
Image Credit source: Hindustan Times
Yamunotri: ಹೃದಯಾಘಾತ ಮತ್ತು ಇತರ ವೈದ್ಯಕೀಯ ಕಾರಣಗಳಿಂದಾಗಿ ಚಾರ್ ಧಾಮ್ ಯಾತ್ರೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಇದುವರೆಗೆ 48ಕ್ಕೆ ತಲುಪಿದೆ.
ಮುಸೋರಿ: ಈಗಾಗಲೇ ಚಾರ್ಧಾಮ್ ಯಾತ್ರೆ (Char Dham Yatra) ಶುರುವಾಗಿದ್ದು, ಇದುವರೆಗೂ ಈ ಯಾತ್ರೆಗೆ ಹೊರಟಿದ್ದ 48 ಪ್ರಯಾಣಿಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಇದರ ನಡುವೆ ರಾಣಾ ಚಟ್ಟಿ ಮತ್ತು ಸಯನಾ ಚಟ್ಟಿ ನಡುವಿನ ಯಮುನೋತ್ರಿ ಹೆದ್ದಾರಿ ಕುಸಿದ ಪರಿಣಾಮ ಬುಧವಾರ ರಾತ್ರಿ ಯಮುನೋತ್ರಿ (Yamunotri) ಧಾಮದ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರ ಯಾತ್ರೆಗೆ ಅಡ್ಡಿಯುಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿ ಕುಸಿತವಾದ್ದರಿಂದ 3,000ಕ್ಕೂ ಹೆಚ್ಚು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ.
ಸಣ್ಣ ವಾಹನಗಳು ಮಾತ್ರ ಬಾರ್ಕೋಟ್ನಿಂದ ಜಾನ್ ಕಿ ಚಟ್ಟಿಗೆ ಹಾದುಹೋಗಲು ಸಾಧ್ಯವಾಯಿತು. ಆದರೆ ಬಸ್ಗಳು ಮತ್ತು ಇತರ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾವಿರಾರು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉತ್ತರಕಾಶಿಯಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. (Source)
ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಣಾ ಚಟ್ಟಿ ಮತ್ತು ಸಯನಾ ಚಟ್ಟಿ ನಡುವಿನ 15 ಮೀಟರ್ ರಸ್ತೆ ಕುಸಿದಿದೆ. ಇದರಿಂದ ಯಾತ್ರಿಕರನ್ನು ಹೊತ್ತೊಯ್ಯುವ ಬಸ್ಗಳು ಮತ್ತು ಇತರ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಸಣ್ಣ ವಾಹನಗಳು ಮಾತ್ರ ಈ ರಸ್ತೆಯಲ್ಲಿ ಹಾದುಹೋಗಲು ಸಾಧ್ಯವಾಯಿತು. ರಸ್ತೆ ಕುಸಿತವನ್ನು ಸರಿಮಾಡಲು ಒಂದು ಟ್ರ್ಯಾಕ್ಟರ್ ಟ್ರಾಲಿ, ಎರಡು ಜೆಸಿಬಿ ಯಂತ್ರಗಳು, ಒಂದು ಟಿಪ್ಪರ್, ಒಂದು ಪೋಕ್ಲ್ಯಾಂಡ್ ಮತ್ತು 15 ಕಾರ್ಮಿಕರು ಸ್ಥಳಕ್ಕೆ ಧಾವಿಸಿದ್ದು, ಇಂದು ರಾತ್ರಿ ವೇಳೆಗೆ ರಸ್ತೆ ಎಲ್ಲಾ ರೀತಿಯ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.