ನವದೆಹಲಿ: ಸಿಡಿಎಸ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನದ ‘ಪ್ರಾಥಮಿಕ ತನಿಖಾ ವರದಿ’ಯನ್ನು ವಾಯುಪಡೆ ಸಾರ್ವಜನಿಕಗೊಳಿಸಿದೆ. ಭಾರತೀಯ ವಾಯು ಸೇನೆ ನೀಡಿರುವ ಮಾಹಿತಿ ಪ್ರಕಾರ, ‘ಪ್ರತಿಕೂಲ ಹವಾಮಾನವೇ’ ಹೆಲಿಕಾಪ್ಟರ್ ಪತನಕ್ಕೆ ಕಾರಣ. ಹಠಾತ್ ಪ್ರತಿಕೂಲ ಹವಾಮಾನದ ಪರಿಣಾಮ ಹೆಲಿಕಾಪ್ಟರ್ ಮೋಡಗಳನ್ನು ಪ್ರವೇಶಿಸಿತು. ಕಣಿವೆಯಲ್ಲಿನ ಹವಾಮಾನ ಪರಿಸ್ಥಿತಿಗಳಲ್ಲಿನ ಅನಿರೀಕ್ಷಿತ ಬದಲಾವಣೆಯಿಂದಾಗಿ ಕಾಪ್ಟರ್ ಮೋಡಗಳಿಗೆ ಪ್ರವೇಶಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಅಂತ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಪಿತೂರಿ ಆರೋಪ ತಳ್ಳಿ ಹಾಕಿದ ವಾಯುಪಡೆ
ಹೆಲಿಕಾಪ್ಟರ್ ಮೋಡಗಳಿಗೆ ಪ್ರವೇಶಿಸಿದ ಕೂಡಲೇ ಪೈಲೆಟ್ನ ಆತಂಕಕ್ಕೆ ಕಾರಣವಾಗಿದೆ. ನಂತರ ಭೂಪ್ರದೇಶ (CFIT) ನಿಯಂತ್ರಿತ ಸ್ಥಳದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಕಾರಣವಾಯಿತು. ಪರಿಣಾಮ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವಾಯಸೇನೆ ತಿಳಿಸಿದೆ. ತಾಂತ್ರಿಕ ದೋಷದಿಂದ, ಮಾನವ ನಿರ್ಮಿತ ದೋಷದಿಂದ ಅಥವಾ ಅಪಘಾತದ ಹಿಂದೆ ಪಿತೂರಿ ಇದೆ ಅನ್ನೋದನ್ನ ತನಿಖಾ ಸಮಿತಿ ತಳ್ಳಿಹಾಕಿದೆ.
CDS ಜನರಲ್ ಬಿಪಿನ್ ರಾವತ್ ಅವರ Mi17V5 ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿದುಕೊಳ್ಳಲು ವಾಯುಪಡೆಯು ಕೋರ್ಟ್ ಮೊರೆ ಹೋಗಿತ್ತು. ಅದರಂತೆ ತರಬೇತಿ ಕಮಾಂಡ್ನ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನ ರಚನೆ ಮಾಡಲಾಗಿದೆ.
14 ಮಂದಿ ದುರ್ಮರಣ
8 ಡಿಸೆಂಬರ್ 2021 ರಂದು, ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ತಮಿಳುನಾಡಿನ ಸೂಲೂರು ವಾಯುನೆಲೆಯಿಂದ ಊಟಿ ಬಳಿಯ ವೆಲ್ಲಿಂಗ್ಟನ್ನಲ್ಲಿರುವ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿಗೆ ಏರ್ ಫೋರ್ಸ್ ಮಿ-17 ವಿ5 ಹೆಲಿಕಾಪ್ಟರ್ನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 14 ಜನರು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು.
ಯಾವೆಲ್ಲಾ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಗಿದೆ..?
ವಾಯುಪಡೆಯ ಪ್ರಕಾರ, ತನಿಖಾ ಸಮಿತಿಯು ಎಲ್ಲಾ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ. ವಾಯುಪಡೆಯ ಸಂಬಂಧಪಟ್ಟ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಅಪಘಾತದ ಪ್ರತ್ಯಕ್ಷದರ್ಶಿಗಳಾಗಿರುವ ಸ್ಥಳೀಯರೊಂದಿಗೂ ಮಾತುಕತೆ ನಡೆಸಲಾಗಿದೆ. ಅಪಘಾತಕ್ಕೂ ಮುನ್ನ ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಫೋನ್ನ ಬಗ್ಗೆಯೂ ತನಿಖೆ ನಡೆಸಲಾಗಿದೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್ನ ‘ಬ್ಲ್ಯಾಕ್ ಬಾಕ್ಸ್’ನ ತನಿಖೆಯನ್ನೂ ಮಾಡಲಾಗಿದೆ. ಈ ಎಲ್ಲಾ ಮಾಹಿತಿಗಳನ್ನೂ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ, ಹೆಲಿಕಾಪ್ಟರ್ನ ಕಾಕ್ಪಿಟ್ ಧ್ವನಿ ರೆಕಾರ್ಡರ್ ಅನ್ನು ಸಹ ಹಲವಾರು ಬಾರಿ ತನಿಖೆ ಮಾಡಲಾಗಿದೆ. ವಾಯುಪಡೆಯ ಪ್ರಕಾರ, ತನಿಖೆಯ ಆಧಾರದ ಮೇಲೆ, ಸಮಿತಿಯು ಕೆಲವು ಸಲಹೆಗಳನ್ನು ನೀಡಿದ್ದು ಅದನ್ನು ಪರಿಗಣಿಸಲಾಗುತ್ತಿದೆ ಎಂದು ವರದಿ ನೀಡಿದೆ.