Chennai Rain: ಕುಂಭದ್ರೋಣ ಮಳೆಗೆ ತತ್ತರಿಸಿದ ಚೆನ್ನೈ; ಇಡೀ ನಗರ ಜಲಾವೃತ, ಐಎಂಡಿಯಿಂದ ರೆಡ್​ ಅಲರ್ಟ್​ ಘೋಷಣೆ | Heavy showers batter Chennai Flood alert issued in City By IMD LXK


Chennai Rain: ಕುಂಭದ್ರೋಣ ಮಳೆಗೆ ತತ್ತರಿಸಿದ ಚೆನ್ನೈ; ಇಡೀ ನಗರ ಜಲಾವೃತ, ಐಎಂಡಿಯಿಂದ ರೆಡ್​ ಅಲರ್ಟ್​ ಘೋಷಣೆ

ಜಲಾವೃತಗೊಂಡಿರುವ ಚೆನ್ನೈ

ಚೆನ್ನೈ: ಕುಂಭದ್ರೋಣ ಮಳೆಗೆ ಚೆನ್ನೈ (Chennai Rain) ತತ್ತರಿಸಿದೆ. ನಿನ್ನೆ ರಾತ್ರಿಯಿಂದಲೂ ಒಂದೇ ಸಮ ಮಳೆ ಸುರಿಯುತ್ತಿದ್ದು, ಇಂದು ಬೆಳಗ್ಗೆ 8.30ರವರೆಗೆ 21 ಸೆಂ.ಮೀ.ಮಳೆ ಬಿದ್ದಿದೆ. ಇಡೀ ನಗರದ ಬಹುತೇಕ ಪ್ರದೇಶ ಜಲಾವೃತಗೊಂಡಿದ್ದು, ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈಗಾಗಲೇ ರೆಡ್​ ಅಲರ್ಟ್​ ಘೋಷಿಸಲಾಗಿದ್ದು,  ಆದಷ್ಟು ಮನೆಯಲ್ಲೇ ಇರುವಂತೆ ಜನರಿಗೆ ಸೂಚನೆ ನೀಡಿದೆ. 2015ರಿಂದ ಈಚೆಗೆ ಚೆನ್ನೈನಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ.  

ಚೆನ್ನೈನ ಕೊರಟೂರ್​, ಪೆರಂಬೂರ್​, ಅಣ್ಣಾ ಸಲೈ, ಟಿ ನಗರ, ಗಿಂಡಿ, ಅಡ್ಯಾರ್​, ಪೆರುಂಗುಡಿ, ಒಎಂಆರ್​ ಸೇರಿದಂತೆ ಚೆನ್ನೈನ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲಿನ ಜನರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಳೆ, ಪ್ರವಾಹದ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಗಳೆಲ್ಲ ಜಲಾವೃತಗೊಂಡಿದ್ದರಿಂದ ಗಿಂಡಿ-ಕೋಯಂಬೆಡು ಮಾರ್ಗ ಸಂಚಾರ ಸಂಪೂರ್ಣ ಬಂದ್​ ಆಗಿದೆ.

ತಮಿಳು ನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಹಾಗೂ ಇತರ ಸಚಿವರು ಇಂದು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಪೊಂಡಿ ಜಲಾಶಯದಿಂದ 3 ಸಾವಿರ ಕ್ಯೂಸೆಕ್​ ನೀರು ಬಿಡಲಾಗುತ್ತಿದ್ದು, ಕೊಸಸ್ತಲೈಯಾರ್ ನದಿಯ ಕೆಳಭಾಗದಲ್ಲಿರುವ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಹಾಗೇ, ಭಾನುವಾರ ಮಧ್ಯಾಹ್ನ 1.30ರ ಹೊತ್ತಿಗೆ ಚೆಂಬರಂಬಾಕ್ಕಂ ಜಲಾಶಯದಿಂದ 500 ಕ್ಯೂಸೆಕ್​ ನೀಡು ಬಿಡುಗಡೆ ಮಾಡಲಾಗುವುದು. ಹೀಗಾಗಿ ಅಡ್ಯಾರ್​ ನದಿ ಸಮೀಪದ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗಿದೆ. ಕುಂದ್ರತ್ತೂರ್​ ಮತ್ತು ತಿರುನೀರ್ಮಲೈ ಪ್ರದೇಶಗಳ ತಗ್ಗು ಪ್ರದೇಶದ ಜನರನ್ನು ಅಲ್ಲಿಂದ ಸ್ಥಳಾಂತರ ಮಾಡುವ ನಿರೀಕ್ಷೆಯೂ ಇದೆ.

ಇದನ್ನೂ ಓದಿ: ನವೆಂಬರ್ 19ರಿಂದ 21ರವರೆಗೆ ಬಿಜೆಪಿಯ ಜನಸ್ವರಾಜ್ ಸಮಾವೇಶ; ಎಂಎಲ್​ಸಿ ಎನ್​ ರವಿಕುಮಾರ್ ಮಾಹಿತಿ

ಕಾನ್ಪುರದಲ್ಲಿ ಝಿಕಾ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆ; ತುರ್ತು ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್

TV9 Kannada


Leave a Reply

Your email address will not be published.