Column: ಎಲ್ರೂ ಬದುಕಬೇಕಲ್ವಾ?; ಇನ್ನು ಸಾಕಲ್ವಾ ಸಹಿಸಿಕೊಂಡಿದ್ದು… | Elroo Badukabekalva Column by Dr Sahana Prasad


Guts : “ಅಲ್ವೇ, ಈಗಲೂ ನೀವಿಬ್ಬರೂ ಪ್ರತಿಭಟಿಸಿ, ಇನ್ನು ಸಾಕು, ಈ ದೌರ್ಜನ್ಯ ಎಂದು ಹೊರನಡೆದರೆ ಅವರು ದಾರಿಗೆ ಬರುತ್ತಾರೆ. ಅದಕ್ಕೆ ಧೈರ್ಯ ಬೇಕು. ಮೊದಲಿಗೆ ವಿರಸವಾದರೂ ಆಮೇಲೆ ಸರಿ ಹೋಗುತ್ತದೆ” ಎಂದಳು ಚೈತ್ರ.

Patience : ‘ಅಲ್ವೇ, ಇನ್ನೂ ಇವಳೇ ಕೆಲಸಕ್ಕೆ ಬರುತ್ತಾ ಇದಾಳಾ? ಕಳ್ಳಿ, ಸುಳ್ಳಿ, ಬರೀ ಚಕ್ಕರ್ ಹಾಕ್ತಾಳೆ ಅಂತಿದ್ದೆ?’ ಗೆಳತಿ ಚೈತ್ರಾಳ ಮನೆಗೆ ಬಂದಿದ್ದ ಪವಿತ್ರಾ ಅವಳ ಕೆಲಸದ ಹೆಂಗಸನ್ನು ನೋಡಿ ಉದ್ಗಾರ ತೆಗೆದಳು. ನಿಟ್ಟುಸಿರಿಟ್ಟು ಚೈತ್ರ ನುಡಿದಳು ‘ಇವಳಿಗೆ ಸಾಲ ಕೊಟ್ಟಿರುವೆ. ಬೇಕಾದಷ್ಟು ಮನೆ ಸಾಮಾನು, ಸೀರೆ-ಬಟ್ಟೆ ಎಲ್ಲಾ ಕೊಟ್ಟು ಇಷ್ಟು ವರುಷದಿಂದ ನೋಡಿಕೊಂಡಿರುವೆ.ಈಗ ಇವಳನ್ನು ಬಿಡಿಸಿದರೆ ನನ್ನ ಹಣದ ಜತೆ ಹೊರಟುಹೋಗುತ್ತಾಳೆ. ಅವಳಿಗೆ ಕೊಟ್ಟಿರುವ ಸಾಮಾನು, ಅವಳ ಮೇಲೆ ವ್ಯಯಿಸಿರುವ ಹಣ, ವಸ್ತುಗಳು, ಎಲ್ಲವೂ ಹಾಳಾದ ಲೆಕ್ಕ, ಹೊಳೆಯಲ್ಲಿ ಹುಣಸೆಹಣ್ಣು ಕಿವಿಚಿದ ಹಾಗೆ!’ ಚಿತ್ರಾಳ ಮಾತು ಕೇಳಿ ಪವಿತ್ರ ಯೋಚಿಸತೊಡಗಿದಳು. ಸಂಬಂಧಗಳಲ್ಲೂ ಹಾಗೆಯೆ ಅಲ್ಲವಾ? ನಾವು ಬಹಳಷ್ಟು ಭಾವನೆಗಳು, ಸಮಯ, ಕೆಲವೊಮ್ಮೆ ಹಣ ಕೂಡ ಹೂಡಿರುತ್ತೇವೆ. ‘ಅಯ್ಯೋ, ಈ ಸಂಬಂಧಕ್ಕೆ ಇಷ್ಟೆಲ್ಲಾ ಸಮಯ ವ್ಯಯಿಸಿದ ಮೇಲೆ ಹೇಗೆ ತ್ಯಜಿಸುವುದು? ಇಷ್ಟು ಸಮಯ ಮಾಡಿದ್ದೆಲ್ಲವೂ ವ್ಯರ್ಥವಾಗುವುದಲ್ಲ’ ಎಂದು ಜೀರ್ಣವಾದ, ರಿಪೇರಿ ಮಾಡಲಾಗದ ಸಂಬಂಧವನ್ನು ನಿಭಾಯಿಸಲು ಹೆಣಗಾಡುತ್ತೀವಿ.
ಡಾ. ಸಹನಾ ಪ್ರಸಾದ (Dr. Sahana Prasad)

ಚೈತ್ರ ತಂದಿಟ್ಟ ಕಾಫಿ ಸವಿಯುತ್ತಾ ಪವಿತ್ರ ತನ್ನ ಮನಸ್ಸಿನ ಯೋಚನೆಗಳನ್ನು ಬಿಚ್ಚಿಟ್ಟಳು. ಅವಳು ಹಾಗೂ ಚೈತ್ರ ಚಿಕ್ಕವಯಸ್ಸಿನ ಗೆಳತಿಯರು. ಎಲ್ಲ ಗೆಳತಿಯರ ಮಧ್ಯೆ ಇರುವಂತೆ ಅವರಿಬ್ಬರ ನಡುವೆಯೂ ಜಗಳ, ಅಸೂಯೆ, ತಪ್ಪು ತಿಳುವಳಿಕೆಗಳು ಇತ್ಯಾದಿ ಬಂದು ಹೋಗಿದ್ದವು. ಆದರೂ ಇವರು ತಮ್ಮ ಗೆಳೆತನ ಉಳಿಸಿಕೊಂಡು ೨೦ ವರುಷಗಳಾಗಿತ್ತು. ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಂಡು, ಸಾಧ್ಯವಾದಾಗಲೆಲ್ಲಾ ಕರೆ ಮಾಡಿ ಮಾತನಾಡುತ್ತಿದ್ದರು. ಆದರೆ ಅವರ ಬದುಕಿನ ಧಾವಂತದಲ್ಲಿ ಭೇಟಿ ಆಗಲು ಸಮಯವೇ ಸಿಗುತ್ತಿರಲಿಲ್ಲ. ಬಹಳ ದಿನಗಳ ನಂತರ ಚೈತ್ರಾಳ ಫ್ಲಾಟ್ಗೆ ಬಂದ ಪವಿತ್ರ, ಅವಳು ದೂರು ಹೇಳುತ್ತಿದ್ದ ಕೆಲಸದ ಹೆಂಗಸು ಕಸ ಗುಡಿಸುತ್ತ ಇದ್ದದ್ದು ನೋಡಿ ಅಚ್ಚರಿಗೊಂಡಳು. ಕರೆ ಮಾಡಿದಾಗಲೆಲ್ಲಾ ತನ್ನ ಮನೆ ಕೆಲಸದಾಕೆಯ ಬಗ್ಗೆ ದೂರು ಹೇಳುತ್ತಿದ್ದಳು, ಅವಳು ಬೇಕಾಬಿಟ್ಟಿ ಕೆಲಸ ಮಾಡುವುದು, ಮನಬಂದಂತೆ ರಜೆ ಹಾಕುವುದು, ಮನೆ ಸಾಮಾನು ಕದಿಯುವುದು, ಎಲ್ಲವೂ ಪವಿತ್ರಳಿಗೆ ಗೊತ್ತಿತ್ತು. ಆದರೆ ಆಕೆ ಇನ್ನೂ ಇವಳ ಮನೆಯಲ್ಲಿ ಇದಾಳೆ ಎಂದು ಅಚ್ಚರಿಯಾಯಿತು ಪವಿತ್ರಳಿಗೆ. ಚೈತ್ರ ಕೆಲಸಕ್ಕೆ ಹೋಗಿ, ಅಡುಗೆ,ಮನೆ ವಾರ್ತೆ ನೋಡಿಕೊಂಡು, ಟೀನ್ ಏಜ್ ಮಗಳನ್ನು ಸುಧಾರಿಸುತ್ತಾ ಚೈತ್ರ ಬಸವಳಿದಿದ್ದಳು. ಕೆಲಸ ಮಾಡಿ, ಮನೆ ನೋಡಿಕೊಳ್ಳುವ ಬಹುತೇಕ ಹೆಂಗಸರಂತೆ ಯಾವಾಗಲೂ ಒತ್ತಡದಲ್ಲಿ ಇರುತ್ತಿದ್ದ ಅವಳಿಗೆ ಪವಿತ್ರಳ ಸ್ನೇಹ ತಂಗಾಳಿಯಂತೆ.

TV9 Kannada


Leave a Reply

Your email address will not be published.