Column: ಹಾದಿಯೇ ತೋರಿದ ಹಾದಿ: ‘ಎಂಟನೇ ತಲೆಮಾರಿನವಳಾದ ನಾನು ‘ದೇವದಾಸಿ ಪದ್ಧತಿ’ಯಿಂದ ಹೊರಬಂದೆ’ | Haadiye Torida Haadi colum breaking devadasi system by Jyothi S


Column: ಹಾದಿಯೇ ತೋರಿದ ಹಾದಿ: ‘ಎಂಟನೇ ತಲೆಮಾರಿನವಳಾದ ನಾನು ‘ದೇವದಾಸಿ ಪದ್ಧತಿ’ಯಿಂದ ಹೊರಬಂದೆ’

ಮಂಜುಳಾ ಮಾಳ್ಗೆ

Woman Empowerment : ಬಾಲ್ಯದಲ್ಲ ಆಟಕ್ಕೆ ಸಮಯವಿಲ್ಲ. ಸಮವಸ್ತ್ರಕ್ಕೆ ಹಣವಿಲ್ಲ. ಶೂ ಇಲ್ಲದ್ದಕ್ಕೆ ಕ್ಲಾಸಿನಿಂದ ಹೊರಗೆ. ಶೇಂಗಾ ಕೀಳುವುದು, ಬೇವಿನ ಬೀಜ ಆರಿಸುವುದರೊಂದಿಗೇ ಕಾಲೇಜು ಓದು ಸಾಗಿತು. ಸ್ವಾವಲಂಬಿಯಾದ ನಂತರವೇ 39ನೇ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾದೆ.

ಹಾದಿಯೇ ತೋರಿದ ಹಾದಿ : ದೇವದಾಸಿ ಪದ್ಧತಿಯ ವಿರುದ್ಧ ಹೋರಾಟ, ಜಾಗೃತಿ ಕಾರ್ಯಕ್ರಮ ಮತ್ತು ದೇವದಾಸಿ ಪದ್ಧತಿ ನಿಷೇಧ ಕಾಯ್ದೆಯ ಪರಿಣಾಮವಾಗಿ ಈ ಪದ್ಧತಿ ಇಂದು ಕ್ರಮೇಣ ನಶಿಸಿ ಹೋಗುತ್ತಿರುವುದು ಖುಷಿಯ ವಿಚಾರ. ಆದರೆ ಇಂತಹ ಪದ್ಧತಿಗಳಿಗೆ ಒಳಗಾದವರನ್ನು ಸಮಾಜಮುಖಿಯಾಗಿ ಬದುಕುವಂತೆ ಮಾಡಲು ಇನ್ನಷ್ಟು ತಿಳಿವಳಿಕೆಯ ಅಗತ್ಯವಿದೆ. ಈ ಪದ್ಧತಿಯಿಂದ ಹೊರಬಂದು ಚೆಂದದ ಬದುಕು ಕಟ್ಟಿಕೊಂಡವರಲ್ಲಿ ಮಂಜುಳ ಮಾಳ್ಗಿ ಕೂಡ ಒಬ್ಬರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದವರಾದ ಮೂವತ್ತೊಂಭತ್ತು ವರ್ಷದ ಇವರು, ಎಂಟು ತಲೆಮಾರುಗಳಿಂದಲೂ ದೇವದಾಸಿ ಪದ್ಧತಿಗೆ ಒಳಗಾಗಿದ್ದ ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಈ ಪದ್ಧತಿಯಿಂದ ಮುಕ್ತವಾಗಿಸಿದ್ದಾರೆ. ತಾವೂ ಘನತೆಯಿಂದ, ಸ್ವಾವಲಂಬಿಯಾಗಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಸುತ್ತಮುತ್ತಲಿನ ಹೆಣ್ಣುಮಕ್ಕಳೂ ಈ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದಾರೆ.
ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

(ಹಾದಿ 23)

‘ನಮ್ಮದು ಕೃಷಿ ಕುಟುಂಬ. ಮಾಳ್ಗೆ ನಮ್ಮ ಮನೆತನದ ಹೆಸರು. ಆಗ ನಮ್ಮ ಕೇರಿಯಲ್ಲಿ ಯಾರಿಗೂ ಮಾಳಿಗೆಮನೆ ಇರಲಿಲ್ಲ. ಗೋಡೆಮನೆ ಇದ್ದವು. ನಾವೊಬ್ಬರು ಮಾಳಿಗೆ ಹಾಕಿಸಿಕೊಂಡಿದ್ವಿ. ಹಾಗಾಗಿ ನಮ್ಮನ್ನು ಮಾಳ್ಗೆಯವರು ಎಂದು ಕರೆಯುತ್ತಿದ್ದರು. ನಮ್ಮ ಮುತ್ತಜ್ಜಿ ಶಾರೆಮ್ಮ ಹಾಗೂ ಹನುಮಂತವ್ವ, ಅಜ್ಜಿ ನಾಗಮ್ಮ. ನಮ್ಮ ಅಮ್ಮ ಲಲಿತಮ್ಮನಿಗೆ ನಾವು ನಾಲ್ಕು ಜನರು ಮಕ್ಕಳು. ನಮ್ಮದು ಸುಮಾರು ಏಳೆಂಟು ತಲೆಮಾರುಗಳಿಂದಲೂ ದೇವದಾಸಿ ಕುಟುಂಬ.’ ಎನ್ನುತ್ತಾರೆ ಮಂಜುಳ.

ಶಾರೆಮ್ಮ, ‘ನಮ್ಮ ಕಾಲದಲ್ಲಿ ದೇವದಾಸಿ ಹೆಣ್ಣುಮಕ್ಕಳು ಹೆಚ್ಚಿಗೆ ಇದ್ದರು. ಮದುವೆಯಾಗದಿದ್ದ ಹೆಣ್ಣುಮಕ್ಕಳನ್ನು ದೇವದಾಸಿಯಾರನ್ನಾಗಿ ಮಾಡುತ್ತಿದ್ದರು. ಆಂಜನೇಯನ ದೇವಸ್ಥಾನದಲ್ಲಿ ಕರೆದುಕೊಂಡು ಹೋಗಿ ಅರಿಶಿಣ ಹಚ್ಚಿ ಸ್ನಾನ ಮಾಡಿಸಿ, ಹಸಿರು ಸೀರೆ, ಬಳೆ ತೊಡಿಸುತ್ತಿದ್ದರು. ವಯಸ್ಸಾಗಿರುವ ಒಬ್ಬ ಜೋಗತಿ ಇರುತ್ತಿದ್ದಳು. ಕರಿಯ ಕಂಬಳಿ ಹಾಸಿ, ಹಣೆಗೆ ವಿಭೂತಿ ಹಚ್ಚಿ, ಜಡೆಗೆ ಮಲ್ಲಿಗೆ ದಂಡೆ ಮುಡಿಸಿ ಮದುಮಗಳಂತೆ ಸಿಂಗರಿಸುತ್ತಿದ್ದರು. ಇಲ್ಲಿ ಗಂಡಸರಿಗೆ ಪ್ರವೇಶವಿಲ್ಲ. ಎಲ್ಲವನ್ನೂ ಜೋಗತಿಯೇ ಮಾಡುವುದು.’

‘ಬುದ್ಧ ಬಸವಣ್ಣನ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಮಂತ್ರದ ಧಾಟಿಯಲ್ಲಿ ಉಚ್ಛರಿಸುತ್ತಿದ್ದರು. ಹಿಂದೂ ಸಂಪ್ರದಾಯಗಳಲ್ಲಿ ಮಾಂಗಲ್ಯಂ ತಂತು ನಾನೇನ… ಹೇಳುವಂತೆ. ಹವಳ, ಮುತ್ತು ಅದಕ್ಕೆ ಹೆಣ್ಣುದೇವರ ಒಂದು ಪದಕ ಹಾಕಿ ಮೊದಲು ಒಂದು ಗೂಟಕ್ಕೆ ಕಟ್ಟಿ ಪೂಜೆ ಮಾಡಿ ನಂತರ ವಯಸ್ಸಾದ ಜೋಗತಿಯರು ದೇವದಾಸಿಯಾಗುತ್ತಿರುವ ಹೆಣ್ಣುಮಕ್ಕಳ ಕತ್ತಿಗೆ ಕಟ್ಟುತ್ತಿದ್ದರು. ಒಂದೆರಡು ಮೂರು ತಾಸುಗಳಲ್ಲಿ ಕಾರ್ಯಗಳೆಲ್ಲವನ್ನು ಮುಗಿಸಿ ಎದೆಯಮೇಲೆ ಆಂಜನೇಯನ ಮುದ್ರೆ ಕಾಯಿಸಿ ಹಾಕುತ್ತಿದ್ದರು. ಹಾಗೆ ಮಾಡಿದರೆ ಮಾತ್ರ ಮೋಕ್ಷ ಸಿಗುತ್ತದೆ ಎನ್ನುವ ವಾಡಿಕೆ. ಹಾಗಾಗಿ ದೇವದಾಸಿಯರನ್ನು ನಿತ್ಯ ಸುಮಂಗಲಿ ಎನ್ನುತ್ತಿದ್ದರು. ಈಗ ಈ ಪದ್ಧತಿ ಅಸ್ತಿತ್ವದಲ್ಲಿಲ್ಲ’ ಎನ್ನುತ್ತಾರೆ.

ಮಂಜುಳ, ‘ನನ್ನ ಅಕ್ಕ, ನಾನು, ತಂಗಿ, ತಮ್ಮ ಹುಟ್ಟಿದ ಮೇಲೆ ಭಿಕ್ಷೆ ಬೇಡಿಯಾದರೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ನನ್ನ ತರಹ ಕಷ್ಟಪಡುವುದು ಬೇಡ ಎನ್ನುವ ಛಲ ಅಮ್ಮನಿಗಿತ್ತು. ನಮ್ಮಕ್ಕನಿಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ. ನಾನು ಓದಿನಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದೆ. ಹಾಗಾಗಿ ಓದಲು ನನಗೆ ಹೆಚ್ಚಿನ ಆದ್ಯತೆ ಕೊಟ್ಟರು. ಬಾಲ್ಯದಲ್ಲಿ, ಯೌವ್ವನದಲ್ಲಿ ಒಂದಾದರೊಂದರಂತೆ ಬರೀ ಜವಾಬ್ದಾರಿಗಳನ್ನು ಹೊತ್ತಿದ್ದೆ ಆಯ್ತು. ಬಾಲ್ಯದಲ್ಲಿ ಆಟ ಆಡೋಕೆ ಸಮಯವೇ ಇರುತ್ತಿರಲಿಲ್ಲ. ಶಾಲೆಗೆ ಸಮವಸ್ತ್ರ ಹೊಲೆಸಲು ಅಮ್ಮನ ಹತ್ತಿರ ಹಣವಿರಲಿಲ್ಲ. ಶೂ ಹಾಕಿಕೊಂಡು ಹೋಗಿಲ್ಲ ಅಂತ ಎಷ್ಟೋ ಸಲ ಹೊರಗಡೆ ನಿಂತಿದ್ದೇನೆ. ಕೊನೆಯ ಬೆಂಚಿನಲ್ಲಿ ಕೂರಿಸುತ್ತಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಮೂರು ಸಲ ಫೇಲ್ ಆಗಿ ನಂತರ ಪಾಸ್ ಮಾಡಿಕೊಂಡೆ. ಪಿಯುಸಿಯನ್ನು ಒಂದೇ ಸಲಕ್ಕೆ ಪಾಸ್ ಆಗಿದ್ದು ನನ್ನಲ್ಲಿ ಶಿಕ್ಷಣದ ಬಗ್ಗೆ ಭರವಸೆಯನ್ನು ಮೂಡಿಸಿತು.’

TV9 Kannada


Leave a Reply

Your email address will not be published.