Column: Qatar Mail; ಅರಬ್ ರಾಷ್ಟ್ರಗಳಲ್ಲಿ ದೇವರನಾಡಿನ ದೇವತೆಯರು | Qatar mail column by journalist Chaitra Arjunpuri


Nurse : ಏಜೆನ್ಸಿಗಳು ಬ್ರಿಟನ್, ಆಸ್ಟ್ರೇಲಿಯಾದಲ್ಲಿ ನರ್ಸ್ ನೌಕರಿ ಕೊಡಿಸಲು 12,000-16,000 ಡಾಲರ್ ಚಾರ್ಜ್ ಮಾಡುತ್ತವೆ. ಈ ನೌಕರಿಗಾಗಿ ಸಾಲ ಪಡೆದೊ, ಮನೆ-ಜಮೀನು ಅಡವಿಟ್ಟೋ, ಒಡವೆ ಮಾರಿಯಾದಾರೂ ಕೆಲಸ ಗಿಟ್ಟಿಸುತ್ತಾರೆ. ಸಾಲ ಪಡೆದ ಮೊತ್ತವನ್ನು ವಿದೇಶದಲ್ಲಿ ಆರೇಳು ತಿಂಗಳುಗಳಲ್ಲಿಯೇ ಸಂಪಾದಿಸಬಹುದಲ್ಲ!

Qatar Mail : ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆಂದು ಅತೀ ಹೆಚ್ಚು ಸಂಖ್ಯೆಯ ಭಾರತೀಯರನ್ನು, ಅದರಲ್ಲೂ ಪುರುಷರನ್ನು, ಪ್ರತಿ ವರ್ಷ ಕಳುಹಿಸಿಕೊಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆಯನ್ನು ಕೇರಳ ಇನ್ನೂ ಉಳಿಸಿಕೊಂಡಿದೆ, ಪ್ರಾಯಶಃ ಮುಂದೆಯೂ ಉಳಿಸಿಕೊಂಡಿರುತ್ತದೆ. ತಮ್ಮ ರಾಜ್ಯದಲ್ಲಿ ನೌಕರಿ ದೊರಕದೆ ಲಕ್ಷಾಂತರ ಮಂದಿ ಗಲ್ಫ್ ರಾಷ್ಟ್ರಗಳತ್ತ ಅನಾದಿ ಕಾಲದಿಂದಲೂ ಬರುತ್ತಿದ್ದಾರೆ. ಕೇರಳ, ಈ ರಾಷ್ಟ್ರಗಳ ಮೇಲೆ ಎಷ್ಟು ಅವಲಂಬಿಯಾಗಿದೆಯೆಂಬದು ಸಾಮಾನ್ಯರ ಊಹೆಗೆ ನಿಲುಕುವಂಥದ್ದಲ್ಲ. ಒಂದು ವೇಳೆ ಈ ತೈಲ ರಾಷ್ಟ್ರಗಳತ್ತ ವಲಸೆ ಸಾಧ್ಯವಾಗದೆ ಹೋಗಿದ್ದಲ್ಲಿ ಕೇರಳದ ಸ್ಥಿತಿ ಏನಾಗಿರುತ್ತಿತ್ತೊ ಊಹಿಸಲು ಸಾಧ್ಯವಿಲ್ಲ. ಆದರೆ ಪ್ರಶ್ನೆ ಅದಲ್ಲ. ಹೀಗೆ ವಲಸೆ ಬಂದವರು ಗಲ್ಫ್ ರಾಷ್ಟ್ರಗಳಲ್ಲಿ ಸುಖವಾಗಿದ್ದಾರೆಯೇ ಎಂದು ಒಮ್ಮೆ ಯಾರಾದರೂ – ವಲಸೆ ಬಂದವರ ಕುಟುಂಬದವರನ್ನೂ ಸೇರಿಸಿ – ಯೋಚಿಸಿದ್ದಾರೆಯೆ? ಗೊತ್ತಿಲ್ಲ. ಅವರಿಗೆ, ಅವರ ಕುಟುಂಬದವರಿಗೆ ಬೇಕಾಗಿರುವುದು ಇಷ್ಟು ಮಾತ್ರ: ‘ನನ್ನ ಪತಿ/ಪತ್ನಿ’, ‘ನನ್ನ ಮಗ/ಮಗಳು’, ‘ನನ್ನ ಸಹೋದರ/ಸಹೋದರಿ’, ‘ನನ್ನ ತಂದೆ/ತಾಯಿ’ ವಿದೇಶದಲ್ಲಿ, ಅದರಲ್ಲೂ ಗಲ್ಫ್ ನಲ್ಲಿ ನೌಕರಿ ಮಾಡುತ್ತಿದ್ದಾರೆ. ಆ ನೌಕರಿ ಕಸಮುಸುರೆ ಎತ್ತುವುದೊ, ಕಾರು ಓಡಿಸುವುದೊ, ಇನ್ನಿತರೆ ಕೂಲಿ ಕೆಲಸವಾದರೂ ಲೆಕ್ಕಕ್ಕಿಲ್ಲ, ಅಸಲಿಗೆ ಲೆಕ್ಕಕ್ಕೆ ಬರುವುದು ಅವರು ವಿದೇಶದಲ್ಲಿ ಕೆಲಸ ಮಾಡುತ್ತಿರುವುದು ಮಾತ್ರ!
ಚೈತ್ರಾ ಅರ್ಜುನಪುರಿ, ಪತ್ರಕರ್ತೆ

(ಪತ್ರ 12)

ಕೇರಳದಿಂದ ಅರಬ್ ರಾಷ್ಟ್ರಗಳಿಗೆ ವಲಸೆ ಬರುವ ಮಹಿಳೆಯರಲ್ಲಿ ಬಹುತೇಕರು ಅರಸಿ ಬರುವುದು ನರ್ಸ್ ಉದ್ಯೋಗವನ್ನು. ರಾಜ್ಯಕ್ಕೆ ಹರಿದು ಬರುವ ವಿದೇಶಿ ಹಣದಲ್ಲಿ ಶೇ. 20ರಷ್ಟು ಮಹಿಳೆಯರ, ಅದರಲ್ಲೂ ನರ್ಸ್​ಗಳ, ವರಮಾನ ಎಂದು KMS 2014 ವರದಿ ಮಾಡಿತ್ತು. ನಾವು ಮುಂಚೆ ವಾಸಿಸುತ್ತಿದ್ದ ವಿಲ್ಲಾ ಕಾಂಪೌಂಡಿನಲ್ಲಿ ನಾಲ್ಕು ಜನ ಕೇರಳದ ನರ್ಸ್​ಗಳು ತಮ್ಮ ಕುಟುಂಬಗಳೊಂದಿಗೆ ವಾಸವಾಗಿದ್ದರು. ಅವರಲ್ಲಿ ಇಬ್ಬರಿಗೆ ಪುಟ್ಟ ಮಕ್ಕಳಿದ್ದವು – ಒಂದು ವರ್ಷದ ಹೆಣ್ಣು ಮಗು ಒಬ್ಬಾಕೆಗೆ, ಒಂದೂವರೆ ವರ್ಷದ ಹೆಣ್ಣು ಮಗು ಇನ್ನೊಬ್ಬಾಕೆಗೆ. ಇಬ್ಬರ ಮನೆಯಲ್ಲೂ ಮಕ್ಕಳ ಜವಾಬ್ದಾರಿ, ಮನೆಕೆಲಸದ ಜವಾಬ್ದಾರಿ ಶ್ರೀಲಂಕಾದಿಂದ ಬಂದಿದ್ದ ಮನೆಕೆಲಸದವರದಾಗಿತ್ತು.

ನಾಲ್ವರು ನರ್ಸ್​ಗಳೂ ಮೊದಲು ತಾವು ಕತಾರಿಗೆ ಬಂದು, ನಂತರದಲ್ಲಿ ತಮ್ಮ ಗಂಡಂದಿರನ್ನೂ ಕರೆಸಿಕೊಂಡಿದ್ದರು. ಗಂಡಹೆಂಡತಿ ಇಬ್ಬರೂ ದುಡಿದು ಬೆಂಗಳೂರು, ತಿರುವನಂತಪುರಂ, ಕೊಚ್ಚಿ ಮುಂತಾದ ದೊಡ್ಡ ನಗರಗಳಲ್ಲಿ ಸೈಟು, ಮನೆಗಳನ್ನು ಖರೀದಿಸಿದ್ದರು. ತಮ್ಮ ಸ್ವಂತ ಊರುಗಳಲ್ಲಿ ‘ಗಲ್ಫ್ ಬಂಗಲೆ’ಗಳನ್ನು ಕಟ್ಟಿಸಿ ತಮ್ಮ ವಯಸ್ಸಾದ ತಂದೆ-ತಾಯಿಯ ಸುಪರ್ದಿಗೆ ಬಿಟ್ಟು ಬಂದಿದ್ದರು.

‘ಇಲ್ಲಿಗೆ ಬರದಿದ್ದರೆ ನಮಗೆ ಇಷ್ಟೆಲ್ಲಾ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ,’ ಎಂದಿದ್ದಳು, ಬೆಂಗಳೂರಿನಲ್ಲಿ ಮನೆ ಖರೀದಿಸಿ ಅದನ್ನು ತಮ್ಮವರಿಗೆ ಬಾಡಿಗೆಗೆ ಕೊಟ್ಟಿದ್ದ ಪಕ್ಕದ ಮನೆಯ ನರ್ಸ್ ಸುಮತಿ (ಹೆಸರು ಬದಲಾಯಿಸಲಾಗಿದೆ).

ಮತ್ತೊಬ್ಬ ನರ್ಸ್ ರಿಜಿ (ಹೆಸರು ಬದಲಾಯಿಸಲಾಗಿದೆ) ಎಂಟು ತಿಂಗಳ ಗರ್ಭಿಣಿ. ಚೊಚ್ಚಲ ಬಸುರಿ, ಹೆರಿಗೆ ರಜೆ ಹಾಕಿ ತಾಯಿಯ ಮನೆಗೆ ಹೋಗಬಾರದೆ ಎಂಬ ನನ್ನ ಪ್ರಶ್ನೆಗೆ, ‘ಹೆರಿಗೆ ನೋವು ಬರುವವರೆಗೂ ಕೆಲಸಕ್ಕೆ ಹೋಗುತ್ತೇನೆ. ಹೆರಿಗೆಗೆ ನನ್ನ ತಾಯಿ ಇಲ್ಲಿಗೇ ಬರುತ್ತಾರೆ,’ ಎಂದಿದ್ದಳು.

ರಜೆ ಹಾಕಿದರೆ ಸಂಬಳ ಕಡಿಮೆಯಾಗುತ್ತದೆ ಎನ್ನುವ ಆತಂಕ ಒಂದೆಡೆಯಾದರೆ, ‘ಪ್ರತಿ ತಿಂಗಳು ವರಮಾನದಲ್ಲಿ ಉಳಿತಾಯ ಮಾಡಿ ಅತ್ತೆಗೆ ಹಣ ಕಳುಹಿಸದಿದ್ದರೆ ಆಕೆಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ,’ ಎಂದು ಆಕೆ ವಿಷಾದದ ನಗೆ ನಕ್ಕಾಗ ಯಾಕಾದರೂ ಆಕೆಗೆ ಊರಿಗೆ ಹೆರಿಗೆಗೆ ಹೋಗಬಾರದೇ ಎಂದು ಕೇಳಿದೆನೋ ಎಂದು ಇರಿಸುಮುರಿಸಾಗಿತ್ತು.

ವಿಚಿತ್ರವೆಂದರೆ, ವಿದೇಶದಲ್ಲಿ ನೌಕರಿ ಗಿಟ್ಟಿಸುವುದು ಸುಲಭದ ಮಾತಲ್ಲ. ಏಜೆನ್ಸಿಗಳು ಬ್ರಿಟನ್ ಅಥವಾ ಆಸ್ಟ್ರೇಲಿಯಾದಲ್ಲಿ ನರ್ಸ್ ನೌಕರಿ ಕೊಡಿಸಲು ಏನಿಲ್ಲಾವೆಂದರೂ 12,000-16,000 ಡಾಲರ್ ಮೊತ್ತ ಚಾರ್ಜ್ ಮಾಡುತ್ತವೆ. ಈ ದೊಡ್ಡ ಮೊತ್ತವನ್ನು ನೀಡಿ ನೌಕರಿ ಪಡೆಯಲು ನರ್ಸ್​ಗಳಾಗಲಿ ಅವರ ಕುಟುಂಬದವರಾಗಲಿ ಹಿಂದೆ ಮುಂದೆ ನೋಡುವುದಿಲ್ಲ. ಬ್ಯಾಂಕ್​ಗಳಿಂದ ಸಾಲ ಪಡೆದೊ, ಇಲ್ಲವೇ ಮನೆ-ಜಮೀನು ಅಡವಿಟ್ಟೋ, ಇಲ್ಲವೇ ಒಡವೆಗಳನ್ನು ಮಾರಿಯಾದಾರೂ ಕೆಲಸ ಗಿಟ್ಟಿಸುತ್ತಾರೆ. ಸಾಲ ಪಡೆದ ಆ ಮೊತ್ತವನ್ನು ವಿದೇಶದಲ್ಲಿ ಆರೇಳು ತಿಂಗಳುಗಳಲ್ಲಿಯೇ ಸಂಪಾದಿಸಬಹುದು ಎನ್ನುವ ಮರ್ಮ ಅವರಿಗೂ ತಿಳಿದಿದೆ.

ತಾನು ಎಷ್ಟು ಸಂಬಳ ಪಡೆಯುತ್ತಿದ್ದೇನೆ ಎಂದು ಹೇಳಲು ಬಯಸದ ಮತ್ತೊಬ್ಬ ನರ್ಸ್ ಆಶಿ (ಹೆಸರು ಬದಲಾಯಿಸಲಾಗಿದೆ), ‘ನಾನು ನನ್ನ ಎರಡು ತಿಂಗಳ ಸಂಬಳವನ್ನು ಏಜೆನ್ಸಿಗೆ ನೀಡಿ ಇಲ್ಲಿಗೆ ಬಂದಿದ್ದೇನೆ. ನನ್ನ ಗಂಡ ನನ್ನನ್ನು ಇಲ್ಲಿಗೆ ಕಳುಹಿಸಲು ತೆಗೆದುಕೊಂಡಿದ್ದ ಸಾಲವನ್ನು ಆರೇ ತಿಂಗಳಿನಲ್ಲಿ ತೀರಿಸಿದೆ,’ ಎಂದು ಹೆಮ್ಮೆಯಿಂದ ಹೇಳಿದ್ದಳು.

ಅರಬ್ ರಾಷ್ಟ್ರಕ್ಕೆ ಬಂದ ಮೇಲೆ ಎಲ್ಲವೂ ಸುಖಾಂತ್ಯವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಹಾಗಿಲ್ಲ. ಪ್ರತಿ ದಿನ, ಪ್ರತಿ ಕ್ಷಣ, ಕಷ್ಟ ಎದುರಿಸುತ್ತಾರೆ, ತಮ್ಮ ಸುಖವನ್ನು ತ್ಯಾಗ ಮಾಡುತ್ತಾರೆ. ತಮ್ಮ ಮೇಲೆ ಅವಲಂಬಿತವಾಗಿರುವ ಕುಟುಂಬದವರ ಸಂತೋಷಕ್ಕೆ, ನೆಮ್ಮದಿಗೆ, ಹಗಲಿರುಳೂ ದುಡಿದು ಪ್ರತಿ ಕಾಸನ್ನೂ ಉಳಿತಾಯ ಮಾಡುತ್ತಾರೆ. ಮನೆಯವರು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ಸಂತಸಪಡಲಿ ಎಂದುಕೊಳ್ಳುತ್ತಾ ಇರುವ ನಾಲ್ಕು ಜೊತೆ ಬಟ್ಟೆಗಳಲ್ಲೇ ವರ್ಷ ದೂಡುತ್ತಾರೆ.

Qatar mail column Indians lifestyle in Qatar by journalist Chaitra Arjunpuri

ಫೋಟೋ ಚೈತ್ರಾ ಅರ್ಜುನಪುರಿ

ಪ್ರತಿ ವರ್ಷ ಕೇರಳಕ್ಕೆ 2.1 ಮಿಲಿಯನ್ (ಇದರಲ್ಲಿ ಶೇ. 90ರಷ್ಟು ವಲಸೆ ಹೋಗಿರುವುದು ಅರಬ್ ರಾಷ್ಟ್ರಗಳಿಗೆ) ಅನಿವಾಸಿ ಮಲಯಾಳಿಗಳಿಂದ ಏನಿಲ್ಲವೆಂದರೂ 550 ಮಿಲಿಯನ್ ಡಾಲರ್ ಹಣ ಹರಿದುಬರುತ್ತದೆ. ವಿದೇಶದಿಂದ ಹರಿಯುವ ಈ ಭಾರೀ ಮೊತ್ತ ರಾಜ್ಯದ ಹಣೆಬರಹವನ್ನೇ ಬದಲಾಯಿಸಿದೆ – ಹಳ್ಳಿಗಳಲ್ಲಿ ಗುಡಿಸಲುಗಳು ಮಾಯವಾಗಿ ಕಾಂಕ್ರೀಟ್ ಕಟ್ಟಡಗಳು ಮೇಲೆದ್ದಿವೆ, ಭತ್ತದ ಗದ್ದೆಗಳು ಕಣ್ಮರೆಯಾಗಿ ಗಗನಚುಂಬಿ ಕಟ್ಟಡಗಳೂ, ಪಾರ್ಕುಗಳು ಸ್ವಾಗತಿಸುತ್ತವೆ.

ಕೇರಳದ ಜನರನ್ನು ಗಲ್ಫ್ ರಾಷ್ಟ್ರಕ್ಕೇ ಏಕೆ ಹೋಗಬೇಕು ಎಂದು ಕೇಳಿ ನೋಡಿ: ‘ಅಲ್ಲಿ ನಮಗೆ ಒಂದಲ್ಲಾ ಒಂದು ಕೆಲಸ ದೊರಕುತ್ತದೆ, ಬೇರೆ ದೇಶಗಳ ಹಾಗಲ್ಲ. ಅಲ್ಲಿ ಸಂಪಾದನೆ ಮಾಡಿ ಒಳ್ಳೆಯ ಮನೆ ಕಟ್ಟಬೇಕು, ಮಕ್ಕಳನ್ನು ಓದಿಸಬೇಕು, ಮದುವೆ ಮಾಡಬೇಕು, ಕಾರಿನಲ್ಲಿ ಓಡಾಡಬೇಕು…’ ಎಂದು ಮಾರುದ್ದದ ಪಟ್ಟಿ ನೀಡುತ್ತಾರೆ. ಅಚ್ಚರಿಯೆಂದರೆ, ಪಟ್ಟಿಯಲ್ಲಿನ ಎಲ್ಲ ವಿಷಯಗಳು ಈಡೇರಿದರೂ ಅವರು ಭಾರತಕ್ಕೆ ಮರಳಲು ಇಚ್ಛಿಸುವುದಿಲ್ಲ. ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನೂ ಗಲ್ಫ್​ಗೆ ಕಳುಹಿಸುವ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ!

TV9 Kannada


Leave a Reply

Your email address will not be published.