Chess Olympiad 2022: ಸದ್ಯ 3ನೇ ದಿನದಾಟದ ಅಂತ್ಯಕ್ಕೆ ಭಾರತೀಯ ಪುರುಷರ ಮತ್ತು ಮಹಿಳೆಯರ ಎ ತಂಡಗಳು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿಕೊಂಡಿದೆ. ಇನ್ನು ಪುರುಷರ ಬಿ ತಂಡವು 9ನೇ ಸ್ಥಾನದಲ್ಲಿದ್ದರೆ, ಸಿ ತಂಡವು 13ನೇ ಸ್ಥಾನ ಅಲಂಕರಿಸಿದೆ.
ಮಹಾಬಲಿಪುರಂನಲ್ಲಿ ಭಾನುವಾರ (ಜುಲೈ 31) ನಡೆದ 44ನೇ ಚೆಸ್ ಒಲಿಂಪಿಯಾಡ್ನ (Chess Olympiad 2022) ಮೂರನೇ ಸುತ್ತಿನ ಪಂದ್ಯದಲ್ಲಿ ಭಾರತ ಪುರುಷರ ತಂಡ ಎಲ್ಲಾ ಮೂರು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. ಭಾನುವಾರ ನಡೆದ ಸ್ಪರ್ಧೆಯಲ್ಲಿ ಭಾರತ ಎ ತಂಡವು ಗ್ರೀಸ್ ತಂಡವನ್ನು 3-1 ಅಂಕಗಳಿಂದ ಸೋಲಿಸಿದರೆ, ಭಾರತ ಬಿ ತಂಡವು ಸ್ವಿಟ್ಜರ್ಲೆಂಡ್ ಅನ್ನು 4-0 ಅಂತರದಿಂದ ಸೋಲಿಸಿತು. ಹಾಗೆಯೇ ಭಾರತ ಸಿ ತಂಡವು 3-1 ಅಂಕಗಳಿಂದ ಐಸ್ಲ್ಯಾಂಡ್ ತಂಡಕ್ಕೆ ಸೋಲುಣಿಸಿತು. ಮೂರನೇ ದಿನವು ನಿರೀಕ್ಷೆಗೆ ತಕ್ಕಂತೆ ಭಾರತ ಬಿ ತಂಡ ಟೂರ್ನಿಯಲ್ಲಿ ಪ್ರಾಬಲ್ಯ ಮುಂದುವರಿಸಿದೆ.
ಹರಿಕೃಷ್ಣ ಮತ್ತು ಅರ್ಜುನ್ ಎರಿಗೈಸಿ ಪೂರ್ಣ ಅಂಕಗಳನ್ನು ತಂದುಕೊಟ್ಟರೆ, ವಿದಿತ್ ಗುಜರಾತಿ ಮತ್ತು ಕೃಷ್ಣನ್ ಸಾಯಿಕಿರಣ್ ಡ್ರಾ ಸಾಧಿಸುವಲ್ಲಿ ಸಫಲರಾಗಿದ್ದಾರೆ. ಬಿ ತಂಡದಲ್ಲಿ ಡಿ ಗುಕೇಶ್, ನಿಹಾಲ್ ಸರಿನ್, ಆರ್ ಪ್ರಗ್ನಾನಂದ ಮತ್ತು ರೌನಕ್ ಸಾಧ್ವನಿ ಗೆಲುವು ಸಾಧಿಸಿದ್ದಾರೆ.
ಕ್ಯಾಟಲಾನ್ ಓಪನಿಂಗ್ನಲ್ಲಿ ಡಿಮಿಟ್ರಿ ಮಾಸ್ಟ್ರೋವಾಸಿಲಿಸ್ ವಿರುದ್ಧ ಹರಿಕೃಷ್ಣ ಅತ್ಯುತ್ತಮ ನಡೆಗಳ ಮೂಲಕ ಗಮನ ಸೆಳೆದರು. ಹರಿಕೃಷ್ಣ ಅವರು ತಮ್ಮ ತಂತ್ರಗಾರಿಕೆಯಲ್ಲಿ 24 ನೇ ತಿರುವಿನಲ್ಲಿ ಉತ್ತಮ ದಾಳಿ ನಡೆಸಿದರು. ಅಲ್ಲದೆ ಕಿಂಗ್ ಅನ್ನು ಟಾರ್ಗೆಟ್ ಮಾಡುವ ಮೂಲಕ ಎದುರಾಳಿಯನ್ನು ಇಕ್ಕಟಿಗೆ ಸಿಲುಕಿಸಿದ್ದರು. ಪರಿಣಾಮ ಡಿಮಿಟ್ರಿ 29 ನೇ ತಿರುವಿನಲ್ಲಿ ಹಿಂದೆ ಸರಿಯಲು ನಿರ್ಧರಿಸಿದರು.
ಈ ವಿಭಿನ್ನ ತಂತ್ರಗಾರಿಕೆ ಬಗ್ಗೆ ಮಾತನಾಡಿದ ಹರಿಕೃಷ್ಣ, “ನನ್ನ ಲೆಕ್ಕಾಚಾರಗಳು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾನು ಡಬಲ್ ಬಿಷಪ್ಗಳನ್ನು ತ್ಯಾಗ ಮಾಡುವ ಮೊದಲು ನಾನು ಸಾಕಷ್ಟು ಯೋಚಿಸಿದೆ. ಅದು ಚೆಕ್ಮೇಟಿಂಗ್ ಸ್ಥಾನದಲ್ಲಿ ಕೆಲಸ ಮಾಡದಿದ್ದರೆ, ನಾನು ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದೇನೆ ಎಂಬುದು ಗೊತ್ತಿತ್ತು. ಅಂತಿಮವಾಗಿ ನನ್ನ ನಡೆಯು ಗೆಲುವಿನತ್ತ ಕೊಂಡೊಯ್ದಿರುವುದು ಖಷಿ ನೀಡಿದೆ ಎಂದು ತಿಳಿಸಿದ್ದಾರೆ.
ಸದ್ಯ 3ನೇ ದಿನದಾಟದ ಅಂತ್ಯಕ್ಕೆ ಭಾರತೀಯ ಪುರುಷರ ಮತ್ತು ಮಹಿಳೆಯರ ಎ ತಂಡಗಳು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿಕೊಂಡಿದೆ. ಇನ್ನು ಪುರುಷರ ಬಿ ತಂಡವು 9ನೇ ಸ್ಥಾನದಲ್ಲಿದ್ದರೆ, ಸಿ ತಂಡವು 13ನೇ ಸ್ಥಾನ ಅಲಂಕರಿಸಿದೆ. ಹಾಗೆಯೇ ಭಾರತೀಯ ಮಹಿಳೆಯರ ಬಿ ತಂಡವು 11ನೇ ಸ್ಥಾನ ಪಡೆದಿದ್ದರೆ, ಭಾರತ ಸಿ ತಂಡವು 15ನೇ ಸ್ಥಾನದಲ್ಲಿದೆ.