Apology : “ಇಂದು ನಾನು ಇಲ್ಲಿರುವುದು ಒಬ್ಬರ ಕ್ಷಮೆಯ ಫಲ. ಇಲ್ಲದಿದ್ದರೆ ರಸ್ತೆಯಲ್ಲಿ ಪೊರ್ಕಿ ಹುಡುಗನಾಗಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಇರಬೇಕಿತ್ತು. ಚಿಕ್ಕ ಹುಡುಗರನ್ನು ಪೊಲೀಸರಿಗೆ ಒಪ್ಪಿಸಿದರೆ ಏನಾಗುತ್ತೆ ಗೊತ್ತಾ?”
Apology : ‘ಅವನನ್ನು ಕ್ಷಮಿಸಬಾರದಿತ್ತು. ಎಷ್ಟು ಕಷ್ಟ ಆಯ್ತು ಅವನಿಂದ’ ಅಪೂರ್ವ ಸಿಟ್ಟಿನಿಂದ ತಾಯಿಯನ್ನು ದುರುಗುಟ್ಟಿ ನೋಡಿದಳು. ‘ಕ್ಷಮಯಾ ಧರಿತ್ರಿ ನೀನು. ಯಾವುದೋ ಕಾಲದಲ್ಲಿ ಇದೀಯ. ಅವನು ಇನ್ನೂ ಎಷ್ಟು ಕಳ್ಳತನ ಮಾಡುತ್ತಾನೋ ಗೊತ್ತಿಲ್ಲ, ಈ ಸಲ ಬುದ್ಧಿ ಕಲಿಸಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದ.’ ಸಿಟ್ಟಿನಿಂದ ಅವಡುಗಚ್ಚಿದ ಅಪೂರ್ವ ಅಲ್ಲಿಂದ ಸರಿದುಹೋದಳು. ಮುಂಚಿನಿಂದ ಅವಳದು ರೋಷ, ದ್ವೇಷದ ಸ್ವಭಾವ. ಯಾರಾದರೂ ಏನಾದರೂ ಹೇಳಿದರೆ ಅದನ್ನೇ ಸಾಧಿಸಿ ದೊಡ್ಡದು ಮಾಡಿ ರಾದ್ಧಾಂತ ಮಾಡುವ ಸ್ವಭಾವ. ಅವಳನ್ನು ತಿದ್ದಲು ಸಾಕಷ್ಟು ಪ್ರಯತ್ನಪಟ್ಟರೂ ಆಗಿರಲಿಲ್ಲ. ತಾಯಿ ತುಂಬಾ ಮೃದು, ಎಲ್ಲದಕ್ಕೂ ತಕ್ಷಣ ಅಡ್ಜಸ್ಟ್ ಆಗುತ್ತಾರೆ ಎಂದು ಅವಳಿಗೆ ಸಿಟ್ಟು. ಸ್ವಭಾವತಃ ಕರುಣಾಮಯಿ, ಕೋಮಲ ಹೃದಯದ ಸುನಂದಾ ಅವರಿಗೂ, ಅಪೂರ್ವಳಿಗೂ ಈ ವಿಷಯದಲ್ಲಿ ಯಾವಾಗಲೂ ವಿರಸ. ಮಗಳ ಈ ಹಠ, ರೋಷದ ಬುದ್ಧಿ ಸುನಂದಾಗೆ ತಲೆ ನೋವಿನ ಸಂಗತಿಯಾಗಿತ್ತು.
ಡಾ. ಸಹನಾ ಪ್ರಸಾದ್ (Dr. Sahana Prasad)
ರೂಮಿನಲ್ಲಿ ಏನೋ ಎಸೆದ ಶಬ್ದ, ಜೋರಾಗಿ ಸಿಟ್ಟಿನಲ್ಲಿ ಅರಚಿದ ಮಾತುಗಳು ಅಪೂರ್ವಳ ಮನಸ್ಥಿತಿ ಸಾರಿ ಹೇಳಿದವು. ಬೆಳಗಿನಿಂದ ಈ ಮಾತುಗಳು ಬೇಕಾದಷ್ಟು ಸಲ, ಬೇರೆಬೇರೆ ರೀತಿಯಲ್ಲಿ ಹೇಳಿದ್ದಳು ಅಪೂರ್ವ. ಅದಕ್ಕೆ ಸುನಂದಾ ಉತ್ತರ ಕೊಟ್ಟಿದ್ದೂ ಆಗಿತ್ತು. ಆಗಿದ್ದು ಇಷ್ಟೇ, ಕೆಲಸದಾಕೆಯ ಮಗ ಅಪೂರ್ವಳ ಪರ್ಸ್ ಕದ್ದಿದ್ದ. ಅದರಲ್ಲಿ ಅವಳ ಆಫೀಸ್ ಕೀ, ಎರಡು ಮೊಬೈಲ್ಗಳು, 3000 ರೂಪಾಯಿಗಳು, ಲಿಪ್ಸ್ಟಿಕ್ಗಳು, ಇನ್ನೂ ಬೇಕಾದಷ್ಟು ಸಾಮಾನುಗಳು ಇದ್ದವು. ಹಿಂದಿನ ದಿನ ಬೆಳಗ್ಗೆ ತಾಯಿಯ ಜತೆ ಬಂದಿದ್ದ ಹುಡುಗ ಹೊರಗಡೆ ಪೋರ್ಟಿಕೊದಲ್ಲಿ ಕುಳಿತಿದ್ದ. ಅಪೂರ್ವಳಿಗೆ ರಜೆ ಇದ್ದಿದ್ದರಿಂದ ಅವಳು ಇನ್ನೂ ಎದ್ದೇ ಇರಲಿಲ್ಲ. ಹಿಂದಿನ ರಾತ್ರಿ ಲೇಟಾಗಿ ಬಂದವಳು, ಅಲ್ಲಿಯೇ ಸೋಫಾದ ಮೇಲೆ ಪರ್ಸ್ ಎಸೆದು ಮಲಗಲು ಹೋಗಿದ್ದಳು. ಇವನು ಯಾವ ಮಾಯದಲ್ಲಿ ಒಳಬಂದು ಪರ್ಸ್ ಎಗರಿಸಿದನೋ ಗೊತ್ತೇ ಆಗಲಿಲ್ಲ. ಅವಳು ನಿಧಾನವಾಗಿ ಎದ್ದು ಮೊಬೈಲ್ನಲ್ಲಿ ಮೆಸೇಜು ಬಂದಿದೇಯ ಅಂತ ನೋಡಲು ಹಾಲಿಗೆ ಬಂದರೆ ಪರ್ಸ್ ಇಲ್ಲ. ಆಫೀಸ್ ಕೀ, ಆಫೀಸ್ ಮೊಬೈಲ್ ಜತೆ ತನ್ನ ಸಾಮಾನುಗಳು ಬೇಕಾದಷ್ಟು ಇದ್ದವು. ಗಾಬರಿಯಿಂದ ಇಡೀ ಮನೆ ಜಾಲಾಡಿದರು ತಾಯಿ, ಮಗಳು. ಕೆಲಸದಾಕೆಗೆ ಫೋನ್ ಮಾಡಿ ಕರೆಸಿಕೊಂಡರು. ದುಡ್ಡು ಹೋದರೆ ಹೋಗಲಿ, ಮಿಕ್ಕೆಲ್ಲ ಸಾಮಾನು ತಂದುಕೊಡು ಎಂದು ಆದಷ್ಟು ನಯವಾಗಿ ಹೇಳಿದರು ಸುನಂದಾ. ಕೋಪದಿಂದ ಕುದಿಯುತ್ತಿದ್ದ ಅಪೂರ್ವ ಹೊರಬರಲಿಲ್ಲ. ಎಲ್ಲವೂ ಕೇಳಿ ಕೆಲಸದಾಕೆ ಸಿಟ್ಟಿನಿಂದ ಕೆಲಸ ಬಿಟ್ಟು ಹೋಗುತ್ತಾಳೆ ಎಂದು ಭಾವಿಸಿದರು ಆದರೆ ಆಕೆ ಅರೆಕ್ಷಣ ಸುಮ್ಮನಿದ್ದು, ಕೊಂಚ ಸಮಯ ಕೊಡಿ ಎಂದು ಹೊರಟಳು. “ಒಳ್ಳೆಯ ಮಾತಿನಲ್ಲೇ ಕೇಳು. ಹೊಡಿದು ಬಡಿದು ಮಾಡಬೇಡ “ಎಂದು ಹೇಳುತ್ತ ಇದ್ದ ಸುನಂದಾರ ಮಾತು ಕೇಳಿಸಿದರೂ ಸುಮ್ಮನೆ ಹೊರನಡೆದಳು.