
ಕಿರುತೆರೆ ನಟಿ ಚೇತನಾ ರಾಜ್
Chethana Raj Death: ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ನಟಿ ಚೇತನಾ ರಾಜ್ ಸಾವಿನ ಪ್ರಕರಣದ ತನಿಖೆ ನಡೆಸಲಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್, ಮರಣೋತ್ತರ ಪರೀಕ್ಷಾ ವರದಿ ಹಾಗೂ ವೈದ್ಯರ ಕಮಿಟಿ ನೀಡುವ ವರದಿ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಯುಡಿಆರ್ ಪ್ರತಿ ಟಿವಿನೈನ್ಗೆ ಲಭ್ಯವಾಗಿದೆ.
ಬೆಂಗಳೂರು: ಯುವನಟಿ ಚೇತನಾ ರಾಜ್ (Chethana Raj) ಮೃತಪಟ್ಟಿರುವ ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಯುಡಿಆರ್ ಪ್ರತಿ ಟಿವಿ9ಗೆ ಲಭ್ಯವಾಗಿದೆ. ಚೇತನಾ ಪರ ದೂರು ನೀಡಿರುವ ಅವರ ತಂದೆ ವರದರಾಜು, ವೈದ್ಯರ ನಿರ್ಲಕ್ಷ್ಯ ದಿಂದಲೇ ಮಗಳು ಚೇತನಾ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ. ಡಾ.ಸಾಹೇಬ್ ಗೌಡ ಶೆಟ್ಟಿ, ಡಾ.ಶೆಟ್ಟಿ ಕಾಸ್ಮಿಟಿಕ್ ಸೆಂಟರ್ ಮೇಲೆ ಗಂಭೀರ ಆರೋಪ ಮಾಡಲಾಗಿದ್ದು, ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಸಿಆರ್ ಪಿಸಿ 174(C) ಅಡಿ UDR (Unnatural Death Report) ದಾಖಲಾಗಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಲಿದ್ದು, ಆರೋಪ ಸಾಬೀತಾದಲ್ಲಿ ಐಪಿಎಸ್ ಸೆಕ್ಷನ್ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಎಫ್ಎಸ್ಎಲ್ ರಿಪೋರ್ಟ್, ಮರಣೋತ್ತರ ಪರೀಕ್ಷಾ ವರದಿ ಹಾಗೂ ವೈದ್ಯರ ಕಮಿಟಿ ನೀಡುವ ವರದಿ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಚೇತನಾ ಮೃತದೇಹ ಶ್ವಾಸಕೋಶ ಸೇರಿದಂತೆ ಕೆಲ ಅಂಗಾಂಗಗಳ ಮಾದರಿ ಸಂಗ್ರಹಿಸಲಾಗಿದ್ದು, ಅದರ ಮಾದರಿಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ಸಿಬ್ಬಂದಿ ಎಫ್ಎಸ್ಎಲ್ಗೆ ರವಾನೆ ಮಾಡಲಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್ಎಲ್ ರಿಪೋರ್ಟ್ ಈ ಪ್ರಕರಣದಲ್ಲಿ ಮಹತ್ವವಾಗಿದ್ದು, ಅದರ ವರದಿ ಬಂದ ಬಳಿಕವಷ್ಟೇ ಚೇತನಾ ಸಾವಿಗೆ ನಿಖರ ಕಾರಣವಾಗಿರುವ ಸಾಕ್ಷಿ ಲಭ್ಯವಾಗುವ ಸಾಧ್ಯತೆ ಇದೆ.