ್ಷಾಂತರ ಹಣವನ್ನ ವರ್ಗಾವಣೆ ಮಾಡಲಾಗಿದೆ. ಶ್ರವಣ್ & ನರೇಶ್ ಅಕೌಂಟ್​ನಿಂದ ಹಣ ವರ್ಗಾವಣೆ ಆಗಿದೆ. ಇದಕ್ಕೆ ಬ್ಯಾಂಕ್ ಸ್ಟೇಟ್​ಮೆಂಟ್ ದಾಖಲೆಗಳು ಲಭ್ಯವಾಗಿವೆ. ಆರೋಪಿಗಳ ಸ್ಯಾಲರಿ ಸಾವಿರದಲ್ಲಿದ್ರೆ, ವ್ಯವಹಾರ ಲಕ್ಷಾಂತರ ಇದೆ. ಈ ನಡುವೆ ಯುವತಿ ಮನೆ ಸರ್ಚ್ ಮಾಡಿದಾಗ 9.20 ಲಕ್ಷ ಪತ್ತೆಯಾಗಿದೆ. ಅದನ್ನ ಆರೋಪಿಗಳು ಕೊಟ್ಟ ಬಗ್ಗೆ ಹೇಳಿಕೆ ಸಾಕ್ಷಿಯಿದೆ. ಯುವತಿಯ ಸ್ನೇಹಿತನ ಹೇಳಿಕೆಯನ್ನೂ ದಾಖಲು ಮಾಡಲಾಗಿದೆ.

ಒಡೆದ ಮೊಬೈಲ್ ಲಭ್ಯ
ಯುವತಿಯ ಮನೆಯಲ್ಲಿ‌ ಒಡೆದ ಮೊಬೈಲ್ ಲಭ್ಯವಾಗಿದೆ. ಅದಕ್ಕೆ ಅನೇಕ ಸಿಮ್ ಬಳಕೆ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳು ಯುವತಿಯ ಭೇಟಿಯ ವಿಡಿಯೋ ಸಾಕ್ಷಿಗಳು ಲಭ್ಯವಾಗಿದೆ. ಕೆಲವೊಮ್ಮೆ ಹಣ ಹಂಚಿಕೆ ‌ಮಾಡಿಕೊಳ್ಳಲು ಭೇಟಿಯಾದ ಸಾಕ್ಷಿಗಳು ಸಿಕ್ಕಿವೆ. ಯುವತಿಗೆ ಇಷ್ಟವಿಲ್ಲದಿದ್ದರೂ ವಿಡಿಯೋ ವೈರಲ್ ಮಾಡಲಾಗಿದೆ. ವಿಡಿಯೋ ‌ವೈರಲ್ ಮಾಡಿದ ಬಳಿಕ ಆಕೆಗೆ ಸಂತೈಸಲು ಪರದಾಟ ಮಾಡಿದ್ದಾರೆ.

ಕೊನೆ ಕ್ಷಣದಲ್ಲಿ ನರೇಶ್ ಯುವತಿಗೆ 10 ಲಕ್ಷ ಕ್ಯಾಶ್ ಕೊಟ್ಟಿದ್ದ. ಬಳಿಕ ಆಕೆಯ ಗೆಳೆಯನ ಮೂಲಕ ಗೋವಾಗೆ ಕಳುಹಿಸಲಾಗಿದೆ. ಯುವತಿಗೆ ಬೇಗ ಶ್ರೀಮಂತರಾಗುವ ಆಸೆ ತೋರಿಸಲಾಗಿತ್ತು. ಶ್ರವಣ್ ಸಂತ್ರಸ್ತೆಯನ್ನ ಬ್ರೈನ್ ವಾಶ್ ಮಾಡಿದ್ದ. ನರೇಶ್ & ಶ್ರವಣ್ ದೊಡ್ಡ ಕಾರ್ಯಾಚರಣೆ ಮಾಡ್ತಿರುವುದಾಗಿ ಹೇಳಿದ್ದ. ಇದರಿಂದ ಬಹು ದೊಡ್ಡ ಮಟ್ಟಕ್ಕೆ ಹಣ ಬರುತ್ತೆ ಎಂದಿದ್ದರು. ಲೈಂಗಿಕ ಚಟುವಟಿಕೆ ಬಳಸಿಕೊಂಡು‌ ಮಾಡುವ ಬ್ಯುಸಿನೆಸ್ ಎಂದಿದ್ದರು. ಆಕೆಯನ್ನ ಮನವೊಲಿಸಿರುವುದಕ್ಕೆ ಸಾಕ್ಷಿಗಳು ಲಭ್ಯವಾಗಿದೆ. ಸರಿಯಾಗಿ ಕೆಲಸ ಇಲ್ಲದಿದ್ದರೂ ಧಿಡೀರ್ ಐಷಾರಾಮಿ ಲೈಫ್ ಸ್ಟೈಲ್ ಬಂದಿತ್ತು. ನರೇಶ್ & ಶ್ರವಣ್​ಗೆ ಸರಿಯಾದ ಕೆಲಸ, ಬ್ಯುಸಿನೆಸ್ ಇಲ್ಲ. ಆದರೆ ಇಬ್ಬರ ಒಂದು ವರ್ಷದ ಲೈಫ್ ಸ್ಟೈಲ್ ಹೇಳದಷ್ಟಿದೆ.

ಬ್ಲಾಕ್ ಮೇಲ್ ಸುಲಿಗೆ ಸಾಕ್ಷಿಗಳು ಲಭ್ಯ
ಇಬ್ಬರು ಅನೇಕ ಮಂದಿಗೆ ಬ್ಲಾಕ್ ಮೇಲ್ ಸುಲಿಗೆ ಸಾಕ್ಷಿಗಳು ಲಭ್ಯವಾಗಿದೆ. ಬಂದ ಹಣದಿಂದ ಶ್ರವಣ್ 17 ಲಕ್ಷ ಥಾರ್ ಕಾರ್ ಬುಕ್ ಮಾಡಿದ್ದ. ಸಹೋದರ ಚೇತನ್ ಹೆಸರಿನಲ್ಲಿ ಖರೀದಿಸಲು ಮುಂದಾಗಿದ್ದ. ನರೇಶ್ ಗೌಡ 23 ಲಕ್ಷದ ಮಹೇಂದ್ರ ಎಕ್ಸ್​ ಯುವಿ 500 ಖರೀದಿಗೆ ಮುಂದಾಗಿದ್ದ. ಇದಕ್ಕಾಗಿ ನರೇಶ್​ 1 ಲಕ್ಷ ಹಣ ಅಡ್ವಾನ್ಸ್ ಸಹ‌ ನೀಡಿದ್ದ. ನರೇಶ್ ಗೌಡ ಖರೀದಿಗೆ ಪುಲ್ ಕ್ಯಾಶ್ ಸಮೇತ ಹೋಗಿದ್ದ. ಆಗ ಕ್ಯಾಶ್​ಗೆ ಕಾರ್‌ ಮಾರಲು ಶೋ ರೂಂನಿಂದ ನಿರಾಕರಣೆಯಾಗಿದೆ.

ಈ ಬಗ್ಗೆ ಎರಡು ಶೋ ರೂಂ ಸಿಸಿಟಿವಿ ಸಾಕ್ಷಿಗಳು ಲಭ್ಯವಾಗಿದೆ. ವಿಡಿಯೋ ರೆಕಾರ್ಡ್ ಹಿಂದೆ ಶ್ರವಣ್ ನ ಕೈವಾಡ ಪತ್ತೆಯಾಗಿದೆ. ಮಂತ್ರಿ ಗ್ರೀನ್ ಸಿಸಿಟಿವಿ ವಿಡಿಯೋ ಸಾಕ್ಷಿ‌ ಸಹ ಲಭ್ಯವಾಗಿದೆ. ಅದರಲ್ಲಿ ಕೊನೆಯ 3 ನಿಮಿಷದ ಸಾಕ್ಷಿಗಳು ಲಭ್ಯವಾಗಿದೆ. ಶ್ರವಣ್ & ಯುವತಿಯ ನಡುವಿನ ಮಾತುಕತೆ ಸಿಡಿಆರ್ ಕೂಡ ಸಿಕ್ಕಿದೆ. ಪ್ರಚೋದನಾಕಾರಿಯಾಗಿ ಮಾತನಾಡಲು ಯುವತಿಗೆ ಸೂಚಿಸಿದ್ದರು.

ಸುಲಿಗೆ ಉದ್ದೇಶದಿಂದಲೇ ‌ಕೃತ್ಯ
ವಿಡಿಯೋ ಕಾಲ್, ಪೋನ್ ಕಾಲ್​​ನಲ್ಲಿ ‌ಮಾತಾಡಲು ಸೂಚನೆ ನೀಡಿದ್ದರು. ಈ ಬಗ್ಗೆ ಸೂಕ್ತ ಸಾಕ್ಷಿಗಳು ಲಭ್ಯವಿರುವುದಾಗಿ ಎಸ್​ಐಟಿ ಹೇಳಿದೆ ಎನ್ನಲಾಗಿದೆ. ಸುಲಿಗೆ & ಬ್ಲಾಕ್ ಮೇಲ್ ಉದ್ದೇಶದಿಂದಲೇ ‌ಕೃತ್ಯ ಮಾಡಿದ್ದಾರೆ ಅಂತಾ ಆರೋಪಿಸಲಾಗಿದೆ. ಅದಕ್ಕೆ ಪೂರಕವಾಗಿ ರಮೇಶ್ ಜಾರಕಿಹೊಳಿಯಿಂದ ಹಣ ಪಡೆಯಲಾಗಿದೆ. ಇದಕ್ಕೂ ಸೂಕ್ತ ಸಾಕ್ಷಾಧಾರಗಳು ಇದೆ ಅಂತಾ ಎಸ್ಐಟಿ ತಿಳಿಸಿದೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿಯಿಂದಲೂ ಹಣ ಸುಲಿಗೆಯಾಗಿದೆ. ರಮೇಶ್ ಜಾರಕಿಹೊಳಿ ಸಾಕ್ಷಿಗಳ ಸಮೇತ ಎಸ್ಐಟಿಗೆ ನೀಡಿದ್ದಾರೆ. ಹಣ ವಸೂಲಿಗೆ ಇವರಿಗೆ ಮತ್ತೊಬ್ಬ ವ್ಯಕ್ತಿಯೂ ಸಾಥ್ ನೀಡಿದ್ದಾರೆ. ನರೇಶ್ ಗೌಡ ಆ ವ್ಯಕ್ತಿಗೆ ರಮೇಶ್ ಜಾರಕಿಹೊಳಿ ಜೊತೆ ಮಾತಾಡಲು ಹೇಳಿದ್ದ. ಇದಕ್ಕೆ ಸಿಡಿಆರ್ ಸಾಕ್ಷಾಧಾರಗಳು ಲಭ್ಯವಾಗಿದೆ. ಪ್ರಕರಣದಲ್ಲಿ‌ ಮಾಜಿ‌ ಶಾಸಕ ಎಂ.ವಿ ನಾಗರಾಜ್ ಪ್ರಮುಖ ಸಾಕ್ಷಿ‌ ನೀಡಿದ್ದಾರೆ. ಈ ಕೇಸ್​ನಲ್ಲಿ ಇವರು ಪ್ರಮುಖ ಸಂಚುಕೋರರು ಅಂತಾ ಎಸ್ಐಟಿ ಉಲ್ಲೇಖಿಸಿದೆ ಎನ್ನಲಾಗಿದೆ.

The post CD ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು: ಕೋರ್ಟ್​ನಲ್ಲಿ ವಾದ-ಪ್ರತಿವಾದ ಹೇಗಿತ್ತು? appeared first on News First Kannada.

Source: newsfirstlive.com

Source link